ವಿದ್ಯಾರ್ಥಿ ಸ್ನೇಹಿ ಗ್ರಂಥಾಲಯ ನಿರ್ಮಿಸಲು ಡಿಸಿ ಸೂಚನೆ
ಹಾಸನ

ವಿದ್ಯಾರ್ಥಿ ಸ್ನೇಹಿ ಗ್ರಂಥಾಲಯ ನಿರ್ಮಿಸಲು ಡಿಸಿ ಸೂಚನೆ

July 20, 2018

ಹಾಸನ: ‘ಜಿಲ್ಲೆಯಲ್ಲಿನ ಗ್ರಂಥಾಲಯಗಳು ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲಕಾರಿಯಾಗುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪುಸ್ತಕಾಭಿರುಚಿ ಬೆಳೆಸುವ ಕೇಂದ್ರವಾಗಿ ಪರಿವರ್ತನೆ ಯಾಗಬೇಕು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸಭೆ ನಡೆಸಿದ ಅವರು, ನಗರ ಹಾಗೂ ಗ್ರಾಮೀಣ ಮಟ್ಟ ದಲ್ಲಿ ಗ್ರಂಥಾಲಯ ಜ್ಞಾನ ಭಂಡಾರ ಗಳಾಗುವ ಜೊತೆಗೆ, ವಿದ್ಯಾರ್ಥಿ ಸ್ನೇಹಿ ಯಾಗಿರಬೇಕು. ಅದಕ್ಕೆ ಅಧಿಕಾರಿಗಳು ಅಗತ್ಯವಾದ ಪೂರಕ ವಾತಾವರಣ ಕಲ್ಪಿಸಿ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಮಟ್ಟದ ಬಹು ತೇಕ ಗ್ರಂಥಾಲಯಗಳು ಸಾರ್ವಜನಿಕರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿವೆ. ಅಲ್ಲಿ ಸಾಕಷ್ಟು ಪುಸ್ತಕಗಳ ಲಭ್ಯತೆ ಮತ್ತು ಮೂಲ ಸೌಕರ್ಯ ಹೆಚ್ಚಾಗಬೇಕು. ಪ್ರತಿ ಗ್ರಾಮಕ್ಕೆ ಗ್ರಂಥಾಲಯ ಆದ್ಯತೆ ವಿಷಯ ವಾಗಬೇಕು. ಶಾಲೆ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಹೆಚ್ಚಿನ ಕೊಡುಗೆ ನೀಡಬೇಕು ಎಂದರು.

ಗ್ರಾಮ ಪಂಚಾಯಿತಿಗಳು ಭರಿಸಬೇಕಾಗಿರುವ ಶೇ. 6ರಷ್ಟು ಅನುದಾನದಲ್ಲಿ ಮಾಸಿಕ 3,000 ಹೆಚ್ಚುವರಿ ವೇತನವನ್ನು ಸೇರಿಸಿ ಗ್ರಂಥಪಾಲಕರಿಗೆ ಪ್ರತಿ ತಿಂಗಳು 10,000 ರೂ. ಪಾವತಿಸಬೇಕು. ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಗ್ರಂಥಾಲಯಗಳನ್ನು ಸಾರ್ವಜನಿಕರಿಗಾಗಿ ತೆರೆದಿರಬೇಕು. ಈ ನಿಟ್ಟಿನಲ್ಲಿ ಗ್ರಂಥಾಲಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.

ಸಂಚಾರಿ ಗ್ರಂಥಾಲಯ ಪ್ರಾರಂಭ: ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಒಂದು ಸಂಚರಿಸುವ ಗ್ರಂಥಾಲಯವನ್ನು ಈ ವರ್ಷದಿಂದಲೇ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಇದೇ ಸಂದರ್ಭ ದಲ್ಲಿ ತಿಳಿಸಿದರು. ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಡಿ.ಜೆ.ವೆಂಕಟೇಶ್ ಮಾತನಾಡಿ, ಗ್ರಂಥಾಲಯದ ಮೇಲ್ವಿ ಚಾರಕರಿಗೆ ನೀಡುತ್ತಿರುವ ಮಾಸಿಕ 7,000 ರೂ. ವೇತನ ಸಾಕಾಗುತ್ತಿಲ್ಲ ಎಂಬ ದೂರು ಬಂದಿದೆ. ಅದಕ್ಕಾಗಿ ಗ್ರಂಥಾಲಯವನ್ನು ಪೂರ್ಣಾವಧಿಗೆ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ಒಟ್ಟಾರೆ 273 ಗ್ರಂಥಾ ಲಯಗಳಿವೆ. ಅದರಲ್ಲಿ 260 ಗ್ರಾಮ ಪಂಚಾಯಿತಿ ಹಂತದಲ್ಲಿವೆ. 8 ಶಾಖಾ ಗ್ರಂಥಾಲಯಗಳು, 4 ಕೊಳಚೆ ಪ್ರದೇಶ ಹಾಗೂ ಒಂದು ಅಲೆಮಾರಿ ಗ್ರಂಥಾಲಯ ಗಳಿವೆ. ಬೇಲೂರಿನಲ್ಲಿ 45ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಖಾಗ್ರಂಥಾಲಯ ನೂತನ ಕಟ್ಟಡ ನಿರ್ಮಾಣವಾಗಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಸಣ್ಣಸ್ವಾಮಿ ಮತ್ತು ಇತರರು ಸಭೆಗೆ ಹಲವು ಸಲಹೆಗಳನ್ನು ನೀಡಿ ಚರ್ಚೆಯಲ್ಲಿ ಪಾಲ್ಗೊಂಡರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ಏಕ ರೂಪದ ನಾಮಫಲಕ

ಜಿಲ್ಲೆಯ ಎಲ್ಲಾ ಗ್ರಂಥಾಲಯಗಳಿಗೂ ಒಂದೇ ಸ್ವರೂಪದ ನಾಮಫಲಕ ಅಳವಡಿಸಬೇಕು. ಅದರ ಶಿರೋನಾಮೆ ಹಾಗೂ ಲಾಂಛನವನ್ನು ಆಕರ್ಷಕವಾಗಿ ರಚಿಸಲು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿ ದರು. ಗ್ರಾಮ ಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಲಭ್ಯವಿರುವ ಅನುದಾನದಲ್ಲಿ ಗ್ರಂಥಾಲಯ ಕಟ್ಟಡಗಳ ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಗ್ರಾಮ ಪಂಚಾಯತಿಗಳಿಗೆ ಸೂಚಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

ಆ.15 ರಿಂದ ಶಾಲೆಗಳಿಗೆ ಗ್ರಂಥಾಲಯ ಸೌಲಭ್ಯ

ಆರ್‍ಎಮ್‍ಎಸ್ ಯೋಜನೆಯಡಿ ಪ್ರತಿ ಪ್ರೌಢಶಾಲೆಗೆ ನೀಡಲಾಗುತ್ತಿರುವ 50,000 ರೂಪಾಯಿಗಳಲ್ಲಿ 10,000 ರೂಪಾಯಿಗಳನ್ನು ಗ್ರಂಥಾಲಯಕ್ಕಾಗಿ ಬಳಸಲಾಗುತ್ತಿದೆ. ಆದರೆ, ಪ್ರಾಥಮಿಕ ಶಾಲೆಗಳಲ್ಲಿ ಗ್ರಂಥಾಲಯ ಸೌಲಭ್ಯ ಇಲ್ಲ. ಹೀಗಾಗಿ, ಗ್ರಾಮ ಪಂಚಾಯಿತಿ ಹಂತದಲ್ಲಿ ಇರುವ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪುಸ್ತಕಗಳನ್ನು ಆವರ್ತನೆ ಆಧಾರದ ಮೇಲೆ ಶಾಲೆಗೆ ಹಂಚಿಕೆ ಮಾಡಿ ಮಕ್ಕಳಿಗೆ ಓದುವ ಆಸಕ್ತಿ ಮೂಡಿಸಬೇಕು. ಆ ಮೂಲಕ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ನೆರವಾಗಬೇಕು. ಆ. 15ರಿಂದಲೇ ಜಿಲ್ಲೆಯಾದ್ಯಂತ ಈ ಸೌಲಭ್ಯ ದೊರೆಯ ಬೇಕು ಎಂದು ಜಿಲ್ಲಾಧಿಕಾರಿ ರೋಹಿಣ ಸಿಂಧೂರಿ ಹೇಳಿದರು.

ಪ್ರತಿ ಪ್ರಾಥಮಿಕ ಶಾಲೆಗಳಲ್ಲಿ ವಾರದಲ್ಲಿ ಎರಡು ದಿನ ಗ್ರಂಥಾಲಯ ತರಗತಿಗಳು ಕಡ್ಡಾಯ ವಾಗಿ ಇರಬೇಕು. ಎಲ್ಲಾ ಶಾಲೆ ಗಳಿಗೂ ಗ್ರಂಥಾಲಯದ ಪುಸ್ತಕ ಗಳ ನೆರವು ದೊರೆಯುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಲಸ್ಟರ್ ಹಂತದಲ್ಲಿ ಜಿಲ್ಲೆಯ 2,592 ಪ್ರಾಥಮಿಕ ಶಾಲೆಗಳಲ್ಲಿ ತರಗತಿ ವೇಳಾಪಟ್ಟಿಯನ್ನು ಹೊಂದಾಣ ಕೆ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಗಳಿಗೆ ಸೂಚಿಸಿದರು. ಈ ವರ್ಷ ಲಭ್ಯವಿರುವ 25 ಲಕ್ಷ ರೂಪಾಯಿ ಗಳಲ್ಲಿ ಸಂಪೂರ್ಣವಾಗಿ 1ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿ ಗಳಿಗೆ ಅನುಕೂಲವಾಗುವ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯ ಗಳಿಗೆ ಸರಬರಾಜು ಮಾಡಿ ಎಂದು ನಿರ್ದೇಶನ ನೀಡಿದರು.

Translate »