ಶಾಸಕ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನಕ್ಕೆ ಆಗ್ರಹ 
ಮಂಡ್ಯ

 ಶಾಸಕ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನಕ್ಕೆ ಆಗ್ರಹ 

June 19, 2018

ಮಂಡ್ಯ: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಶಾಸಕ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡದ ಕ್ರಮ ಖಂಡಿಸಿ ಬೆಂಬಲಿಗರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ಮಂಡ್ಯ ಜಿಲ್ಲಾ ಗಂಗಾಮತಸ್ಥ, ಬೆಸ್ತ, ನಾಯಕ ಜನಾಂಗ, ಸತೀಶ್‍ಜಾರಕಿ ಹೊಳಿ ಅಭಿಮಾನಿ ಬಳಗ ಮತ್ತು ಮಾನವ ಬಂಧುತ್ವ ವೇದಿಕೆಯ ನೇತೃತ್ವದಲ್ಲಿ ನಗರದ ಸಂಜಯ ಸರ್ಕಲ್‍ನಲ್ಲಿ ಸಮಾವೇಶ ಗೊಂಡ ಕಾರ್ಯಕರ್ತರು ಕಾವೇರಿವನದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆವರೆಗೂ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿ ಸಿದರು.

ಮೆರವಣಿಗೆಯುದ್ದಕ್ಕೂ ಸತೀಶ್ ಜಾರಕಿ ಹೊಳಿ ಭಾವಚಿತ್ರ ಹಿಡಿದು ಸಚಿವ ಸ್ಥಾನ ನೀಡಲೇಬೇಕು ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪರಮೇಶ್ವರ್ ವಿರುದ್ಧ ಧಿಕ್ಕಾರ ಕೂಗಿದರು.
ಇದೇ ವೇಳೆ ಮಾತನಾಡಿದ ಸತೀಶ್ ಜಾರಕಿ ಹೊಳಿ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಎಂ.ಎಸ್.ರವಿ, ಸತೀಶ್ ಜಾರಕಿ ಹೊಳಿ ಅವರು ಸಮುದಾಯದ ಸರ್ವ ತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ ಏಳಿಗೆ ಸಹಿಸದ ಕೆಲವರು ಸಂಪುಟ ದಲ್ಲಿ ಸಚಿವ ಸ್ಥಾನ ಸಿಗದ ಹಾಗೆ ನೋಡಿ ಕೊಂಡಿದ್ದಾರೆ ಎಂದು ಆರೋಪಿಸಿದರು.

ಸತೀಶ್ ಜಾರಕಿಹೊಳಿ ಮುಂದಿನ 10 ವರ್ಷದಲ್ಲಿ ಮುಖ್ಯಮಂತ್ರಿಯಾಗುತ್ತೇನೆ ಎಂದು ನೀಡಿದ ಹೇಳಿಕೆಯಿಂದ ಕಾಂಗ್ರೆಸ್‍ನ ಕೆಲ ಹಿರಿಯ ನಾಯಕರು, ಪಿತೂರಿ ನಡೆಸಿ ಅವರಿಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ. ರಾಜಕೀಯವಾಗಿ ಅವರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರ ಶಕ್ತಿ ಏನೆಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ಕುತಂತ್ರಿ ಗಳಿಗೂ ಗೊತ್ತಾಗಲಿದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಅಬಕಾರಿ, ಜವಳಿ, ಸಣ್ಣ ಕೈಗಾರಿಕಾ ಸಚಿವರಾಗಿ ಉತ್ತಮ ಆಡಳಿತ ನೀಡಿದ್ದಾರೆ. ಈ ಎಲ್ಲಾ ಅಂಶ ಗಳನ್ನು ಪರಿಗಣಿಸಿ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಖಾಲಿ ಉಳಿಸಿ ಕೊಂಡಿರುವ ಖಾತೆ ನೀಡುವ ಮೂಲಕ ಅವರ ಬೆಂಬಲಕ್ಕೆ ನಿಲ್ಲಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ಎಲ್ಲಾ ತಾಲೂಕುಗಳಲ್ಲಿ ಶಾಸಕ ಸತೀಶ್ ಜಾರಕಿ ಹೊಳಿ ಅಭಿಮಾನಿ ಬಳಗ ಹೊಂದಿದ್ದು, ಇಡೀ ಸಮುದಾಯ ಇವರ ಬೆಂಬಲಕ್ಕಿದೆ. ಸಚಿವ ಹುದ್ದೆ ಇರಲಿ, ಬಿಡಲಿ, ನಾವೆಲ್ಲ ಇವರ ಬೆಂಬಲಕ್ಕಿರುತ್ತೇವೆ. ಸಮ್ಮಿಶ್ರ ಸರ್ಕಾರದಲ್ಲಿ 6 ಖಾತೆಗಳನ್ನು ಇಟ್ಟು ಕೊಂಡಿದ್ದು, ಇದರಲ್ಲಿ ಮಹತ್ವದ ಖಾತೆ ಯನ್ನು ಸತೀಶ್ ಜಾರಕಿಹೊಳಿ ಅವರಿಗೆ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ಮುಖಂಡರಾದ ಮಾರ್ಕಂಡಯ್ಯ, ರವಿ, ರೇವಣ್ಣ, ನಗರ ಸಭೆ ಸದಸ್ಯರಾದ ಆನಂತಪದ್ಮನಾಬ, ನಗರ ಸಭೆ ನಾಮನಿರ್ದೇಶಿತ ಸದಸ್ಯ ನಹೀಮ್, ದಿನೇಶ್, ಯಜಮಾನ್ ಹನುಮಂತ ರಾಜು, ಗಂಗಣ್ಣ, ಯುವ ಮುಖಂಡ ಮಂಜು, ಚಂದ್ರು, ಪುರುಷೋತ್ತಮ್ ನಾಗೇಂದ್ರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Translate »