ತ್ರೀವೇಣಿ ಸಂಗಮ ಸೌಂದರ್ಯೀಕರಣ: ನಿವೇಶನ ಕಳೆದುಕೊಂಡ ಕುಟುಂಬಕ್ಕೆ ಶಾಸಕರ ಭರವಸೆ
ಮೈಸೂರು

ತ್ರೀವೇಣಿ ಸಂಗಮ ಸೌಂದರ್ಯೀಕರಣ: ನಿವೇಶನ ಕಳೆದುಕೊಂಡ ಕುಟುಂಬಕ್ಕೆ ಶಾಸಕರ ಭರವಸೆ

September 19, 2018

ತಿ.ನರಸೀಪುರ: ತ್ರಿವೇಣಿ ಸಂಗಮ ಸೌಂದರ್ಯೀಕರಣ ಕಾಮಗಾರಿಗೆ ಒತ್ತುವರಿ ತೆರವು ಕಾರ್ಯಾಚರಣೆಯಿಂದಾಗಿ ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಬಳಿ ನಿವೇಶನ ಕಳೆದುಕೊಂಡ ಕುಟುಂಬಗಳನ್ನು ಭೇಟಿ ಮಾಡಿ, ಅಭಿವೃದ್ಧಿ ಕಾಮಗಾರಿಗೆ ಸಹಕರಿಸುವಂತೆ ಮನವೊಲಿಸಿದ ಶಾಸಕ ಎಂ.ಅಶ್ವಿನ್‍ಕುಮಾರ್ ಪರ್ಯಾಯ ನಿವೇಶನ ಕಲ್ಪಿಸುವ ಭರವಸೆಯನ್ನು ನೀಡಿದರು.

ಪಟ್ಟಣದ ರಾಷ್ಟ್ರೀಯ ಹೆದ್ಧಾರಿ 212ರ ಬಳಿ ಹೆದ್ಧಾರಿ ಸೇತುವೆ ರಕ್ಷಣೆ ಹಾಗೂ ತ್ರಿವೇಣಿ ಸಂಗಮ ಸೌಂದರ್ಯೀಕರಣಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 100 ಕೋಟಿ ರೂ.ಗಳ ಯೋಜನೆ ರೂಪಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 40 ಕೋಟಿ ರೂಗಳನ್ನು ಮಂಜೂರು ಮಾಡಿದ್ದರಿಂದ ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದ್ದ ನಾಲ್ಕು ಕುಟುಂಬಗಳು ಅಲ್ಲಿಯೇ ಪ್ರತಿಭಟನಾ ಧರಣಿಯನ್ನು ಮುಂದುವರೆಸಿದ್ದರಿಂದ ಶಾಸಕ ಎಂ.ಅಶ್ವಿನ್‍ಕುಮಾರ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಸಮಾಲೋಚನೆ ನಂತರ ಶಾಸಕ ಎಂ.ಅಶ್ವಿನ್‍ಕುಮಾರ್ ಮಾತನಾಡಿ, ಪಟ್ಟಣದ ಸೌಂದರ್ಯಕ್ಕೆ ಕಳಸಪ್ರಾಯವಾಗಿರುವ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು. ನಿವೇಶನ ಕಳೆದುಕೊಂಡಿರುವ ನಾಲ್ಕು ಕುಟುಂಬಗಳಿಗೆ ಪಟ್ಟಣ ಪ್ರದೇಶದಲ್ಲಿಯೇ ಸೂಕ್ತ ನಿವೇಶನವನ್ನು ಕಲ್ಪಿಸಲಾಗುವುದು. ಅಗತ್ಯವಿರುವ ನಿವೇಶನಗಳನ್ನು ಪರಿಶೀಲಿಸುವಂತೆಯೂ ತಹಶೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ತಹಶೀಲ್ದಾರ್ ಹೆಚ್.ಎಸ್.ಪರಮೇಶ್, ಪುರಸಭೆ ಮುಖ್ಯಾಧಿಕಾರಿ ಅಶೋಕ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ವಕ್ತಾರ ಕಟ್ಟೇಪುರ ಸಿದ್ದಪ್ಪ, ಮುಖಂಡರಾದ ಶಂಭುದೇವನಪುರ ಎಂ.ರಮೇಶ್, ಸುಂದರನಾಯಕ, ಬೂದಹಳ್ಳಿ ಸಿದ್ದರಾಜು, ಬನ್ನಹಳ್ಳಿ ಸೋಮಣ್ಣ, ರಾಜಣ್ಣ ಹಾಗೂ ಇನ್ನಿತರರು ಹಾಜರಿದ್ದರು.

Translate »