ಕ್ಷೇತ್ರ ಅಭಿವೃದ್ಧಿಗೆ ತಾಲೂಕು ಆಡಳಿತಕ್ಕೆ ಸರ್ಜರಿ
ಮೈಸೂರು

ಕ್ಷೇತ್ರ ಅಭಿವೃದ್ಧಿಗೆ ತಾಲೂಕು ಆಡಳಿತಕ್ಕೆ ಸರ್ಜರಿ

August 5, 2018

ತಿ.ನರಸೀಪುರ: ತಿ.ನರ ಸೀಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವುದು ನನ್ನ ಕನಸಿನ ಯೋಜನೆಯಾಗಿದ್ದು, ಇದಕ್ಕಾಗಿ ತಾಲೂಕು ಆಡಳಿತಕ್ಕೆ ಮೇಜರ್ ಸರ್ಜರಿ ಅವಶ್ಯಕತೆಯಿದೆ ಇದೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಹೇಳಿದರು.

ಕ್ಷೇತ್ರಕ್ಕೆ ತಾವು ಮಾಡಬೇಕೆಂದಿರುವ ಅಭಿವೃದ್ದಿ ಕಾರ್ಯಗಳ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದರು. ಕ್ಷೇತ್ರದ ಸಮಗ್ರ ಅಭಿವೃದ್ದಿಯ ಚಿತ್ರಣ ನನ್ನ ಪರಿಕಲ್ಪನೆಯಾಗಿದ್ದು, ಇದನ್ನು ಕಾರ್ಯರೂಪಕ್ಕೆ ತರಲು ಕೆಲವೊಂದು ಇಲಾಖೆಗಳ ಅಧಿಕಾರಿಗಳ ಬದಲಾವಣೆ ಅಗತ್ಯವಿದೆ. ಕೆಲ ಅಧಿಕಾರಿಗಳು ನನ್ನ ಸರಿಸಮಾನಾಗಿ ಕೆಲಸ ಮಾಡಲಾಗದ ಕಾರಣ ಅಭಿವೃದ್ದಿಯೆಡೆ ಚಿಂತಿಸುವ ಅಧಿಕಾರಿಗಳನ್ನು ಇಲ್ಲಿಗೆ ನಿಯೋಜನೆ ಮಾಡಿಕೊಳ್ಳಲಾಗುವುದು.

ಈಗಷ್ಟೇ ಅಧಿಕಾರವಹಿಸಿಕೊಂಡಿರುವ ನಾನು ಕ್ಷೇತ್ರದ ಜನತೆಯ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದ್ದು, ಈಗಾಗಲೇ ಮೇಜರ್ ಸಮಸ್ಯೆ ಗಳನ್ನು ಪಟ್ಟಿ ಮಾಡಲಾಗಿದೆ. ತಿ.ನರಸೀಪುರ ಪಟ್ಟಣದಲ್ಲಿ ನೂರಾರು ಮಂದಿ ಕ್ರೀಡಾಭಿಮಾನಿಗಳಿದ್ದು, ಅವರ ಸದ್ಬಳಕೆಗೆ ಕ್ರೀಡಾಂಗಣವಿಲ್ಲದಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಈಗಾಗಲೇ ಸ್ಥಳವೊಂದನ್ನು ಮಿನಿ ಕ್ರೀಡಾಂಗಣ ನಿರ್ಮಾಣಕ್ಕೆ ಗುರುತಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ರೂಪು ರೇಷೆಗಳ ತಯಾರಿಸಲು ಸೂಚನೆ ನೀಡಲಾಗಿದೆ ಎಂದರು.

ಬನ್ನಹಳ್ಳಿಹುಂಡಿ ಏತ ನೀರಾವರಿ ಕಾಮಗಾರಿ ಮುಗಿದಿದೆಯಾದರೂ ಮೋಟಾರ್ ಕೆಟ್ಟಿದೆ ಎಂಬ ಹಿನ್ನೆಲೆಯಲ್ಲಿ ನೀರು ಸರಬರಾಜಾ ಗುತ್ತಿಲ್ಲ. ಮೋಟಾರ್ ದುರಸ್ತಿ ಮಾಡಿಸುವುದು ಕಷ್ಟದ ಕೆಲಸ ವೇನಲ್ಲ. ರೈತರ ಶೇಂಗಾ ಬೆಳೆಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಕೂಡಲೇ ಸರಬರಾಜು ಮಾಡಲು ಕ್ರಮವಹಿಸಲಾಗುವುದು ಎಂದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾನಾ ತೊಂದರೆಗಳಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಅಲ್ಲಿನ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಆರೋಗ್ಯ ಕಾರ್ಡ್ ಪಡೆಯಲು ಜನತೆ ಪಡುತ್ತಿರುವ ಪರಿಪಾಟಲು ನಿವಾರಣೆಗೆ ಮತ್ತೆರೆಡು ಕಾರ್ಡ್ ಪ್ರೀಟಿಂಗ್ ಮಿಷನ್ ತರಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಪಟ್ಟಣದ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಬಳಿ ಹತ್ತಾರು ವರ್ಷಗಳಿಂದ ವಾಸವಾಗಿರುವ ಪ.ವರ್ಗಕ್ಕೆ ಸೇರಿದ ಕುಟುಂಬವೊಂದನ್ನು ದೇವಸ್ಥಾನದ ಸೌಂರ್ಯೀಕರಣಗೊಳಿಸುವ ಸಂಬಂಧ ತೆರವುಗೊಳಿಸಲಾಗಿದ್ದು, ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸುವಲ್ಲಿ ತಾಲೂಕು ಆಡಳಿತ ಮುಂದಾಗಿಲ್ಲ. ಇದೊಂದು ಸವಾಲಿನ ಕೆಲಸವೇ ಆಗಿದ್ದು ಶತಾಯಗತಾಯ ಅ ನಿರಾಶ್ರಿತ ಕುಟುಂಬಕ್ಕೆ ವಸತಿ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿ ಗಳೊಂದಿಗೆ ಚರ್ಚಿಸಿ ಸವಲತ್ತು ಕಲ್ಪಿಸಲಾಗುವುದೆಂದರು.

ಕೊಟ್ಯಾಂತರ ರೂ ವ್ಯಯಿಸಿ ನಿರ್ಮಿಸಿರುವ ಪುರಸಭಾ ತರಕಾರಿ ಮಾರುಕಟ್ಟೆ ನಿಷ್ಪ್ರಯೋಜಕವಾಗಿದ್ದು, ಮಳಿಗೆ ಹಂಚಿಕೆ ಮಾಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದಕ್ಕೆ ಗರಂ ಆದ ಶಾಸಕರು ಶೀಘ್ರವೇ ತರಕಾರಿ ವ್ಯಾಪಾರಸ್ಥರಿಗೆ ಮಳಿಗೆ ಹಂಚಿಕೆ ಮಾಡಲು ಕ್ರಮವಹಿಸಲಾಗುವುದೆಂದರು.

ಬಹುಮುಖ್ಯವಾಗಿ ಚುನಾವಣಾ ಪೂರ್ವದಲ್ಲಿ ಮರಳು ಕೂಲಿ ಕಾರ್ಮಿಕರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲು ಬದ್ದ ರಾಗಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯ ವರೊಂದಿಗೆ ಚರ್ಚಿಸಿ ಬಡ ಕೂಲಿ ಕಾರ್ಮಿಕರು, ಸರ್ಕಾರದಿಂದ ಮಂಜೂರಾಗುವ ಆಶ್ರಯ ಮನೆ, ಶೌಚಾಲಯ ಮತ್ತಿತರ ಕಾಮಗಾರಿ ಕೈಗೊಳ್ಳಲು ಎತ್ತಿನಗಾಡಿಯಲ್ಲಿ sಸಾಗಾಣಿಕೆ ಮಾಡಲು ಅವಕಾಶ ಮಾಡಿಕೊಡುವ ಮೂಲಕ ತಮ್ಮ ಮಾತು ಉಳಿಸಿಕೊಳ್ಳಲಾಗುವು ದೆಂದರು. ಅಲ್ಲದೇ ಕಾರ್ಯಕರ್ತರು ನನ್ನ ಮೇಲೆ ಯಾವುದೇ ಅಪಾರ್ಥ ಕಲ್ಪನೆಗೆ ಅವಕಾಶಮಾಡಿ ಕೊಡಬಾರದು. ನನ್ನನ್ನು ನಂಬಿದ ಕಾರ್ಯಕರ್ತರಿಗೆ ತಾನೆಂದೂ ದ್ರೋಹ ಬಗೆಯುವುದಿಲ್ಲ ಎಂದು ಹೇಳುವ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಶಾಸಕರು ಬದಲಾಗಿದ್ದಾರೆಂದು ಅರ್ಥೈಸಿ ಕೊಂಡಿದ್ದ ಕೆಲ ಕಾರ್ಯಕರ್ತರಿಗೆ ಅಭಯ ನೀಡಿದರು.

Translate »