ಅರಕಲಗೂಡು: ಕಳೆದ 4 ವರ್ಷಗಳಲ್ಲಿ ಕೇಂದ್ರದಿಂದ ಯಾವುದೇ ಅಭಿವೃದ್ಧಿ ಕಾಣದ ಕರ್ನಾಟಕ ರಾಜ್ಯ ಮೋದಿ ಸ್ಪರ್ಧೆಯಿಂದಾದರೂ ಅಭಿವೃದ್ಧಿ ಆಗುತ್ತಾ ನೋಡೋಣ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಲೇವಡಿ ಮಾಡಿದ್ದಾರೆ.
ಪಟ್ಟಣದ ದಸರಾ ಉದ್ಘಾಟನಾ ಕಾರ್ಯ ಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ರಾಜ್ಯದಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ವದಂತಿಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.
ರಾಜ್ಯದ ಅಭಿವೃದ್ಧಿಯ ಬಗ್ಗೆ ಹಲವು ಬಾರಿ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನೂ ಅವರು ಕೈಗೊಳ್ಳುತ್ತಿಲ್ಲ. ಅವರು ಲೋಕಸಭೆಗೆ ರಾಜ್ಯದಿಂದ ಸ್ಪರ್ಧಿಸಿದರೆ ಆಗಲಾದರೂ ರಾಜ್ಯವನ್ನು ಅಭಿವೃದ್ಧಿ ಮಾಡುತ್ತಾರೋ ನೋಡೋಣ. 5 ವರ್ಷ ಪೂರೈಸುತ್ತಿರುವ ಪ್ರಧಾನಿ ಮೋದಿ, ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಭ್ಯರ್ಥಿ ಅಂತಿಮವಾಗಿದ್ದಾರೆ: ರಾಮನಗರ ಮತ್ತು ಮಂಡ್ಯದ ಉಪ ಚುನಾವಣೆ ಯಲ್ಲಿ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ರಾಮನಗರ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿ ಅಂತಿಮವಾಗಿದ್ದು, ಮಂಡ್ಯ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ. ಇನ್ನೆರಡು, ಮೂರು ದಿನಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು ಎಂದರು.
ರಾಹುಲ್ ರಾಜ್ಯ ಭೇಟಿಗೆ ಬಣ್ಣ ಬೇಡ: ಖಾಸಗಿ ಕಾರ್ಯಕ್ರಮದ ನಿಮಿತ್ತ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇದಕ್ಕೆ ರಾಜಕೀಯ ಬಣ್ಣ ಕಟ್ಟುವ ಅಗತ್ಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ: ಚಾಮರಾಜನಗರ ಕ್ಷೇತ್ರದ ಶಾಸಕ ಎನ್.ಮಹೇಶ್ ರಾಜೀನಾಮೆ ವಿಚಾರ ಅವರ ಪಕ್ಷಕ್ಕೆ ಬಿಟ್ಟಿದ್ದು. ಬಿಎಸ್ಪಿ ಹೈಕಮಾಂಡ್ ಆಜ್ಞೆಯಂತೆ ಅವರು ತೀರ್ಮಾನ ತೆಗೆದುಕೊಂಡಿದ್ದಾರೆ. ಮುಂದಿನ ಚುನಾವಣೆಗೂ ಕೂಡ ಬಿಎಸ್ಪಿ ಜೊತೆ ಹೊಂದಾಣಿಕೆ ಮುಂದುವರೆಯುತ್ತದೆ. ಜೆಡಿಎಸ್ ಬಿಎಸ್ಪಿ ಪಕ್ಷದ ಹೊಂದಾಣಿಕೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಅಥವಾ ಗೊಂದಲಗಳಿಲ್ಲ. ಎನ್. ಮಹೇಶ್ ಅವರ ರಾಜೀನಾಮೆಯಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಶಾಸಕ ಎ.ಟಿ. ರಾಮಸ್ವಾಮಿ ಹಾಗೂ ಜೆಡಿಎಸ್ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.