ಜನ ಮರುಳೊ, ಜಾತ್ರೆ ಮರುಳೋ; ಕಣ್ಣು ಬಿಟ್ಟಳಾ ಭದ್ರಕಾಳಿ…?
ಹಾಸನ

ಜನ ಮರುಳೊ, ಜಾತ್ರೆ ಮರುಳೋ; ಕಣ್ಣು ಬಿಟ್ಟಳಾ ಭದ್ರಕಾಳಿ…?

October 14, 2018

ಅರಸೀಕೆರೆ: ತಾಲೂಕಿನ ಬೆಂಡೆಕೆರೆ ಗ್ರಾಪಂ ವ್ಯಾಪ್ತಿಯ ಶಾಂತನ ಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಭದ್ರಕಾಳಮ್ಮ ದೇವಿ ಕಣ್ಣು ಬಿಟ್ಟಿರುವ ದೃಶ್ಯ ಗೋಚರವಾಗಿದ್ದು, ಸುದ್ದಿ ಹರಡುತ್ತಿದ್ದಂತೆ ರಾಜ್ಯದ ವಿವಿಧ ಮೂಲೆಗಳಿಂದ ಜನತೆ ಆಗಮಿಸಿ ದೇವಿ ದರ್ಶನ ಪಡೆಯುತ್ತಿದ್ದಾರೆ.

ನವರಾತ್ರಿ ಆರಂಭದ ಹಿಂದಿನ ದಿನ ಮಹಾಲಯ ಅಮಾವಾಸ್ಯೆಯಂದು ದೇವಿಯ ಕಣ್ಣುಗಳು ತೆರೆದಂತೆ ದೇವಸ್ಥಾನದ ಅರ್ಚಕ ಚಂದ್ರಶೇಖರ್ ಅವರಿಗೆ ಗೋಚರವಾಗಿದ್ದು, ನಂತರ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು, ಸುತ್ತ ಮುತ್ತಲ ಗ್ರಾಮದ ಜನತೆ ತಂಡೋಪ ತಂಡವಾಗಿ ದೇವಾಲಯಕ್ಕೆ ಆಮಿಸಿ ದೇವಿಯ ದರ್ಶನ ಪಡೆದರಲ್ಲದೆ, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನಾ ಭೀಮನ ಅಮಾವಾಸ್ಯೆಯೆಂದು ಕಂಡಂತಹ ಇದೇ ದೃಶ್ಯವನ್ನು ಅಷ್ಟಾಗಿ ದೇವಸ್ಥಾನ ಅರ್ಚಕರು ಮತ್ತು ಭಕ್ತರು ಕಂಡರೂ ಸುಮ್ಮನಾಗಿದ್ದರು. ಆದರೆ ಈ ಬಾರಿಯ ಮಹಾಲಯ ಅಮಾವಾಸ್ಯೆಯಂದು ಸಂಪೂರ್ಣವಾಗಿ ಕಣ್ಣುಗಳನ್ನು ತೆರೆದಂತೆ ದೃಶ್ಯ ಕಂಡು ಬಂದಿದ್ದು, ನವರಾತ್ರಿ ದಿನಗಳಾದ್ದರಿಂದ ಭಕ್ತರ ಪರಾಕಾಷ್ಠೆ ಹೆಚ್ಚಾಗಲು ಕಾರಣವಾಗಿದೆ.

ಈ ದೃಶ್ಯವನ್ನು ಕಂಡಂತಹ ಅರ್ಚಕರು ಮತ್ತು ಭಕ್ತಾದಿಗಳು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರ ಪರಿಣಾಮ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದ್ದರಿಂದ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲು ಕಾರಣವಾಗಿದ್ದು, ತಂಡೋಪ ತಂಡವಾಗಿ ಭಕ್ತರು ದೇವಸ್ಥಾನದತ್ತ ಧಾವಿಸಿ ದೇವಿ ಮಹಿಮೆ ಕಾಣಲು ಮುಗಿಬಿದ್ದರು.

ಅರಸೀಕೆರೆ ನಗರದಿಂದ ಶಿವಮೊಗ್ಗಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿ-206ರ ಸರಹದ್ದಿನ ಸುಮಾರು 8 ಕಿ.ಮೀ. ದೂರದಲ್ಲಿರುವ ಈ ಪುಟ್ಟ ಗ್ರಾಮ ಇಂದು ಈ ದೇವಿಯ ಮಹಿಮೆಯಿಂದ ಸಾಕಷ್ಟು ಪ್ರಖ್ಯಾತಿ ಪಡೆಯುತ್ತಿದ್ದು, ಜನ ಮರುಳೊ ಜಾತ್ರೆ ಮರುಳೋ ಎಂಬಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ಭದ್ರಕಾಳಮ್ಮ ದೇವಿ ಕ್ಷೇತ್ರ ಶಾಂತನಹಳ್ಳಿ ಗ್ರಾಮಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಈ ಗ್ರಾಮದಲ್ಲಿ ಹಿಂದೆ ನೂರಾರು ಕುಟುಂಬಗಳು ವಾಸವಾಗಿದ್ದವು. ಕಾಲಾ ನಂತರ ವಿವಿಧ ಕಾರಣಗಳಿಂದಾಗಿ ಗ್ರಾಮಸ್ಥರು ಪಕ್ಕದೂರಿನ ಬೆಂಡೆಕೆರೆ ಗ್ರಾಮಕ್ಕೆ ಸ್ಥಳಾಂತರವಾದರೂ ಗ್ರಾಮದ ಜನತೆ ದೇವಿಗೆ ನಡೆದುಕೊಳ್ಳುತ್ತಿದ್ದಾರೆ. ಸದ್ಯ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಕೆಲ ವರ್ಷಗಳ ಹಿಂದೆ ಗ್ರಾಮಸ್ಥರು ಮತ್ತು ದಾನಿಗಳ ಸಹಕಾರದಿಂದ ಜೀರ್ಣೋದ್ಧಾರಗೊಂಡಿದೆ. ಪ್ರತಿ ಅಮಾವಾಸ್ಯೆಯಂದು ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ದೇವಿ ಕಣ್ಣು ಬಿಡುವ ದೃಶ್ಯ ಗೋಚರವಾಗುತ್ತದೆ ಎಂಬುದು ಇಲ್ಲಿನ ಅರ್ಚಕರ ಅನುಭವವಾಗಿದೆ. ಸದ್ಯ ನೂರಾರು ವರ್ಷಗಳ ಇತಿಹಾಸವಿರುವ ಭದ್ರಕಾಳಮ್ಮ ದೇವಿ ಇಂತಹ ಚಮತ್ಕಾರದಿಂದ ಇಂದು ರಾಜ್ಯ ಜನತೆಯ ಮನೆಮಾತಾಗಿದ್ದಾಳೆ.

Translate »