ಮೋದಿ ಮತ್ತಷ್ಟು ಕಾಲ ಪ್ರಧಾನಿಯಾಗಿರಬೇಕು
ಮೈಸೂರು

ಮೋದಿ ಮತ್ತಷ್ಟು ಕಾಲ ಪ್ರಧಾನಿಯಾಗಿರಬೇಕು

July 8, 2018

ಮೈಸೂರು: ದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇನ್ನಷ್ಟು ಕಾಲ ಪ್ರಧಾನಿಯಾಗಿರಬೇಕು ಎಂದು ಮೈಸೂರು ರಾಜವಂಶದ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದಿಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಅವರಿಂದ ಕೇಂದ್ರ ಸರ್ಕಾರದ ಸಾಧನಾ ವಿವರವುಳ್ಳ ಕೈಪಿಡಿ ಸ್ವೀಕರಿಸಿದ ಅವರು, ಮೈಸೂರು ಅರಮನೆ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಈಗಷ್ಟೇ ಪ್ರತಾಪ್ ಸಿಂಹ ಅವರು ಕಳೆದ ನಾಲ್ಕೂವರೆ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಅವರು ಮತ್ತಷ್ಟು ಕಾಲ ಪ್ರಧಾನಿಯಾಗಿ ಅಧಿಕಾರ ದಲ್ಲಿರಬೇಕು ಎಂದು ಹೇಳುವ ಮೂಲಕ ಯದುವೀರ್ ಬೆಂಬಲ ಸೂಚಿಸಿದ್ದಾರೆ.

ಸಂಸದರು ನೀಡಿರುವ ಪುಸ್ತಕದಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಕೈಗೊಂಡ ಯೋಜನೆಗಳು, ಮೈಸೂರಿನಲ್ಲಿ ಜಾರಿಯಾಗಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ನು ಬಹಳಷ್ಟು ಕೆಲಸಗಳು ಆಗಬೇಕಿದೆಯಾದ್ದರಿಂದ ನರೇಂದ್ರ ಮೋದಿ ಅವರು ಇನ್ನಷ್ಟು ಕಾಲ ಅಧಿಕಾರದಲ್ಲಿದ್ದರೆ ಒಳ್ಳೆಯದು ಎಂದರು.

ಅದಕ್ಕೂ ಮುನ್ನ ಪ್ರತಾಪ್ ಸಿಂಹ ಅವರು ಇದುವರೆಗೆ ಕೇಂದ್ರ ಸರ್ಕಾರ ಮಾಡಿರುವ ಸಾಧನೆಗಳ ಕುರಿತು ಯದುವೀರ್ ಅವರಿಗೆ ವಿವರಿಸಿ, ಕಿರು ಪುಸ್ತಕವನ್ನು ನೀಡಿದರು. ಈ ಸಂದರ್ಭ ಶಾಸಕ ಎಸ್.ಎ.ರಾಮದಾಸ್, ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು. ಇತ್ತೀಚೆಗಷ್ಟೇ ಪ್ರತಾಪ್ ಸಿಂಹರಿಂದ ಸಾಧನಾ ಪುಸ್ತಕ ಸ್ವೀಕರಿಸಿ ಪ್ರತಿಕ್ರಿಯೆ ನೀಡಿದ್ದ ಖ್ಯಾತ ಸಾಹಿತಿ ಪ್ರೊ. ಎಸ್.ಎಲ್. ಭೈರಪ್ಪ ಅವರು ಸಹ ಮೋದಿ ಇನ್ನೂ ಮೂರು ಅವಧಿಗೆ ಪ್ರಧಾನಮಂತ್ರಿ ಯಾಗಿರಬೇಕೆಂದು ಅಭಿಪ್ರಾಯ ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »