ಮೋದಿ ಸುನಾಮಿ ಪ್ರತಿಪಕ್ಷಗಳು ಧೂಳೀಪಟ
ಮೈಸೂರು

ಮೋದಿ ಸುನಾಮಿ ಪ್ರತಿಪಕ್ಷಗಳು ಧೂಳೀಪಟ

May 24, 2019

ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ಮೇ 29ಕ್ಕೆ ಪ್ರಮಾಣ ವಚನ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತೂ 5 ವರ್ಷಗಳ ಕಾಲ ದೇಶದ ಆಡಳಿತ ನಡೆಸ ಬೇಕೆಂಬ ಜನಾದೇಶ ವನ್ನು ಯಾರೂ ಊಹಿಸಲಾಗದಷ್ಟು ಬೃಹತ್ ಪ್ರಮಾಣದಲ್ಲಿ ಹಾಗೂ ಸ್ಪಟಿಕ ಸದೃಶದಷ್ಟು ಸ್ಪಷ್ಟ ರೀತಿಯಲ್ಲಿ ದೇಶದ ಜನತೆ ನೀಡಿದೆ.

ನಿರೀಕ್ಷೆಗೂ ಮೀರಿ ಬಂದಿರುವ ಜನಾದೇಶ ದಿಂದ ಉಲ್ಲಸಿತರಾಗಿರುವ ನರೇಂದ್ರ ದಾಮೋದರದಾಸ್ ಮೋದಿ ಅವರು ಇದೇ ಮೇ 29ರಂದು ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಬರಿಯ ಬಹುಮತವಲ್ಲ, ಸ್ವತಃ ಬಿಜೆಪಿಯೇ ನಿರೀಕ್ಷಿಸಿರ ದಷ್ಟು (352) ಲೋಕಸಭಾ ಸದಸ್ಯರನ್ನು ದೊಡ್ಡ ಉಡುಗೊರೆ ಯಾಗಿ ನೀಡಿರುವ ದೇಶದ ಉದ್ದಗಲದ ಜನತೆ, ಎನ್‍ಡಿಎ ಮೈತ್ರಿಕೂಟವನ್ನು ಇನ್ನಷ್ಟು ಬಲಿಷ್ಠವಾಗಿಸಿದ್ದಾರೆ. ಚುನಾವಣೆ ನಡೆದ 542 ಲೋಕಸಭಾ ಕ್ಷೇತ್ರಗಳಲ್ಲಿ 302 ಸ್ಥಾನ ಗಳನ್ನು ಮತ ದಾರರು, ಭಾರತೀಯ ಜನತಾ ಪಾರ್ಟಿಯ ಸುಪರ್ದಿಗೆ ಒಪ್ಪಿಸಿದ್ದಾರೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾ ಧ್ಯಕ್ಷ ಅಮಿತ್ ಶಾ ಅವರ ಕಳೆದ ಐದು ವರ್ಷಗಳ ಪರಿಶ್ರಮಕ್ಕೆ ಪ್ರತಿಫಲವೆಂಬಂತೆ `ತ್ರಿಶತಕ’ದ ಕಿರೀಟವನ್ನು ಈ ಅಪರೂಪದ ಜೋಡಿ ಮುಡಿಗೇರಿಸಿದ್ದಾರೆ. ನುಡಿದಂತೆಯೇ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ನಿಜವಾಗಿಸ ಬೇಕಾದ ಹೊಣೆಗಾರಿಕೆಯನ್ನೂ ಹೆಗಲಿ ಗೇರಿಸಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್ ನೇತೃ ತ್ವದ ಹಲವು ಪಕ್ಷಗಳ ಕೂಟದ ಅಧಿಕಾರ ದಾಸೆಗೆ ತಣ್ಣೀರು ಎರಚಿರುವ ಮತದಾರ ಪ್ರಭು, ಯುಪಿಎ ಕೂಟದ ಸಾಮಥ್ರ್ಯವನ್ನು 86ಕ್ಕೇ ಸೀಮಿತಗೊಳಿಸಿದ್ದಾರೆ. ಆದರೆ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಿ ಅದರ ಸಂಸದರ ಸಂಖ್ಯೆಯನ್ನು ಕಳೆದ ಬಾರಿಯ 44ರಿಂದ 51ಕ್ಕೆ ಏರಿಸಿದ್ದಾರೆ. ಮಹಾಘಟಬಂಧನ್ ಬಗ್ಗೆ ಅಷ್ಟೇನೂ ಮೆಚ್ಚುಗೆ ತೋರದ ಮತದಾರರು, ಪ್ರಾದೇಶಿಕ ಪಕ್ಷಗಳು, ಸಣ್ಣಪುಟ್ಟ ಪಕ್ಷಗಳು ಸೇರಿದಂತೆ ಇತರರಿಗೆ ಒಟ್ಟಾರೆಯಾಗಿ 104 ಸ್ಥಾನಗಳನ್ನು ನೀಡಿದ್ದಾರೆ.

ಭಾರೀ ಅಚ್ಚರಿ ಎಂದರೆ, ಯುವಜನ ಶ್ರಮಿಕ ರೈತ ಪಾರ್ಟಿ (ವೈಎಸ್‍ಆರ್‍ಪಿ) ಅಭ್ಯರ್ಥಿಗಳಲ್ಲಿ 24 ಮಂದಿಯನ್ನು ಗೆಲ್ಲಿಸಿರುವ ಮತದಾರರು, ಸ್ಥಾನಗಳ ಗಳಿಕೆ ಲೆಕ್ಕದಲ್ಲಿ ಆ ಪಕ್ಷವನ್ನು ಮೂರನೇ ಸ್ಥಾನಕ್ಕೇರಿಸಿದ್ದಾರೆ. 2014ರಲ್ಲಿ 8 ಸಂಸದರನ್ನಷ್ಟೇ ಹೊಂದಿದ್ದ ವೈಎಸ್‍ಆರ್‍ಪಿ, ಈ ಬಾರಿ ಹೆಚ್ಚುವರಿಯಾಗಿ 16 ಸ್ಥಾನಗಳನ್ನು ಪಡೆದುಕೊಂಡು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.ಹಿರಿಯ ಪ್ರಾದೇಶಿಕ ಪಕ್ಷಗಳಲ್ಲೊಂದಾದ ಡ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತಮಿಳು ನಾಡಿನಲ್ಲಿ 23 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ರಾಜಕೀಯವಾಗಿ ಭಾರೀ ಸುಧಾರಣೆ ಕಂಡುಕೊಂಡಿದೆ. ಕಳೆದುಕೊಂಡಿದ್ದ ತನ್ನ ಶಕ್ತಿಯನ್ನು ಮರಳಿ ಸಂಪಾದಿಸಿದೆ. ಕಳೆದ ಬಾರಿ 34 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಪಶ್ಚಿಮ ಬಂಗಾಳದ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ಮೋದಿ, ಅಮಿತ್ ಶಾ ಅವರ ಪ್ರಬಲ ಹೋರಾಟದ ಕಾರಣದಿಂದಾಗಿ ತುಸು ಕಳೆಗುಂದಿದೆ. ಸಂಸದರ ಸಂಖ್ಯೆಯಲ್ಲಿ 11ರಷ್ಟು ನಷ್ಟ ಅನುಭವಿಸಿದೆ. 23 ಸ್ಥಾನಗಳಿಗೆ ಇಳಿಕೆಯಾಗಿದೆ.

ನಂತರದ ಸ್ಥಾನಗಳಲ್ಲಿ ಎನ್‍ಡಿಎ ಮಿತ್ರಪಕ್ಷ ಶಿವಸೇನೆ 18 ಕ್ಷೇತ್ರಗಳಲ್ಲಿ ಗೆದ್ದು, ತನ್ನ ಶಕ್ತಿಯನ್ನು ಯಥಾರೀತಿ ಕಾಯ್ದುಕೊಂಡಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಸಂಯುಕ್ತ) 16, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ 13, ಮಾಯಾವತಿ ಅವರ ಅಧ್ಯಕ್ಷತೆಯ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) 11 ಸ್ಥಾನಗಳನ್ನು ಗೆದ್ದು ಎರಡಂಕಿ ಸಾಧನೆ ತೋರಿ ಮರ್ಯಾದೆ ಉಳಿಸಿಕೊಂಡಿವೆ. ಉಳಿದಂತೆ ಟಿಆರ್‍ಎಸ್ 9 (2 ಸ್ಥಾನ ನಷ್ಟ), ಲೋಕಜನ ಶಕ್ತಿ 6, ಶರದ್ ಪವಾರ್ ಅವರ ಎನ್‍ಸಿಪಿ 5 (1 ಸ್ಥಾನ ನಷ್ಟ), ಸಮಾಜವಾದಿ ಪಕ್ಷ 5, ಸಿಪಿಐ(ಎಂ) 3 (6 ಸ್ಥಾನ ನಷ್ಟ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 3 (1 ಸ್ಥಾನ ಗಳಿಕೆ), ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ 3 (3 ಗಳಿಕೆ), ಎಐಎಡಿಎಂಕೆ, ಓವೈಸಿ ಅವರ ಎಐಎಂಇಎಂ, ಶಿರೋಮನಿ ಅಕಾಲಿ ದಳ ಮತ್ತು ಸಿಪಿಐ ತಲಾ 2 ಸ್ಥಾನ ಗಳಿಸಿವೆ. ಉಳಿದಂತೆ 17 ಪಕ್ಷಗಳು ತಲಾ 1 ಸ್ಥಾನ ಪಡೆದಿವೆ.

Translate »