ಮೇ 30ಕ್ಕೆ ಪ್ರಧಾನಿಯಾಗಿ ಮೋದಿ ಪದಗ್ರಹಣ
ಮೈಸೂರು

ಮೇ 30ಕ್ಕೆ ಪ್ರಧಾನಿಯಾಗಿ ಮೋದಿ ಪದಗ್ರಹಣ

May 25, 2019

ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಂಡ ಗೆಲುವಿನ ನಂತರ ಎರಡನೇ ಅವಧಿಗೆ ಪ್ರಧಾನಿಯಾಗಿ ಮೋದಿ ಮೇ30 ರಂದು ಪದಗ್ರಹಣ ಮಾಡಲಿದ್ದಾರೆ. 2014ರಂತೆ ಈ ಬಾರಿಯೂ ಮೋದಿ ಪದಗ್ರಹಣ ಕಾರ್ಯಕ್ರಮಕ್ಕೆ ವಿದೇಶದ ನಾಯಕರು ಆಗಮಿಸುವ ಸಾಧ್ಯತೆ ಇದೆ. 2014ಕ್ಕಿಂತ ಈ ಬಾರಿಯ ಪದಗ್ರಹಣ ಕಾರ್ಯಕ್ರಮ ಬೃಹತ್ ಪ್ರಮಾಣದಲ್ಲಿ ನಡೆಯಲಿದೆ.

ಕಳೆದ ಬಾರಿ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಮೋದಿ ಪದ ಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನಿಸಲಾಗಿತ್ತು. ಈ ಬಾರಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿಪಿಂಗ್ ಇತರೆ ವಿಶ್ವದ ಬಲಿಷ್ಠ ರಾಷ್ಟ್ರಗಳ ನಾಯಕರನ್ನು ಮೋದಿ ಪದಗ್ರಹಣ ಕಾರ್ಯ ಕ್ರಮಕ್ಕೆ ಆಹ್ವಾನಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತಿ ಪ್ರದರ್ಶನ ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪದಗ್ರಹಣ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದಾರೆ.

ಹೊಸಬರಿಗೆ ಮಣೆ: ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಗೆಲುವಿನ ಸಂಭ್ರಮದಲ್ಲಿ ಬೀಗುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಬಾರಿ ತಮ್ಮ ಸಚಿವ ಸಂಪುಟದಲ್ಲಿ ಹಳಬರ ಜೊತೆಗೆ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ನಿಚ್ಚಳವಾಗಿದೆ. ಹಾಲಿ ಸಂಪುಟದಲ್ಲಿ ಸಚಿವರಾಗಿದ್ದ ಬಹುತೇಕರಿಗೆ ಒಳ್ಳೆಯ ಖಾತೆ ಮತ್ತು ಬಡ್ತಿ ಸಿಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಆರೋಗ್ಯ ದೃಷ್ಟಿಯ ಕಾರಣದಿಂದ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೊಸ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ. ಸ್ಮೃತಿ ಇರಾನಿ ಮತ್ತು ನಿರ್ಮಲಾ ಸೀತಾರಾಮನ್ ಪ್ರಮುಖ ಖಾತೆಗಳನ್ನು ಪಡೆಯುವ ಸಾಧ್ಯತೆ ಇದೆ. ಮುಖ್ತಾರ್ ಅಬ್ಬಾಸ್ ನಖ್ವಿ, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ ಮತ್ತು ರವಿಶಂಕರ್ ಪ್ರಸಾದ್ ಅವರಿಗೂ ಆಯಕಟ್ಟಿನ ಹುದ್ದೆಗಳು ದೊರಕಲಿವೆ ಎಂಬ ಮಾತು ಕೇಳಿ ಬರುತ್ತಿವೆ. ಕೇಂದ್ರ ಗೃಹ ಸಚಿವರಾಗಿದ್ದ ರಾಜ್‍ನಾಥ್ ಸಿಂಗ್‍ಗೆ ರಕ್ಷಣೆ, ಅಮಿತ್ ಶಾಗೆ ಗೃಹ ಖಾತೆ ಸಿಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಮಂಡ್ಯದ ಸುಮಲತಾ ಅಂಬರೀಷ್ ಮತ್ತು ತುಮಕೂರಿನ ಜಿ.ಎಸ್.ಬಸವರಾಜ್ ಅವರಿಗೂ ಪ್ರಮುಖ ಖಾತೆ ದೊರೆಯಬಹುದು ಎಂಬ ಆಶಯ ಚಿಗುರೊಡೆದಿದೆ.

Translate »