ಗುರುಗಳಿಬ್ಬರ ಪಾದಕ್ಕೆರಗಿ ಆಶೀರ್ವಾದ ಪಡೆದ `ಲೋಕ’ ವಿಜೇತ ನರೇಂದ್ರ ಮೋದಿ
ಮೈಸೂರು

ಗುರುಗಳಿಬ್ಬರ ಪಾದಕ್ಕೆರಗಿ ಆಶೀರ್ವಾದ ಪಡೆದ `ಲೋಕ’ ವಿಜೇತ ನರೇಂದ್ರ ಮೋದಿ

May 25, 2019

ನವದೆಹಲಿ: ಅದೊಂದು ಅಪರೂಪದ ಕ್ಷಣ, ಭಾವೋದ್ವೇಗದ ಸನ್ನಿವೇಶ. ಬಹಳ ದಿನಗಳ ನಂತರ ಗುರು-ಶಿಷ್ಯರ ಭೇಟಿ. ಅಭಿನಂದನೆ, ಆಶೀರ್ವಾದ, ಆಲಿಂಗನ, ಸಿಹಿ ಸಿಹಿ ಮಾತುಗಳ ವಿನಿಮಯದ ಕ್ಷಣ.

ಷ್ಟೇ ಅಂತ್ಯಗೊಂಡ 17ನೇ ಲೋಕ ಸಭೆಯ ಚುನಾವಣೆಯಲ್ಲಿ ಅಭೂತ ಪೂರ್ವ ಜಯ ದಾಖಲಿಸಿದ ನರೇಂದ್ರ ದಾಮೋದರದಾಸ್ ಮೋದಿ ಮತ್ತು ಅಮಿತ್ ಶಾ ಜೋಡಿ, ಪಕ್ಷವನ್ನು ತಳ ಮಟ್ಟದಿಂದ ಕಟ್ಟಿ ಸದೃಢವಾಗಿ ಬೆಳೆಸಿದ ಹಿರಿಯರಿಬ್ಬರನ್ನು ಶುಕ್ರವಾರ ಬೆಳಿಗ್ಗೆ ಅವರ ಮನೆಯಂಗಳದಲ್ಲೇ ಭೇಟಿ ಮಾಡಿ ಶುಭಾಶಯ ವಿನಿಮಯ ಮಾಡಿ ಕೊಂಡರು, ಜೊತೆಗೆ ಆಶೀರ್ವಾದ ಪಡೆದು ಕೊಂಡರು. ಫಲಿತಾಂಶದ ಮರುದಿನದ ಮುಖ್ಯ ಕಾರ್ಯ ಇದೇ ಎನ್ನುವಂತೆ ಶುಕ್ರವಾರ ಬೆಳಿಗ್ಗೆಯೇ ಮೋದಿ-ಶಾ ಜೋಡಿ, ಆಡ್ವಾಣಿ ಅವರ ಮನೆಗೆ ಭೇಟಿ ನೀಡಿತು. ತಾವೇ ರಾಜಕೀಯ ಪಾಠ ಹೇಳಿಕೊಟ್ಟು ಹಂತ ಹಂತವಾಗಿ ಬೆಳೆಸಿದ ಶಿಷ್ಯ ಮೋದಿ, ದೊಡ್ಡ ವಿಜಯದೊಂದಿಗೆ ಬರುತ್ತಿರುವ ಸುದ್ದಿ ತಿಳಿದಿದ್ದ ಹಿರಿಯ ಜೀವಗಳು ಅತಿಥಿಗಳಿಬ್ಬರನ್ನೂ ಬರಮಾಡಿ ಕೊಳ್ಳಲು ಮನೆ ಮುಂಬಾಗಿಲಿಗೇ ಬಂದು ನಿಂತಿದ್ದರು.ಬೆಂಗಾವಲು ಪಡೆಯೊಂದಿಗೆ ಕಡುಗಪ್ಪು ಕಾರುಗಳ ಸಾಲಿನಲ್ಲಿ ಸಾಗಿ ಬಂದ ಪ್ರಧಾನಿ ಮೋದಿ ಅವರು ಗುರುವನ್ನು ಕಾಣುತ್ತಲೇ ಮೆಟ್ಟಿಲ ಬಳಿಯೇ ಅವರ ಪಾದಕ್ಕೆರಗಿದರು. ಮೆಚ್ಚಿನ ಶಿಷ್ಯನ ಭುಜ ಹಿಡಿದು ಮೇಲಕ್ಕೆತ್ತಿದ ಆಡ್ವಾಣಿ ಅವರು, ಮೋದಿ-ಶಾ ಜೋಡಿಯನ್ನು ಅಷ್ಟೇ ಪ್ರೀತಿಯಿಂದ ಒಳಕ್ಕೆ ಕರೆದೊಯ್ದರು. ಈ ಸಂದರ್ಭ ಪುತ್ರಿ ಪ್ರತಿಭಾ ಆಡ್ವಾಣಿ ಸಹ ಹಾಜರಿದ್ದರು.

ತಾವು ಕಟ್ಟಿ ಬೆಳೆಸಿದ ಪಕ್ಷ ಸತತ ಎರಡನೇ ಅವಧಿಗೆ ಭಾರೀ ಬಹುಮತದೊಂದಿಗೆ ಮತ್ತೆ 5 ವರ್ಷಗಳ ಕಾಲ ದೇಶವನ್ನು ಮುನ್ನಡೆಸಲಿದೆ ಎಂಬ ವಿಚಾರದಿಂದಲೇ ಹರ್ಷಚಿತ್ತರಾಗಿದ್ದ ಆಡ್ವಾಣಿ, ಕಮಲ ಪಕ್ಷದ ದಂಡನಾಯಕರಿಬ್ಬರ ಜತೆ ಕೆಲ ಕಾಲ ಮಾತನಾಡಿದರು. ಸಿಹಿ ವಿನಿಮಯ, ಚಹಾ ಉಪಚಾರದ ಬಳಿಕ ಮೋದಿ-ಶಾ ಜೋಡಿಯನ್ನು ಬೀಳ್ಕೊಟ್ಟರು. ಪಕ್ಷದಲ್ಲಿ ಲೋಹ ಪುರುಷ, ಕೆಚ್ಚೆದೆ ಹೋರಾಟಗಾರ ಎಂದೇ ಹೆಸರಾಗಿದ್ದ ಗುರು ಆಡ್ವಾಣಿ ಅವರ ಮನೆಯಿಂದ ಹೊರಟ ಜೋಡಿಯ ಮುಂದಿನ ಪಯಣ ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ, ವಿದ್ವಾಂಸ ಮುರಳಿ ಮನೋಹರ ಜೋಷಿ ಅವರ ಮನೆಯತ್ತ ಸಾಗಿತು.

ಶಾಲು-ಪುಷ್ಪಗುಚ್ಛ ಹಿಡಿದು ಮನೆಯಂಗಳದಲ್ಲಿ ಪತ್ನಿ ಸಮೇತರಾಗಿ ನಿಂತಿದ್ದ ಮುರಳಿ ಮನೋಹರ ಜೋಷಿ ಕಮಲ ಕಲಿಗಳನ್ನು ಸ್ವಾಗತಿಸಲು ಬಲು ಉತ್ಸುಕರಾಗಿದ್ದರು. ಕಾರಿನಿಂದಿಳಿಯುತ್ತಲೇ ದಾಪುಗಾಲಿಕ್ಕುತ್ತಾ ಬಂದು ಕಾಲಿಗೆರಗಿದ ಮೋದಿ ಅವರನ್ನು ಅಷ್ಟೇ ಪ್ರೀತಿಯಿಂದ ಬಿಗಿದಪ್ಪಿ ಆಶೀರ್ವದಿಸಿದರು ಜೋಷಿ.

ಮೋದಿಯವರ ತೋಳು ಹಿಡಿದಿರುವಂತೆಯೇ ಮನೆಯೊಳಕ್ಕೆ ಕರೆದೊಯ್ದು, ಪಕ್ಕದ ಸೋಫಾದಲ್ಲಿಯೇ ಕೂರಿಸಿಕೊಂಡ ಹಿರಿಯ ವಿದ್ವಾಂಸ ಜೋಷಿ, ಸಿಹಿ ತಿನಿಸಿನ ತಟ್ಟೆ ಬರುತ್ತಲೇ ಮೇಲೆದ್ದು ವಿಜಯೀ ಪುರುಷರ ಬಳಿ ಸಾಗಿ ಕೈಯ್ಯಾರೆ ಸಿಹಿ ತಿನಿಸಿ ಸಂಭ್ರಮಿಸಿದರು. ಅಲ್ಲೇ ಆಸೀನರಾಗಿದ್ದ ಜೋಷಿ ಪತ್ನಿಯೂ ಈ ಅಪರೂಪದ ದೃಶ್ಯ ಕಂಡು ಉಲ್ಲಾಸಿತರಾದರು. ಚುನಾವಣೆ, ಪ್ರಚಾರ, ಅದ್ವಿತೀಯ ಗೆಲುವು, ಜತೆಗೊಂದಿಷ್ಟು ಹಳೆಯ ನೆನಪುಗಳನ್ನು ಹಂಚಿಕೊಂಡ ಬಳಿಕ ಜೋಷಿ ಅವರು ಪಕ್ಷದ ದಂಡನಾಯಕರಿಬ್ಬರಿಗೂ ಮತ್ತೊಮ್ಮೆ ಶುಭ ಹಾರೈಸಿ, ಬೀಳ್ಕೊಟ್ಟರು.

ಕೆಲ ತಾಸುಗಳ ಈ ದೃಶ್ಯಾವಳಿಗಳು ಕ್ಯಾಮಾರದಲ್ಲಿ ಸೆರೆಯಾಗಿದ್ದು, ಪ್ರಧಾನಿ ಮೋದಿ ಅವರ ಟ್ವಿಟರ್ ಖಾತೆಯಿಂದ ಅದಾಗಲೇ ಸಾಮಾಜಿಕ ಜಾಲ ತಾಣ ಸೇರಿ ಲಕ್ಷಾಂತರ ಮಂದಿಯ ವೀಕ್ಷಣೆಗೆ ಕಾರಣವಾಗಿವೆ. ಎಎನ್‍ಐ ಮಾಧ್ಯಮ ಸಂಸ್ಥೆಯ ಟ್ವಿಟರ್‍ನಲ್ಲಿರುವ 31 ಸೆಕೆಂಡ್‍ಗಳ ಈ ವಿಡಿಯೋ ತುಣಕನ್ನು ಶುಕ್ರವಾರ ಸಂಜೆ 6.30ರ ವೇಳೆಗೆಲ್ಲಾ 4.50 ಲಕ್ಷ ಮಂದಿ ವೀಕ್ಷಿಸಿದ್ದರು.

Translate »