ಕುರ್ಚಿ ಕಳೆದುಕೊಳ್ಳುವಾಗ ನೈತಿಕತೆ ಅರಿವಾಗಿದೆ
ಮೈಸೂರು

ಕುರ್ಚಿ ಕಳೆದುಕೊಳ್ಳುವಾಗ ನೈತಿಕತೆ ಅರಿವಾಗಿದೆ

July 22, 2019

ಬೆಂಗಳೂರು, ಜು.21- ವಿಶ್ವಾಸಮತದ ಮುನ್ನಾದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪತ್ರಿಕಾ ಪ್ರಕಟಣೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿರು ಗೇಟು ನೀಡಿದ್ದು, ಅವರ ಪೂರ್ಣ ಪಾಠ ಹೀಗಿದೆ. “ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜಕೀಯ ನೈತಿಕತೆ ಬಗ್ಗೆ ಈಗ ತಮ್ಮ ಕುರ್ಚಿ ಕಳೆದುಕೊಳ್ಳುವುದು ಖಾತ್ರಿಯಾದಾಗ ಅರಿವಾಗಿದೆ. ಚುನಾವಣೆ ಪೂರ್ವದಲ್ಲಿ ಪರಸ್ಪರ ಕಚ್ಚಾಡಿ, ಒಬ್ಬರಿಗೊಬ್ಬರು ಬಾಯಿಗೆ ಬಂದ ಹಾಗೆ ಮಾತಾಡಿ ಆಮೇಲೆ ಅಧಿಕಾರ ದಾಹದಿಂದ ಕಾಂಗ್ರೆಸ್ ಜೊತೆ ಸೇರಿ ಸರಕಾರ ರಚಿಸಿದಾಗ ನಿಮ್ಮ ನೈತಿಕತೆ ಎಲ್ಲಿತ್ತು? ಭಾರತೀಯ ಜನತಾಪಕ್ಷ ಒಂದು ರಾಷ್ಟ್ರೀಯ ಪಕ್ಷವಾಗಿ 105 ಸ್ಥಾನ ಗೆದ್ದರೂ ಕೂಡ ವಿರೋಧ ಪಕ್ಷದಲ್ಲಿ ಜನಪರ ವಾದ ಕಾರ್ಯದಲ್ಲಿ ನಿರತವಾಗಿದೆ. ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ರಾಜಕೀಯ ಕುತಂತ್ರದಿಂದ ಮತ್ತು ಹಣ ಬಲದಿಂದ ಸರಕಾರವನ್ನು ಅಸ್ಥಿರಗೊಳಿಸಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿದ ಪಿತಾಮಹ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನ ಮಂತ್ರಿ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ.

1994ರಲ್ಲಿ ಹೆಚ್.ಡಿ ದೇವೇಗೌಡ ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ರಾಮಕೃಷ್ಣ ಹೆಗಡೆ ಅವರನ್ನು ವಿಧಾನಸೌಧದಲ್ಲಿ ಮೆಟ್ಟಿನಿಂದ ಹೊಡೆಸಿ ವಾಮ ಮಾರ್ಗಗಳಿಂದ ಅಧಿಕಾರ ಪಡೆದುಕೊಂಡಿದ್ದು ಪ್ರಜಾಪ್ರಭುತ್ವದ ಅಣಕವಲ್ಲವೇ? ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಮೈನಿಂಗ್ ದೊರೆಯಿಂದ ಹಣವನ್ನು ಕೊಟ್ಟು 19 ಜನ ಶಾಸಕರನ್ನು ರಾಜಭವನಕ್ಕೆ ಕಳಿಸಿ ಗೋವಾ ರೆಸಾರ್ಟ್‍ನಲ್ಲಿ ಅವರ ಜೊತೆಗೆ ಬಹಿ ರಂಗವಾಗಿ ಗುರುತಿಸಿಕೊಂಡಿದ್ದು ನೈತಿಕತೆಯೇ? ಕಾನೂನು ಬಾಹಿರವಾಗಿ ಅಧಿಕಾರ ಹಿಡಿಯಲು ಪ್ರಯತ್ನ ಮಾಡಿರುವುದುನ್ನು ಮರಿತಿದ್ದೀರಾ?

ಅಧಿಕಾರಕ್ಕೆ ಅಂಟಿಕೊಳ್ಳುವ ಉದ್ದೇಶ ಇಲ್ಲವೆಂದು ಹೇಳುತ್ತಾ ಕಳೆದ ಮೂರು ದಿನಗಳಿಂದ ಸದನದಲ್ಲಿ ಸಮಯ ಕಳೆಯುತ್ತಿರುವುದು ಕರ್ನಾಟಕದ ಜನತೆಗೆ ನೀವು ಕುರ್ಚಿಗೆ ಎಷ್ಟರಮಟ್ಟಿಗೆ ಅಂಟಿಕೊಂಡಿದ್ದೀರಾ ಎನ್ನುವುದನ್ನು ಜಾಹೀರುಗೊಳಿಸಿದೆ. ತಮ್ಮ ದುರಾಡಳಿತ, ಸ್ವಜನ ಪಕ್ಷಪಾತ ಹಾಗೂ ಸ್ವಾರ್ಥದಿಂದ ತುಂಬಿದ ಆಡಳಿತವನ್ನು ನೋಡಿ ಶಾಸಕರು ಬೇಸರಗೊಂಡು ಹೋಗಿದ್ದಾರೆ. ಅವರನ್ನು ಮತ್ತೆ ಮರುಳು ಮಾಡಿ ವಾಪಸ್ಸು ಕರೆಯುತ್ತಿದ್ದು ಮೊಸಳೆ ಕಣ್ಣೀರು ಸುರಿಸುತ್ತಿದ್ದೀರಿ ಇದನ್ನು ರಾಜ್ಯದ ಜನರು ಮತ್ತು ಶಾಸಕರು ನಂಬುವುದಿಲ್ಲ. ನಿಮಗೆ ನೈತಿಕತೆ ಇದ್ದರೆ ಬಹುಮತ ಕಳೆದುಕೊಂಡಿರುವ ನೀವುಗಳು ರಾಜೀನಾಮೆ ಕೊಟ್ಟು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಒಳ್ಳೆಯದು.

Translate »