ಮೈಸೂರು, ಫೆ.2(ಎಸ್‍ಬಿಡಿ)- ವಿವಾಹಪೂರ್ವ ಜನಿಸಿದ ಮಗುವನ್ನು ಅಮಾನುಷವಾಗಿ ಕೊಂದ ಮಹಿಳೆಗೆ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನಂಜನಗೂಡು ತಾಲೂಕು ಹೆಡಿಯಾಲ ಗ್ರಾಮದ ಮಂಗಳಗೌರಿಗೆ ಜೀವಾವಧಿ ಹಾಗೂ ಆಕೆಯ ಪ್ರಿಯಕರ ಗೌಡರಹುಂಡಿ ಗ್ರಾಮದ ಬಸವರಾಜುವಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಇಬ್ಬರೂ ಪ್ರೇಮಿಗಳಾಗಿದ್ದರು. ಆದರೆ ವಿವಾಹಕ್ಕೆ ಮೊದಲೇ ಗರ್ಭ ಧರಿಸಿದ ಮಂಗಳಗೌರಿ 2017ರ ಮೇ 8ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ತಕ್ಷಣ ಹಾಲುಣಿಸಿ, ಹಸುಗೂಸಿನ ತಲೆಯನ್ನು ಗೋಡೆಗೆ ಗುದ್ದಿಸಿ, ಬಾಯಿಗೆ ಬಟ್ಟೆ ತುರುಕಿ, ಅಮಾನುಷವಾಗಿ ಹತ್ಯೆ ಮಾಡಿದಳು. ಬಳಿಕ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ, ಪ್ರಿಯಕರ ಬಸವರಾಜು ಕೈಗಿತ್ತಳು. ಆತ ಹಸುಗೂಸಿನ ಮೃತದೇಹ ವನ್ನು ಕೊಂಡೊಯ್ದು ಹಳ್ಳಕ್ಕೆ ಎಸೆದಿದ್ದ. ಘಟನೆ ನಂತರ ಬೆಳಕಿಗೆ ಬಂದು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂಜನಗೂಡು ಸರ್ಕಲ್ ಇನ್‍ಸ್ಪೆಕ್ಟರ್ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾ ರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸರಸ್ವತಿ ಕೌಸುಂದರ್ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹಸುಗೂಸನ್ನು ಹತ್ಯೆ ಮಾಡಿದ ಮಂಗಳಗೌರಿಗೆ ಜೀವಾವಧಿ ಸೆರೆವಾಸ ಶಿಕ್ಷೆ ಹಾಗೂ ಐದು ಸಾವಿರ ರೂ. ದಂಡ ಹಾಗೂ ಮೃತದೇಹವನ್ನು ಹಳ್ಳಕ್ಕೆಸೆದಿದ್ದ ಬಸವರಾಜುವಿಗೆ ಎರಡು ವರ್ಷ ಜೈಲು ಹಾಗೂ ಮೂರು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಹೆಚ್.ಡಿ. ಆನಂದ್ ಸರ್ಕಾರದ ಪರ ವಾದ ಮಂಡಿಸಿದ್ದರು.