ವಿರಾಜಪೇಟೆ: ವಿದ್ಯಾರ್ಥಿಗಳು ಕನ್ನಡ ಪಾಠದೊಂದಿಗೆ ಅಗತ್ಯವಾಗಿರುವ ಇಂಗ್ಲಿಷ್ ಭಾಷೆಯನ್ನು ಕಲಿಯುವ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕೆಂಬ ಗುರಿಯನ್ನು ಇಟ್ಟುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.
ವಿರಾಜಪೇಟೆ ಸಮೀಪದ ಹೆಗ್ಗಳ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ sÁಗದಲ್ಲಿರುವ ವಿದ್ಯಾರ್ಥಿಗಳು ತಪ್ಪದೆ ಶಾಲೆಗೆ ಬರಬೇಕೆಂಬ ಉದ್ದೇಶದಿಂದ ಸರಕಾರ ಸೈಕಲ್ ನೀಡುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ತಮ್ಮಲ್ಲಿರುವ ಪ್ರತಿಭೆ ಗಳನ್ನು ಹೊರಹಾಕುವ ಮೂಲಕ ಉತ್ತಮ ಪ್ರಜೆಗಳಾಗುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆದು ತಮ್ಮ ಜೀವನದ ಗುರಿಮುಟ್ಟುವಂತಾಗಬೇಕು ಎಂದರು. ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೋಂದಮ್ಮ ಮಾತನಾಡಿ, ವಿದ್ಯಾರ್ಥಿಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಆರ್.ಶಶಿಕಾಂತ ಮಾತನಾಡಿ ದರು. ಶಾಲಾ ಮುಖ್ಯೋಪದ್ಯಾಯಿನಿ ಬಿ.ಎಂ.ಸುನೀತ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ಸರಕಾರದಿಂದ ಸಿಗುವಂತ ಸೌಲಭ್ಯಗಳನ್ನು ಬಳಸಿಕೊಂಡು ಶಿಕ್ಷಣ ಮುಂದುವರಿಸುವಂತೆ ಹೇಳಿದರು. ಶಿಕ್ಷಕರಾದ ಬಿ.ಮಂಜುನಾಥ್ ಸ್ವಾಗತಿಸಿದರು. ಡಿ.ಹೇಮರಾಜು ನಿರೂಪಿಸಿದರೆ, ದೇವರಾಜು ವಂದಿಸಿದರು. 201-18ನೇ ಸಾಲಿನಲ್ಲಿ ಅತೀಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.