ಭವಿಷ್ಯ ನಿರ್ಧರಿಸುವ ಶಿಕ್ಷಣವನ್ನು ಸಂತೋಷದಿಂದ ಕಲಿಯಿರಿ: ವಿದ್ಯಾರ್ಥಿಗಳಿಗೆ ಸಂಸದ ಪ್ರತಾಪ್‍ಸಿಂಹ ಸಲಹೆ
ಮೈಸೂರು

ಭವಿಷ್ಯ ನಿರ್ಧರಿಸುವ ಶಿಕ್ಷಣವನ್ನು ಸಂತೋಷದಿಂದ ಕಲಿಯಿರಿ: ವಿದ್ಯಾರ್ಥಿಗಳಿಗೆ ಸಂಸದ ಪ್ರತಾಪ್‍ಸಿಂಹ ಸಲಹೆ

June 19, 2018

ಮೈಸೂರು: ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಆದರೆ ಎಲ್ಲಾ ಸಮಯದಲ್ಲೂ ಸಾಂಪ್ರದಾಯಿಕ ಶಿಕ್ಷಣ ಎನ್ನುವುದು ಸಿಗುವುದಿಲ್ಲವಾದ್ದರಿಂದ ನಿಮ್ಮ ಭವಿಷ್ಯ ನಿರ್ಧರಿಸುವ ಪದವಿ ಹಂತದ ವಿದ್ಯಾಭ್ಯಾಸವನ್ನು ಸಂತೋಷದಿಂದ ಕಲಿಯುವಂತೆ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್‍ಸಿಂಹ ಇಂದಿಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಾಲೇಜಿನಲ್ಲಿರುವಾಗ ಜೀವನದ ಜೊತೆ ಆಟವಾಡುತ್ತಾರೆ. ಆದರೆ ಕಾಲೇಜಿನ ಅಧ್ಯಯನದ ನಂತರ ಜೀವನ ಎನ್ನುವುದು ನಮ್ಮ ಜೊತೆ ಆಟವಾಡುತ್ತದೆ ಎಂದು ಸ್ಟೀವ್ ಜಾಬ್ ಅವರ ಮೃತ್ಯು ಎನ್ನುವುದು ಬದಲಾವಣೆಯ ಪ್ರತಿನಿಧಿ ಎಂಬ ಮಾತನ್ನು ಉಲ್ಲೇಖಿಸಿ ಹೇಳಿದರು.

ಮಕ್ಕಳು ಜವಾಬ್ದಾರಿಯಿಂದ ವರ್ತಿಸಿದರೆ ಪೋಷಕರ ಕಷ್ಟ ದೂರವಾಗಲು ಸಾಧ್ಯ ಎಂದ ಅವರು, ವಿದ್ಯೆಯನ್ನು ಒಲಿಸಿಕೊಳ್ಳುವ ಹಾಗೂ ದುಡಿಸಿಕೊಳ್ಳುವುದರ ಬಗ್ಗೆ ಗಮನವಿರಲಿ. ಬ್ಯಾಂಕಿನ ಖಾತೆಯಂತಿರುವ ಜ್ಞಾನವನ್ನು ನಿಮ್ಮ ಅಧ್ಯಯನದ ಮೂಲಕ ವೃದ್ಧಿಸಿಕೊಳ್ಳಬಹುದು ಎಂದರು.

ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಗುರಿ ಮುಟ್ಟಬೇಕಾದರೆ ನಂಬಿಕೆ ಮತ್ತು ದೃಢ ನಿಶ್ಚಯ ಇರಬೇಕು. ಮಾನವೀಯತೆ ಮತ್ತು ತನ್ನ ಸಂಪಾದನೆಯ ಬಗ್ಗೆ ತೃಪ್ತಿ ಇರುವವರು ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ, ವಿದ್ಯಾವರ್ಧಕ ಸಂಘದ ಗೌರವ ಕೋಶಾಧ್ಯಕ್ಷ ಶ್ರೀಶೈಲ ರಾಮಣ್ಣನವರ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಟಿ.ನಾಗರಾಜು, ಪ್ರೊ.ಮಂಜು, ಪ್ರೊ.ಆರ್.ಅರವಿಂದ್, ಕಿ.ಶರಣ್ಯ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »