ಮೈಸೂರಲ್ಲಿ ನಡೆಯದ ಲಾರಿ ಮುಷ್ಕರ
ಮೈಸೂರು

ಮೈಸೂರಲ್ಲಿ ನಡೆಯದ ಲಾರಿ ಮುಷ್ಕರ

June 19, 2018

ಜು.20ರಿಂದ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದೇವೆ: ಮೈಸೂರು ಜಿಲ್ಲಾ ಮಾಲೀಕರ ಸಂಘದ ಅಧ್ಯಕ್ಷ ಕೋದಂಡರಾಮು ಸ್ಪಷ್ಪನೆ

ಮೈಸೂರು: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಟ್ರಕ್ ಮಾಲೀಕರ ಒಕ್ಕೂಟ ನೀಡಿರುವ ದೇಶವ್ಯಾಪಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮೈಸೂರಿನಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಲಾರಿಗಳು ಎಂದಿನಂತೆ ಸಂಚರಿಸಿದವು. ಹಾಗೂ ಸರಕು ಸಾಗಾಣೆಗೆ ಯಾವುದೇ ತೊಂದರೆ ಕಂಡು ಬರಲಿಲ್ಲ.

ಡೀಸೆಲ್ ದರ ಏರಿಕೆ ಹಾಗೂ ಥರ್ಡ್ ಪಾರ್ಟಿ ಪ್ರೀಮಿಯಂ ದರ ಹೆಚ್ಚಳ ವಿರೋಧಿಸಿ ಅಖಿಲ ಭಾರತ ಟ್ರಕ್ ಮಾಲೀಕರ ಒಕ್ಕೂಟ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಈ ಕರೆಗೆ ಮೈಸೂರಿನ ಲಾರಿ ಮಾಲೀಕರ ಸಂಘಟನೆಗಳು ಬೆಂಬಲ ನೀಡಲಿಲ್ಲ.

ಈ ಕುರಿತು ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೋದಂಡರಾಮು, ನಾವಿಂದು ಲಾರಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು `ಮೈಸೂರು ಮಿತ್ರ’ನಿಗೆ ಸ್ಪಷ್ಪಪಡಿಸಿದ್ದಾರೆ. ರೈಲ್ವೆ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಅಬ್ದುಲ್ ಶಾಹಿದ್ ಖಾದರ್ (ಬಾಸ್) ಅವರು ಕೂಡ ಇಂದಿನ ಲಾರಿ ಮುಷ್ಕರಕ್ಕೆ ಬೆಂಬಲವಿಲ್ಲ ಎಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಲಾರಿ ಸಂಘಟನೆಗಳು ನಮ್ಮ ಸ್ಥಳೀಯ ಬೇಡಿಕೆಗಳನ್ನು ಕಡೆಗಣಿಸುತ್ತಿದ್ದಾರೆ. ಹೀಗಾಗಿ ನಾವು ಮುಷ್ಕರದಲ್ಲಿ ಪಾಲ್ಗೊಳ್ಳಲಿಲ್ಲ ಎಂದರು.

ಲೋಕಲ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ರೇವಣ್ಣ, ಬಂಡಿಪಾಳ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಯಶೇಖರ್ ಸಹ ಮುಷ್ಕರದಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ತಿಳಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ನಾವು ಸಭೆ ನಡೆಸಿ ಬಳಿಕ ನಿರ್ಧರಿಸುತ್ತೇವೆ ಎಂದು `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಈ ಮಧ್ಯೆ ಫೆಡರೇಷನ್ ಫಾರ್ ಬಾಂಬೆ ಮೋಟಾರ್ ಟ್ರಾನ್ಸ್‍ಪೋರ್ಟ್ ಆಪರೇಟರ್ಸ್, ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‍ಪೋರ್ಟ್ ಕಾಂಗ್ರೆಸ್ (ಎಐಎಂಟಿಸಿ) ಜುಲೈ 20ರಿಂದ `ಚಕ್ಕಾಜಾಂ’ ಹೆಸರಿನಲ್ಲಿ ದೇಶವ್ಯಾಪಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ ನೀಡಿದ್ದು, ಅದನ್ನು ನಾವು ಬೆಂಬಲಿಸಿ ಅಂದಿನಿಂದ ಲಾರಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದೇವೆ. ಇಂದಿನ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ ಎಂದು ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೋದಂಡರಾಮು ತಿಳಿಸಿದ್ದಾರೆ.

ಈಗಾಗಲೇ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‍ಪೋಟ್ ಕಾಂಗ್ರೆಸ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಎಸ್.ಕೆ.ಮಿತ್ತಲ್ ಅವರು ನಮ್ಮ ಬೇಡಿಕೆಗಳನ್ನು ಒಳಗೊಂಡಂತೆ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದು ಒತ್ತಾಯಿಸಿದ್ದು, ಅದಕ್ಕಾಗಿ ಜು.20ರವರೆಗೆ ಗಡುವು ನೀಡಿದ್ದೇವೆ. ಅದರಂತೆ ನಾವು ಜು.20ರಿಂದ ಅನಿರ್ಧಿಷ್ಟಾವಧಿ ಲಾರಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದೇವೆ. ಮೈಸೂರಿನಲ್ಲಿ ಸುಮಾರು 3000ಕ್ಕೂ ಹೆಚ್ಚು ಲಾರಿ, ಟ್ರಕ್‍ಗಳಿದ್ದು, ಅವೆಲ್ಲವೂ ಅಂದಿನಿಂದ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ಸ್ಪಷ್ಪಪಡಿಸಿದ್ದಾರೆ.

Translate »