ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಬೆಡ್‍ಗಳ ಕೊರತೆ: ಗರ್ಭಿಣ ಯರಿಗೆ ನೆಲದ ಹಾಸಿಗೆಯೇ ಗತಿ ಕೆ.ಆರ್.ಆಸ್ಪತ್ರೆಯಲ್ಲೂ ಇದೇ ಪರಿಸ್ಥಿತಿ
ಮೈಸೂರು

ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಬೆಡ್‍ಗಳ ಕೊರತೆ: ಗರ್ಭಿಣ ಯರಿಗೆ ನೆಲದ ಹಾಸಿಗೆಯೇ ಗತಿ ಕೆ.ಆರ್.ಆಸ್ಪತ್ರೆಯಲ್ಲೂ ಇದೇ ಪರಿಸ್ಥಿತಿ

June 19, 2018

ಮೈಸೂರು: ಮೈಸೂರು ಮಹಾರಾಜರಿಂದ ಸ್ಥಾಪನೆಗೊಂಡ ರಾಜ್ಯದ ‘ದೊಡ್ಡಾಸ್ಪತ್ರೆ’ ಎನಿಸಿರುವ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ರೋಗಿಗಳು ಬರುತ್ತಿರುವುದರಿಂದ ಇಲ್ಲಿ ಹಾಸಿಗೆಗಳ ಕೊರತೆಯಿದೆ. ಇದೇ ಸ್ಥಿತಿ ಚೆಲುವಾಂಬ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಯೂ ಕಂಡು ಬಂದಿದೆ.

ಇಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚಿನ ಮಹಿಳೆಯರು ಚಿಕಿತ್ಸೆಗೆ ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಇಲ್ಲಿ ಈಗ ಹಾಸಿಗೆಗಳ ತೀವ್ರ ಕೊರತೆ ಎದುರಾಗಿದೆ. ಈ ಕಾರಣಕ್ಕಾಗಿ ಹೆಚ್ಚುವರಿಯಾಗಿ ದಾಖಲಾಗುವ ಗರ್ಭಿಣಿಯರಿಗೆ ನೆಲದ ಮೇಲೆ ಹಾಸಿಗೆ ಹಾಕಿ ಅವಕಾಶ ಮಾಡಿಕೊಡಲಾಗಿದೆ.

ಚೆಲುವಾಂಬ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆ ಇದ್ದು, ಪ್ರತಿನಿತ್ಯ ಸರಾಸರಿ 100 ರಿಂದ 110 ಹೆರಿಗೆ ಪ್ರಕರಣಗಳು ದಾಖಲಾಗುತ್ತಿವೆ. ಈ ಪೈಕಿ 50-55 ಸಾಮಾನ್ಯ ಹೆರಿಗೆ, 10ರಿಂದ 15 ಸಿಸೇರಿಯನ್ ಶಸ್ತ್ರಚಿಕಿತ್ಸೆಯಡಿ ಹೆರಿಗೆಗಳಾಗುತ್ತಿವೆ.

ಆದರೆ ಇಲ್ಲಿ ಬೆಡ್‍ಗಳ ಕೊರತೆ ಇದೆ. ಚೆಲುವಾಂಬ ಆಸ್ಪತ್ರೆಯಲ್ಲಿರುವ ಬೆಡ್‍ಗಳ ಸಂಖ್ಯೆ 420. ಮಂಜೂರಾಗಿರುವ ಬೆಡ್‍ಗಳ ಸಂಖ್ಯೆ 470. ಅಂದರೆ 50 ಬೆಡ್‍ಗಳ ಕೊರತೆ ಇದೆ. ಮಂಜೂರಾಗಿರುವಷ್ಟು ಬೆಡ್‍ಗಳನ್ನು ಹಾಕಲು ಚೆಲುವಾಂಬ ಕಟ್ಟಡದಲ್ಲಿ ಕೊಠಡಿಗಳ ಕೊರತೆಯೂ ಇದೆ. ಇರುವಷ್ಟು ಜಾಗದಲ್ಲಿ ಬೆಡ್‍ಗಳನ್ನು ಹಾಕಲಾಗಿದ್ದು, ಉಳಿದ ಬೆಡ್‍ಗಳಿಗೆ ಅಗತ್ಯ ಕೊಠಡಿಗಳಿಲ್ಲದಿರುವುದೇ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.

ಬೆಡ್‍ಗಳು ಸಾಲದಾದಾಗ ಅನಿವಾರ್ಯವಾಗಿ ನೆಲದ ಮೇಲೆಯೇ ಹಾಸಿಗೆಗಳನ್ನು ಹಾಕಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ `ಮೈಸೂರು ಮಿತ್ರ;’ನಿಗೆ ಸುಮಾರು 20ರಿಂದ 25 ಮಂದಿ ಗರ್ಭಿಣಿಯರಿಗೆ ನೆಲದ ಮೇಲೆಯೆ ಹಾಸಿಗೆಯಲ್ಲಿಯೇ ಚಿಕಿತ್ಸೆ ನೀಡಿದ್ದು ಕಂಡು ಬಂದಿತು. ಇದು ಚೆಲುವಾಂಬ ಆಸ್ಪತ್ರೆಗಷ್ಟೇ ಸೀಮಿತವಾಗಿಲ್ಲ. ಇದೇ ಪರಿಸ್ಥಿತಿ ಕೆ.ಆರ್.ಆಸ್ಪತ್ರೆಯಲ್ಲಿಯೂ ಕಂಡು ಬರುತ್ತಿದೆ.

ನನ್ನ ಮೊಮ್ಮಗಳಿಗೆ ಹೆರಿಗೆಗೆಂದು ಇಲ್ಲಿಗೆ ಸೇರಿಸಿದ್ದೇನೆ. ಆದರೆ ಅವಳಿಗೆ ಬೆಡ್ ಇಲ್ಲ ಅಂತ ಚೆಲುವಾಂಬ ಆಸ್ಪತ್ರೆ ಸಿಬ್ಬಂದಿ ನೆಲದ ಮೇಲೆ ಹಾಸಿಗೆ ಹಾಕಿಕೊಟ್ಟಿದ್ದಾರೆ. – ಶಿವಮ್ಮ, ಹಿರಿಯ ಮಹಿಳೆ.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಆಸ್ಪತ್ರೆಯ ಡೀನ್ ಹಾಗೂ ಡೈರೆಕ್ಟರ್ ಡಾ.ಸಿ.ಪಿ.ನಂಜರಾಜ್ ಅವರ ಪ್ರಕಾರ, ಕೆ.ಆರ್.ಅಸ್ಪತ್ರೆಯ ಬೆಡ್ ಸಾಮಥ್ರ್ಯ 1050. ಚೆಲುವಾಂಬದಲ್ಲಿ 420, ಆದರೆ ಮಂಜೂರಾದದ್ದು ಸೇರಿ ಒಟ್ಟು 1940.

ಕೆ.ಆರ್.ಆಸ್ಪತ್ರೆ ಒಪಿಡಿಯಲ್ಲಿ 1250ರಿಂದ 1300 ರೋಗಿಗಳು ಪ್ರತಿನಿತ್ಯ ಬರುತ್ತಾರೆ. ಇದರಲ್ಲಿ 250ರಿಂದ 300 ಒಳರೋಗಿಗಳು. ಪ್ರಯೋಗಾಲಯ ಪ್ರಕರಣಗಳಿಗೆ ದಿನನಿತ್ಯ 600-700 ಮಂದಿ ಬರುತ್ತಿದ್ದಾರೆ. ಪ್ರತಿನಿತ್ಯ ಮೇಜರ್ ಸರ್ಜರಿ 40, ಸಣ್ಣ ಪ್ರಮಾಣದ ಸರ್ಜರಿಗಳು 50 ನಡೆಸಲಾಗುತ್ತಿದೆ.

ಚೆಲುವಾಂಬ ಆಸ್ಪತ್ರೆಯಲ್ಲಿ ಒಪಿಡಿಗೆ 350ರಿಂದ 400 ಮಂದಿ ಭೇಟಿ ನೀಡುತ್ತಿದ್ದು, 100ರಿಂದ 110 ಹೆರಿಗೆಗಳನ್ನು ಮಾಡಲಾಗುತ್ತಿದೆ. ಇದರಲ್ಲಿ 50-55 ಸಾಮಾನ್ಯ ಹೆರಿಗೆ, 10-15 ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.
ಪಿಕೆಟಿಬಿಯಲ್ಲಿ 30ರಿಂದ 35 ಹೊರ ರೋಗಿಗಳು, 5-6 ಒಳರೋಗಿಗಳಿರುತ್ತಾರೆ. ಒಟ್ಟಾರೆ 320 ವೈದ್ಯರು, 190 ಸ್ಟಾಫ್ ನರ್ಸ್, 55 ಟೆಕ್ನೀಷಿಯನ್‍ಗಳು, 40 ಕ್ಲರಿಕಲ್ ಸ್ಟಾಫ್ ಹಾಗೂ ಹೊರ ಗುತ್ತಿಗೆಯಡಿ 300-350 ಸಿ ಮತ್ತು ಡಿ ಗ್ರೂಪ್ ಸಿಬ್ಬಂದಿ ಸೇರಿದಂತೆ ಮಾನವ ಶಕ್ತಿ ಬಳಸಿಕೊಳ್ಳಲಾಗುತ್ತಿದೆ ಎಂದರು.

ಚೆಲುವಾಂಬ ಆಸ್ಪತ್ರೆಯಲ್ಲಿ ಈಗಿರುವ ಬೆಡ್, ಕಟ್ಟಡ, ಆರೋಗ್ಯ ಸಿಬ್ಬಂದಿಗಳು ಸಾಕಾಗುತ್ತಿಲ್ಲ. ಕೆ.ಆರ್.ಆಸ್ಪತ್ರೆ, ಚೆಲುವಾಂಬ, ಟ್ರಾಮಾ ಸೆಂಟರ್ ಸೇರಿದಂತೆ ಒಟ್ಟು 1200 ಸ್ಟಾಫ್ ನರ್ಸ್‍ಗಳ ಅಗತ್ಯವಿದೆ. ಈಗಾಗಲೇ ಈ ಬಗ್ಗೆ ಪ್ರಸ್ತಾವನೆ ಹೋಗಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಅದಿನ್ನೂ ಮಂಜೂರಿಗಾಗಿ ಕಾದಿದ್ದೇವೆ ಎಂಬುದು ಡಾ.ನಂಜರಾಜ್ ಹೇಳಿಕೆ.

ಮಹಾರಾಜರ ಕಾಲದಲ್ಲಿ ಅಂದಿನ ಜನಸಂಖ್ಯೆಗೆ ತಕ್ಕಂತೆ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ನಿರ್ಮಾಣವಾಗಿತ್ತು. ಆದರೆ ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ನೋಡಿದರೆ ಕೊರತೆ ಎದುರಾಗಿದೆ ಎನ್ನುವ ಅವರು, ಈಗ ಸರ್ಕಾರದ ಮುಂದಿರುವ ಪ್ರಸ್ತಾವನೆ ಮಂಜೂರಾದರೆ ಕೊರತೆ ನೀಗಬಹುದು ಎಂಬುದು ಅವರ ಅಭಿಪ್ರಾಯ.

ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ ಜಿಲ್ಲೆಗಳಲ್ಲೂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳಿದ್ದರೂ, ಅಲ್ಲಿನ ವೈದ್ಯರು, ಸಿಬ್ಬಂದಿ ಕೊರತೆಯಿಂದಲೋ, ಚಿಕಿತ್ಸೆಗೆ ಅಗತ್ಯ ಉಪಕರಣಗಳಿಲ್ಲದಿದ್ದರಿಂದಲೋ ರೋಗಿಗಳನ್ನು ಮೈಸೂರು ಕೆ.ಆರ್.ಆಸ್ಪತ್ರೆಗೆ ರೆಫರ್ ಮಾಡುವುದರಿಂದ ಇಲ್ಲಿ ಹೆಚ್ಚಿನ ರೋಗಿಗಳ ಒತ್ತಡ ಉಂಟಾಗುತ್ತಿದೆ.

ಅಲ್ಲದೆ ಇದು ದೊಡ್ಡಾಸ್ಪತ್ರೆ, ಇಲ್ಲಿಯೇ ಚಿಕಿತ್ಸೆ ಪಡೆಯಬೇಕು. ಇಲ್ಲಿಯೇ ಹೆರಿಗೆ ಆಗಬೇಕು ಎಂಬ ನಂಬಿಕೆ ಸಾಕಷ್ಟು ಜನರಲ್ಲಿದೆ. ಈ ಕಾರಣಕ್ಕಾಗಿಯೂ ಇಲ್ಲಿ ಒತ್ತಡ ಹೆಚ್ಚಾಗಿದೆ. ಆದರೆ ಅದಕ್ಕೆ ವೈದ್ಯರು, ಸಿಬ್ಬಂದಿ, ಕಟ್ಟಡದ ಕೊರತೆ ಎದುರಾಗಿದೆ ಎನ್ನುತ್ತಾರೆ.

 ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಯ ಸಾಮಥ್ರ್ಯ ಇಲ್ಲಿರುವ ಜನಸಂಖ್ಯೆಗೆ ಸಾಕಾಗಬಹುದು. ಆದರೆ ಹೊರ ಜಿಲ್ಲೆಗಳಿಂದ ರೆಫರ್ ಆಗಿ ಬರುವ ರೊಗಿಗಳ ಒತ್ತಡವೂ ಇಲ್ಲಿದೆ. ಹೀಗೆ ಹೊರಗಡೆಯಿಂದ ಇಲ್ಲಿಗೆ ಚಿಕಿತ್ಸೆಗಾಗಲೀ, ಹೆರಿಗೆಗಾಗಲೀ ಬರುವವರನ್ನು ಬೇಡ ಎನ್ನಲಾಗುತ್ತದೆಯೇ? ಹಾಗೆ ಮಾಡಲು ಸಾಧ್ಯವಿಲ್ಲ. – ಡಾ.ಸಿ.ಪಿ.ನಂಜರಾಜ್, ಡೀನ್ ಅಂಡ್ ಡೈರೆಕ್ಟರ್ ಎಂಎಂಸಿ.

Translate »