ಜುಲೈ ಮೊದಲ ವಾರದೊಳಗೆ ಕೆಆರ್‌ಎಸ್‌, ಕಬಿನಿ ಜಲಾಶಯದಿಂದ ನಾಲೆಗೆ ನೀರು ಹರಿಸದಿದ್ದರೆ ಪ್ರತಿಭಟನೆ
ಮೈಸೂರು

ಜುಲೈ ಮೊದಲ ವಾರದೊಳಗೆ ಕೆಆರ್‌ಎಸ್‌, ಕಬಿನಿ ಜಲಾಶಯದಿಂದ ನಾಲೆಗೆ ನೀರು ಹರಿಸದಿದ್ದರೆ ಪ್ರತಿಭಟನೆ

June 19, 2018

ಮೈಸೂರು: ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದಿಂದ ಜುಲೈ ಮೊದಲ ವಾರದೊಳಗೆ ನಾಲೆಗಳಿಗೆ ನೀರು ಬಿಡದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ವೇಣುಗೋಪಾಲ್ ಎಚ್ಚರಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ಹಾಗೂ ಕೊಡಗಿನ ವಿವಿಧೆಡೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಬಿನಿ ಹಾಗೂ ಕೆಆರ್‌ಎಸ್‌ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ನಡುವೆ ಕಳೆದ ನಾಲ್ಕೈದು ದಿನಗಳಿಂದ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಕಪಿಲಾ ನದಿಯ ಮೂಲಕ ಬಿಡುತ್ತಿ ರುವ ನೀರನ್ನು ಎಡ ಹಾಗೂ ಬಲದಂಡೆಯ ಮೂಲಕ ಹರಿಸಿದ್ದರೆ ರೈತರು ಅಲ್ಪ ಪ್ರಮಾಣದ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು. ಆದರೆ ನದಿಗೆ ನೀರು ಬಿಡುವ ಮೂಲಕ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ ಎರಡು ವರ್ಷಗಳಿಂದ ಸರಿಯಾಗಿ ಮಳೆಯೂ ಬಂದಿಲ್ಲ. ನಾಲೆಗಳಲ್ಲಿ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದೆ ರೈತರು ತೊಂದರೆಗೀಡಾಗಿದ್ದಾರೆ. ಆದರೆ ಈ ವರ್ಷ ಉತ್ತಮ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗಳಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಜುಲೈ ಮೊದಲ ವಾರದೊಳಗೆ ಎರಡು ಜಲಾಶಯಗಳಿಂದ ನಾಲೆಗಳಿಗೆ ನೀರು ಬಿಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು.

ನರ್ಸರಿ ಆರಂಭಿಸಿ: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ನರ್ಸರಿ ಆರಂಭಿಸುವುದು ಅವಶ್ಯವಾಗಿದೆ. ಪ್ರಾಥಮಿಕ ಪೂರ್ವ ಶಿಕ್ಷಣವನ್ನು ಮಕ್ಕಳಿಗೆ ನೀಡುವುದಕ್ಕಾಗಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ನರ್ಸರಿ ಆರಂಭಿಸಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಜೂ.21ರಂದು ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸರ್ವ ಜನಾಂಗ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಕೆ.ಚೆಲುವಪ್ಪ, ಬಾಳಗುಣಸೆ ಮಂಜುನಾಥ್, ಗುರುಮೂರ್ತಿ, ಬಿ.ಸಿ.ಮುದ್ದಲಿಂಗೇಗೌಡ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹರ್ಷಿಯಾ ಇದ್ದರು.

Translate »