200 ಪ್ರಶ್ನೆಗಳಿಗೆ ಉತ್ತರಿಸಿದ ಮುನಿಶ್ರೀ ಚಂದ್ರಪ್ರಭ್ ಚಂದ್ರ ಸಾಗರ್‍ಜಿ
ಮೈಸೂರು

200 ಪ್ರಶ್ನೆಗಳಿಗೆ ಉತ್ತರಿಸಿದ ಮುನಿಶ್ರೀ ಚಂದ್ರಪ್ರಭ್ ಚಂದ್ರ ಸಾಗರ್‍ಜಿ

August 19, 2019

ಮೈಸೂರು, ಆ.18(ಎಂಟಿವೈ)- ಮೈಸೂರಿನ ಗಣ ಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಭಾನುವಾರ ನಡೆದ `ಮಹಾ ಶತಾವಧಾನ್’ ಕಾರ್ಯ ಕ್ರಮದಲ್ಲಿ ಮುನಿಶ್ರೀ ಚಂದ್ರಪ್ರಭ್ ಚಂದ್ರ ಸಾಗರ್‍ಜಿ ಭಕ್ತರ 200 ಪ್ರಶ್ನೆಗಳಿಗೆ ತದೇಕಚಿತ್ತದಿಂದ ಉತ್ತರಿಸುವ ಮೂಲಕ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದರು.

ಶ್ರೀ ಸುಮತಿನಾಥ್ ಜೈನ್ ಶ್ವೇತಾಂಬರ ಮೂರ್ತಿ ಪೂಜಕ ಸಂಘ ಮತ್ತು ಮಹಾ ಶತಾವಧಾನ ಸಮಿತಿ ಸಂಯುಕ್ತಾಶ್ರಯದಲ್ಲಿ ಮಹಾ ಶತಾವಧಾನ ಕಾರ್ಯಕ್ರಮ ದಲ್ಲಿ ಭಕ್ತರು ಕ್ರಮಾನುಸಾರ 1ರಿಂದ 200ರವರೆಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆ ಗಳನ್ನು ಆಲಿಸಿದ ಮುನಿಶ್ರೀ ಚಂದ್ರಪ್ರಭ್ ಚಂದ್ರ ಸಾಗರ್‍ಜಿ ಬಳಿಕ ಪಟಪಟನೆ ಉತ್ತರಿಸಿದರು. 200 ಪ್ರಶ್ನೆಗಳನ್ನು ಆಲಿಸಿ, ಅದನ್ನು ನೆನಪಿನಲ್ಲಿಟ್ಟುಕೊಂಡು, ಪಶ್ನೆ ಕೇಳುವ ಸರದಿ ಮುಗಿದ ನಂತರ 1ರಿಂದ 200ರವರೆಗಿನ ಪ್ರಶ್ನೆ ಗಳಿಗೆ ಉತ್ತರ ನೀಡಿದರು. ಬಳಿಕ 200ನೇ ಪ್ರಶ್ನೆ ಯಿಂದ 1ನೇ ಪ್ರಶ್ನೆವರೆಗೆ ಹಿಮ್ಮುಖವಾಗಿ ಹಾಗೂ ಮಧ್ಯೆ ಮಧ್ಯೆ ಆಯ್ದ ಸಂಖ್ಯೆಯ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ವರನ್ನು ಹೌಹಾರುವಂತೆ ಮಾಡಿದರು.

ಶತಾವಧಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೈಸೂ ರಿನ ವಿವಿಧ ಬಡಾವಣೆಗಳಿಗೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ನಾದ ಮಂಟಪದಲ್ಲಿ ಕಿಕ್ಕಿರಿದು ತುಂಬಿದ್ದವರನ್ನು 9 ತಂಡ ವಾಗಿ ವಿಂಗಡಿಸಲಾಗಿತ್ತು. 20ಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರು ಪ್ರಶ್ನೆ ಕೇಳುವವರಿಗೆ ಮೈಕ್ ಕೊಡುವ ಮೂಲಕ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆಲ್ಲರಿಗೂ ಕೇಳುವ ಪ್ರಶ್ನೆಗಳು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ, ಎಷ್ಟು ಪ್ರಶ್ನೆ ಕೇಳಬೇಕೆಂಬ ಮಾಹಿತಿ ಇರುವ ಬುಕ್‍ಲೆಟ್ ನೀಡಲಾಗಿತ್ತು. ವಿಜ್ಞಾನ, ಗಣಿತ, ಧರ್ಮ, ಆಧ್ಯಾತ್ಮ, ತತ್ವಜ್ಞಾನ, ಯೋಗ, ಶ್ಲೋಕ, ಸ್ಥಳಗಳು, ನದಿಗಳು ಸೇರಿದಂತೆ ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಶ್ನೆಗಳ ಸಂಖ್ಯೆಯನ್ನು ನಮೂದಿಸಿಕೊಂಡು ಪ್ರಶ್ನೆಗಳನ್ನು ಕೇಳ ಲಾಯಿತು. ದ್ಯಾನಸ್ಥಿತಿ ಕುಳಿತು ಎಲ್ಲವನ್ನು ಆಲಿಸಿದ ಮುನಿಶ್ರೀ ಚಂದ್ರಪ್ರಭ ಚಂದ್ರ ಸಾಗರ್‍ಜೀ ಪ್ರಶ್ನೆಗಳಿಗೆ ಉತ್ತರ ಹೇಳುವ ಮೂಲಕ ತಮ್ಮ ನೆನಪಿನ ಶಕ್ತಿಯನ್ನು ಬಿಚ್ಚಿಟ್ಟರು. 2014ರಲ್ಲಿ ಮುಂಬೈನಲ್ಲಿ ಶತಾವಧಾನ ನಡೆಸಿ ಕೊಟ್ಟು 100 ಪ್ರಶ್ನೆಗಳಿಗೂ ಅನುಕ್ರಮವಾಗಿ ಉತ್ತರಿಸಿ ಇವರು 2018ರಲ್ಲಿ ಬೆಂಗಳೂರಿನಲ್ಲಿ ಮಹಾ ಶತಾವ ಧಾನ ನಡೆಸಿಕೊಟ್ಟಿದ್ದರು. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಮಹಾ ಶತಾವಧಾನ ನಡೆಸಿಕೊಟಿದ್ದಾರೆ.

ಮಹಾ ಶತಾವಧಾನ್ ಕಾರ್ಯಕ್ರಮವನ್ನು ಶ್ರೀ ಗಣ ಪತಿ ಸಚ್ಚಿದಾನಂದ ಸ್ವಾಮೀಜಿ ಉದ್ಘಾಟಿಸಿದರು. ಕಾರ್ಯ ಕ್ರಮದಲ್ಲಿ ಜೈನ ಮುನಿಶ್ರೀ ನಯಚಂದ್ರ ಸಾಗರ್ ಸುರ್ಜಿ, ಮುನಿಶ್ರೀ ಅಜಿತ್ ಚಂದ್ರ ಸಾಗರ್‍ಜಿ, ಬಾಲ ಮುನಿ ಪದ್ಮ ಪ್ರಭಚಂದ್ರ ಸಾಗರ್‍ಜಿ, ಜೈನ್ ಸಂಘದ ಅಶೋಕ್ ಜೈನ್, ಬಿ.ಎ.ಕೈಲಾಸ್ ಚಂದ್ ಜೈನ್, ಸುಮತಿನಾಥ್ ನವಯುವಕ ಮಂಡಲಿ ಅಧ್ಯಕ್ಷ ಪ್ರವೀಣ್ ಲುಂಕಾರ್ ಹಾಗೂ ಇತರರು ಉಪಸ್ಥಿತರಿದ್ದರು.

Translate »