ಪ್ರಯಾಣಿಕರ ಕಣ್ಣೆದುರೇ ಬಸ್ ನಿಲ್ದಾಣದಲ್ಲಿ ಭಾವನ ಕೊಚ್ಚಿ, ಕೊಂದ ಭಾಮೈದ
ಮೈಸೂರು

ಪ್ರಯಾಣಿಕರ ಕಣ್ಣೆದುರೇ ಬಸ್ ನಿಲ್ದಾಣದಲ್ಲಿ ಭಾವನ ಕೊಚ್ಚಿ, ಕೊಂದ ಭಾಮೈದ

September 18, 2018

ನಂಜನಗೂಡು:  ಸಹೋದರಿ ಸಾವಿಗೆ ಕಾರಣನಾಗಿದ್ದ ಭಾವನನ್ನು ಲಾಂಗ್‍ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಆರೋಪಿ, ಪೊಲೀಸರಿಗೆ ಶರಣಾಗಿರುವ ಭಯಾನಕ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ನಿವಾಸಿ ಶಿವಣ್ಣ(28)ನನ್ನು ಆತನ ಭಾಮೈದ ರಂಗಸ್ವಾಮಿ, ನಗರದ ನೂತನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಎದುರೇ ಬರ್ಬರವಾಗಿ ಹತ್ಯೆ ಮಾಡಿದ್ದು, ಈ ಘಟನೆ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. ನಗರದ ಸರಸ್ವತಿ ಕಾಲೋನಿ ನಿವಾಸಿ ರಂಗಸ್ವಾಮಿ ಅವರ ಸಹೋದರಿಯನ್ನು ವಿವಾಹವಾಗಿದ್ದ ಶಿವಣ್ಣ, ಆರಂಭದಿಂದಲೂ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ತೀವ್ರವಾಗಿ ನೊಂದಿದ್ದ ಆಕೆ, 8 ತಿಂಗಳ ಹಿಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಸಹೋದರಿ ಸಾವಿನಿಂದ ಜರ್ಝರಿತನಾಗಿದ್ದ ರಂಗಸ್ವಾಮಿ, ಶಿವಣ್ಣನ ಮೇಲೆ ಜಿದ್ದು ಬೆಳೆಸಿಕೊಂಡಿದ್ದ.

ಅಲ್ಲದೆ 2 ಬಾರಿ ಹತ್ಯೆಗೂ ಪ್ರಯತ್ನಿಸಿದ್ದ ಎನ್ನಲಾಗಿದೆ. ಸೇಡು ತೀರಿಸಿಕೊಳ್ಳಲು ಸಮಯ ಕಾಯುತ್ತಿದ್ದ ರಂಗಸ್ವಾಮಿ, ಸೋಮವಾರ ಸಂಜೆ ಸುಮಾರು 6.30ರ ವೇಳೆಯಲ್ಲಿ ನೂತನ ಬಸ್ ನಿಲ್ದಾಣದಲ್ಲಿ ಶಿವಣ್ಣ ನಿಂತಿರುವುದನ್ನು ಗಮನಿಸಿ, ಲಾಂಗ್‍ನಿಂದ ಏಕಾಏಕಿ ಹಲ್ಲೆ ನಡೆಸಿದ್ದಾನೆ. ತಲೆ, ಕತ್ತು ಸೇರಿದಂತೆ ಮನಸ್ಸೋಇಚ್ಛೆ ಹಲ್ಲೆ ನಡೆಸಿದ್ದರ ಪರಿಣಾಮ ಶಿವಣ್ಣ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕ್ಷಣಾರ್ಧದಲ್ಲಿ ನಡೆದ ಈ ಭಯಾನಕ ಘಟನೆಯನ್ನು ಕಂಡ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಹತ್ಯೆಯಾದ ಶಿವಣ್ಣನ ಬಳಿಯೂ ಮಾರಕಾಸ್ತ್ರಗಳು ಪತ್ತೆಯಾದ ಹಿನ್ನೆಲೆಯಲ್ಲಿ ರೌಡಿ ಕಾಳಗವಿರಬಹುದೆಂದು ಭಾವಿಸಿದ್ದ ಸಾರ್ವಜನಿಕರಲ್ಲಿ ಆತಂಕ ಮಡುಗಟ್ಟಿತ್ತು.

ಹತ್ತಾರು ವರ್ಷಗಳಿಂದ ನೆಮ್ಮದಿ ಕೇಂದ್ರದಂತಿದ್ದ ನಂಜನಗೂಡಿನಲ್ಲಿ ರೌಡಿಗಳ ಅಟ್ಟಹಾಸ ಆರಂಭವಾಯಿತೆಂಬ ಭಯ ಎಲ್ಲೆಡೆ ಆವರಿಸಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ ದರಲ್ಲದೆ, ಹತ್ಯೆಯ ಬಗ್ಗೆ ಸ್ಥಳದಲ್ಲಿದ್ದವರನ್ನು ವಿಚಾರಿಸಿದರು. ಆದರೆ ಅಲ್ಲಿದ್ದ ಸಾರಿಗೆ ಸಂಸ್ಥೆ ಸಿಬ್ಬಂದಿ ಸೇರಿದಂತೆ ಯಾರೊಬ್ಬರೂ ಹತ್ಯೆ ಮಾಡಿದವನು ಯಾರೆಂದು ಗೊತ್ತಿಲ್ಲ ಎಂದಷ್ಟೇ ಪ್ರತಿಕ್ರಿಯಿಸಿದರು. ಹತ್ಯೆಯಾದ ಶಿವಣ್ಣನ ಜೇಬಿನಲ್ಲಿದ್ದ ರಕ್ತಸಿಕ್ತ ಮಾರಕಾಸ್ತ್ರ ಹಾಗೂ ಮೊಬೈಲ್ ವಶಪಡಿಸಿಕೊಂಡ ಪೊಲೀಸರು, ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸ್ನೇಹಾ ಸ್ಥಳ ಪರಿಶೀಲನೆ ನಡೆಸಿದರು. ಸಾರ್ವಜನಿಕರೆದುರು ಹತ್ಯೆ ಮಾಡಿ, ಕಣ್ಮರೆಯಾಗಿದ್ದ ರಂಗಸ್ವಾಮಿ, ತನ್ನ ದ್ವಿಚಕ್ರ ವಾಹನದಲ್ಲೇ ಪೊಲೀಸ್ ಠಾಣೆಗೆ ತೆರಳಿ, ಶರಣಾಗಿದ್ದಾನೆ. ತನ್ನ ಸಹೋದರಿಗೆ ನಿರಂತರವಾಗಿ ಕಿರುಕುಳ ನೀಡಿ, ಆಕೆಯ ಆತ್ಮಹತ್ಯೆಗೆ ಕಾರಣನಾಗಿದ್ದ ಶಿವಣ್ಣನನ್ನು, ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಪಟ್ಟಣ ಠಾಣೆಯ ಅಧಿಕಾರಿ ಆನಂದ, ಸಿಪಿಐ ಶಿವಮೂರ್ತಿ ಆರೋಪಿಯ ವಿಚಾರಣೆ ಮುಂದುವರಿಸಿದ್ದಾರೆ.

Translate »