ಮೈಸೂರಲ್ಲಿ ಪ್ರಧಾನಿ ಮೋದಿಯವರ  ಹುಟ್ಟುಹಬ್ಬ ಸದ್ಭಾವನಾ ದಿನವಾಗಿ ಆಚರಣೆ
ಮೈಸೂರು

ಮೈಸೂರಲ್ಲಿ ಪ್ರಧಾನಿ ಮೋದಿಯವರ  ಹುಟ್ಟುಹಬ್ಬ ಸದ್ಭಾವನಾ ದಿನವಾಗಿ ಆಚರಣೆ

September 18, 2018

ಮೈಸೂರು: ಕೆಆರ್ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರ ನೇತೃತ್ವದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಸದ್ಭಾವನಾ ದಿನವಾಗಿ ಆಚರಿಸಲಾಯಿತು.

ಕೆಆರ್ ಕ್ಷೇತ್ರದ 20 ವಾರ್ಡ್‍ಗಳ ವ್ಯಾಪ್ತಿ ಯಲ್ಲಿ ಸ್ವಚ್ಛತಾ ಶ್ರಮದಾನ ನಡೆಸುವುದ ರೊಂದಿಗೆ ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು, ಶಿಕ್ಷಕರು ಸೇರಿದಂತೆ ಹಲವರನ್ನು ಸನ್ಮಾನಿಸುವ ಮೂಲಕ ಮೋದಿಯವರ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಎ. ರಾಮದಾಸ್, ವಿಶ್ವದಲ್ಲಿ ಭಾರತ ದೇಶವನ್ನು ಗುರುವಿನ ಸ್ಥಾನಕ್ಕೆ ತರುವ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ. ಹೀಗಾಗಿ ಅವರು ಕೇವಲ ನಮ್ಮ ಪಕ್ಷಕ್ಕೆ ಮಾತ್ರ ಸೀಮಿತರಲ್ಲ. ಅವರು ಒಬ್ಬ ವಿಶ್ವ ನಾಯಕರಾಗಿ ಹೊರಹೊಮ್ಮಿರುವ ಮೇರು ವ್ಯಕ್ತಿತ್ವ ಎಂದು ನುಡಿದರು.

`ಸ್ವಚ್ಛ ಭಾರತ’ ಮೋದಿಯವರ ಕನಸು. ಅವರ ಕಲ್ಪನೆಯಲ್ಲಿ ಸ್ವಚ್ಛತೆ ಎಂದರೆ ಕೇವಲ ಪರಿಸರದ ಸ್ವಚ್ಛತೆ ಮಾತ್ರವಲ್ಲ. ಬದಲಾಗಿ ದೇಶದ ಆಡಳಿತ ವ್ಯವಸ್ಥೆಯಲ್ಲೂ ಸ್ವಚ್ಛತೆ ಕಾಯ್ದುಕೊಳ್ಳುವುದು ಅವರ ಸಂಕಲ್ಪವಾ ಗಿದೆ. ಇಂದು ಕೆಆರ್ ಕ್ಷೇತ್ರದ ಎಲ್ಲಾ 20 ವಾರ್ಡ್‍ಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದ್ದು, ಮುಂದಿನ ಭಾನುವಾರದಿಂದ ಪ್ರತಿ ಭಾನುವಾರಗಳಂದು ಕ್ಷೇತ್ರದ ಎಲ್ಲಾ ವಾರ್ಡ್‍ಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಶ್ರಮದಾನ ಮುಂದುವರೆಯಲಿದೆ. ಆ ಮೂಲಕ ಮೈಸೂರು ನಗರ ದೇಶದ ಮೊಟ್ಟ ಮೊದಲ ಸ್ವಚ್ಛ ನಗರವಾಗಿ ಹೊರಹೊಮ್ಮಲು ಶ್ರಮಿ ಸಲಾಗುವುದು ಎಂದು ನುಡಿದರು.

ಬಳಸಿ ಹಿಂತಿರುಗಿಸಲು ಸ್ಟೀಲ್ ಪದಾರ್ಥ ಗಳನ್ನು ಕೊಡುತ್ತೇವೆ: ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ಕಾಯಿಲೆ ಬರುವ ಸಾಧ್ಯತೆಯನ್ನು ವಿಶ್ವಸಂಸ್ಥೆ ಪ್ರಕಟಿಸಿದೆ. ಹೀಗಾಗಿ ನಾವು ಪ್ಲಾಸ್ಟಿಕ್‍ಗೆ ಪರ್ಯಾಯ ಬಳಕೆಗೆ ಒತ್ತು ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಯಾರೇ ಸಭೆ-ಸಮಾರಂಭ ಮಾಡಿದರೂ ಅವರಿಗೆ ಉಚಿತವಾಗಿ ಸ್ಟೀಲ್ ಪದಾರ್ಥ ಗಳನ್ನು ನೀಡಿ ಮತ್ತೆ ಹಿಂತಿರುಗಿಸುವ ವ್ಯವಸ್ಥೆ ಮಾಡಲಾಗುವುದು. 6 ತಿಂಗಳ ಒಳಗೆ ಈ ನೂತನ ವ್ಯವಸ್ಥೆಗೆ ಚಾಲನೆ ನೀಡಲಾಗು ವುದು. ಜೊತೆಗೆ ಕಸರಹಿತ ಅಡುಗೆ ಮನೆ ಪರಿಕಲ್ಪನೆಯೊಂದಿಗೆ ಒಂದು ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗು ವುದು ಎಂದು ರಾಮದಾಸ್ ತಿಳಿಸಿದರು.

ಸ್ಟ್ರಾಂಗ್ ಇಂಡಿಯಾ: ದೇಶ ಕಾಯುವ ಯೋಧರಿಗೆ ಸನ್ಮಾನ ಮಾಡುವುದು ಪ್ರಧಾನಿ ಮೋದಿಯವರಿಗೆ ಸನ್ಮಾನ ಮಾಡಿದಂತೆ. ಈ ಹಿನ್ನೆಲೆಯಲ್ಲಿ ಇಂದು ಹಲವು ಯೋಧ ರಿಗೆ ಸನ್ಮಾನ ಮಾಡಲಾಗುವುದು. ಕೆಆರ್ ಕ್ಷೇತ್ರದಲ್ಲಿರುವ 80ಕ್ಕೂ ಹೆಚ್ಚು ಪ್ರೌಢಶಾಲೆ ಗಳಲ್ಲಿ ಪ್ರತಿ ಶನಿವಾರ `ಸ್ಟ್ರಾಂಗ್ ಇಂಡಿಯಾ (ಸದೃಢ ಭಾರತ)’ ಪರಿಕಲ್ಪನೆಯಡಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ನಡೆಸಲಾ ಗುವುದು. ಇದಕ್ಕಾಗಿ ಈಗಾಗಲೇ ಜಿಎಸ್‍ಎಸ್‍ಎಸ್ ಫೌಂಡೇಶನ್ ಸಂಸ್ಥಾಪಕ ಶ್ರೀಹರಿ ನೇತೃತ್ವ ದಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದರು.

ಇದೇ ವೇಳೆ ಕೆಆರ್ ಕ್ಷೇತ್ರದಲ್ಲಿ ನೆಲೆಸಿರುವ 27 ಮಂದಿ ನಿವೃತ್ತ ಯೋಧರನ್ನು ಸನ್ಮಾ ನಿಸಲಾಯಿತು. ಜೊತೆಗೆ ಕ್ಷೇತ್ರದ 4 ಸರ್ಕಾರಿ ಶಾಲೆ ಹಾಗೂ 3 ಖಾಸಗಿ ಶಾಲೆಗಳು ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100ಕ್ಕೆ 100ರಷ್ಟು ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಈ ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಲ್ಲದೆ, ಸೆ.17ರ ಬೆಳಿಗ್ಗೆ 12 ಗಂಟೆಯಿಂದ ರಾತ್ರಿ 12 ಗಂಟೆಯವ ರೆಗೆ ಜನ್ಮತಾಳುವ ಮಕ್ಕಳಿಗೆ ಬೇಬಿ ಕಿಟ್ ನೀಡುವ ಕಾರ್ಯಕ್ರಮ ಏರ್ಪಡಿಸಿದ್ದು, ಇದರ ಭಾಗವಾಗಿ ಈ ಅವಧಿಯಲ್ಲಿ ಹುಟ್ಟಿದ ಐದು ಮಕ್ಕಳ ಪೋಷಕರನ್ನು ಸನ್ಮಾನಿಸಿ ಬೇಬಿ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.

ಸ್ವಚ್ಛತಾ ಶ್ರಮದಾನ: ಕೆಆರ್ ಕ್ಷೇತ್ರದ 20 ವಾರ್ಡ್‍ಗಳಲ್ಲಿ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಸ್ವಚ್ಛತಾ ಶ್ರಮದಾನ ನಡೆಸ ಲಾಯಿತು. ಇದೇ ವೇಳೆ ಶಾರದಾದೇವಿ ನಗರದಲ್ಲಿ ಐವರು ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮ ದಲ್ಲಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಜಿಎಸ್‍ಎಸ್‍ಎಸ್ ಫೌಂಡೇಶನ್ ಸಂಸ್ಥಾ ಪಕ ಶ್ರೀಹರಿ, ಮೈಸೂರು ಟ್ರಾವೆಲ್ಸ್ ಅಸೋಷಿ ಯೇಷನ್ ಅಧ್ಯಕ್ಷ ಪ್ರಶಾಂತ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಮಮತಾ, ಇಓ ಉದಯ್‍ಕುಮಾರ್, ಬಿಇಓ ಶಿವ ಕುಮಾರ್ ಮತ್ತಿತರರು ಹಾಜರಿದ್ದರು.

Translate »