ಮೈಸೂರು ದಸರಾ ಉತ್ಸವದಲ್ಲಿ ಉನ್ನತ ಶಿಕ್ಷಣದ ಭರಪೂರ ಮಾಹಿತಿ
ಮೈಸೂರು

ಮೈಸೂರು ದಸರಾ ಉತ್ಸವದಲ್ಲಿ ಉನ್ನತ ಶಿಕ್ಷಣದ ಭರಪೂರ ಮಾಹಿತಿ

September 18, 2018

ಮೈಸೂರು:  ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಉನ್ನತ ಶಿಕ್ಷಣ ಸಂಬಂಧಿತ ಮಾಹಿತಿಯನ್ನು ಬಿತ್ತರಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಸಿಂಡಿಕೇಟ್ ಸಭಾಂಗಣದಲ್ಲಿ ಸೋಮವಾರ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉನ್ನತ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಹೇಗೆ ಸೇವೆ ಸಲ್ಲಿಸುತ್ತಿದೆ? ಎಂಬುದು ಸಾಮಾನ್ಯರಿಗೂ ತಿಳಿಯಬೇಕಿದೆ. ಈ ನಿಟ್ಟಿ ನಲ್ಲಿ ದಸರಾ ವಸ್ತು ಪ್ರದರ್ಶನದಲ್ಲಿ ಎಲ್ಲಾ ವಿಶ್ವ ವಿದ್ಯಾನಿಲಯಗಳ ಸಂಬಂಧಿತ ಮಾಹಿತಿ, ಕ್ರೀಡೆ, ಯೋಗ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಸಮ್ಮಿಳಿತವಾಗಿ ರುವ ವಿಷಯಗಳ ಮಾಹಿತಿಯನ್ನೊಳಗೊಂಡ ಮಳಿಗೆಯೊಂದನ್ನು ತೆರೆಯಲು ನಿರ್ಧರಿಸಲಾಗಿದೆ. ಅಲ್ಲದೆ ಜಂಬೂಸವಾರಿ ದಿನದಂದು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ವಿಶಿಷ್ಟ ಮಾದರಿಯ ಸ್ಥಬ್ಧ ಚಿತ್ರ ಸಂಚಾರಕ್ಕೂ ನಿರ್ಣಯ ಕೈಗೊಳ್ಳಲಾಗಿದ್ದು, ನಿರ್ವಹಣೆಗಾಗಿ 5 ಮಂದಿ ಕುಲಪತಿಗಳನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಪ್ರತಿಯೊಂದು ವಿವಿಯಿಂದ ವಿದ್ಯಾರ್ಥಿ ಕಲಾತಂಡವನ್ನು ಯುವ ದಸರಾ ಕಾರ್ಯಕ್ರಮಕ್ಕೆ ಕಳು ಹಿಸಿ ಕೊಡುವಂತೆಯೂ ಸೂಚಿಸಲಾಗಿದೆ ಎಂದರು.

ಇದಕ್ಕೂ ಮುನ್ನ ದಸರಾ ವಸ್ತು ಪ್ರದರ್ಶನದಲ್ಲಿ ಮಳಿಗೆ ತೆರೆಯುವುದು, ಮಾಹಿತಿ ಕೈಪಿಡಿ ಸಿದ್ದಪಡಿಸುವುದು, ಪ್ರತಿ ವಿವಿಗೆ ಸಂಬಂಧಿಸಿ ದಂತೆ 10 ನಿಮಿಷಗಳ ಪ್ರತ್ಯೇಕ ವೀಡಿಯೋ ಡಾಕ್ಯುಮೆಂಟರಿ ಪ್ರದರ್ಶಿಸುವುದು ಹಾಗೂ ಸ್ಥಬ್ಧ ಚಿತ್ರ ತಯಾರಿಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಕುಲಪತಿ ಅಧ್ಯಕ್ಷತೆಯಲ್ಲಿ ಸಂಗೀತ, ಕನ್ನಡ, ಗುಲ್ಬರ್ಗಾ, ಬೆಂಗಳೂರು ಹಾಗೂ ಮೈಸೂರು ವಿವಿ ಕುಲಪತಿಗಳನ್ನೊಳ ಗೊಂಡ ಸಮಿತಿ ರಚನೆ ಹೀಗೆ ಸಭೆಯಲ್ಲಿ ವ್ಯಕ್ತವಾದ ಎಲ್ಲಾ ಕುಲಪತಿಗಳ ಒಮ್ಮತದ ಅಭಿಪ್ರಾಯ ವನ್ನು ಮೈಸೂರು ವಿವಿ ಪ್ರಭಾರ ಕುಲಪತಿ ಡಾ. ಟಿ.ಕೆ.ಉಮೇಶ್, ಸಚಿವರಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಟಿಡಿ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಕುಲಪತಿಗಳು ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಆದರೆ ಅದ್ಯಾವುದೂ ಪ್ರಚಾರವಾಗಿಲ್ಲ. ಸಾಮಾನ್ಯರಿಗೆ ವಿಚಾರ ಮುಟ್ಟಿಸಲು ದಸರಾ ಸುಸಂದರ್ಭ. ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಯೋಗ ಶಿಕ್ಷಣ ಹೀಗೆ ಇಲಾಖೆಯ ಅನೇಕ ಕಾರ್ಯಕ್ರಮ ಗಳು, ಒಟ್ಟು ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ಗಳ ಅಂಕಿಅಂಶ, ವಿವಿಗಳಿಂದ ಗ್ರಾಮಗಳ ದತ್ತು ಸೇರಿದಂತೆ ಶೈಕ್ಷಣಿಕ ಸಾಧನೆ ಹಾಗೂ ವಿನೂತನ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಕೆಲವು ವಿವಿಗಳಲ್ಲಿ ಕುಲಪತಿ ಹಾಗೂ ಕುಲಸಚಿವರ ನಡುವೆ ಸಮನ್ವಯತೆ ಇರುವುದಿಲ್ಲ. ಉನ್ನತ ಶಿಕ್ಷಣದ ಮಹತ್ವವನ್ನು ನೀವೇ ಕಾಪಾಡಿಕೊಳ್ಳಬೇಕು. ಮೊದಲ ಬಾರಿಗೆ ದಸರಾದಲ್ಲಿ ಎಲ್ಲಾ ವಿವಿಗಳ ಭಾಗವಹಿಸುವಿಕೆಗೆ ಕಾರ್ಯಕ್ರಮ ರೂಪಿಸಲಾಗಿದೆ. ಯಶಸ್ವಿಗೆ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕೆಂದು ತಿಳಿ ಹೇಳಿದರು.

ದಸರಾ ವೆಬ್‍ಸೈಟ್‍ನಲ್ಲಿ ಮಾಹಿತಿ: ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡ ಪ್ರತ್ಯೇಕ ದಸರಾ ಮೊಬೈಲ್ ಅಪ್ಲಿಕೇ ಷನ್ ಸಿದ್ಧಪಡಿಸಿ, ಎಲ್ಲಾ ವಿವಿಗಳ ಸಂದೇಶ, ಕಾರ್ಯಕ್ರಮಗಳನ್ನೊಳಗೊಂಡ ಪ್ರತ್ಯೇಕ ವೀಡಿಯೋ ಅಪ್‍ಲೋಡ್ ಮಾಡ ಬೇಕೆಂಬ ಕುಲಪತಿಗಳ ಅಭಿಪ್ರಾಯವನ್ನು ಮೈಸೂರು ವಿವಿ ಪ್ರಭಾರ ಕುಲಪತಿ ಉಮೇಶ್ ತಿಳಿಸಿದರು. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ಧನ್ ಅವರನ್ನು ಸಭೆಗೆ ಕರೆಸಿದ ಜಿಟಿಡಿ, ದಸರಾ ಆಪ್‍ನಲ್ಲೇ ಉನ್ನತ ಶಿಕ್ಷಣದ ಮಾಹಿತಿ ಸೇರ್ಪಡೆ ಮಾಡುವ ಜವಾಬ್ದಾರಿಯನ್ನು ಅವರಿಗೆ ವಹಿಸಿದರು.

ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿ ಭಾಷಣ ಮಾಡಿ 125 ವರ್ಷ ಸಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಮಹಾತ್ಮ ಗಾಂಧೀ ಹಾಗೂ ಸ್ವಾಮಿ ವಿವೇಕಾನಂದರ ಅಧ್ಯಯನ ಆರಂಭಿಸಬೇಕೆಂಬ ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್. ವೇಣು ಗೋಪಾಲ್ ಅಭಿಪ್ರಾಯಿಸಿದರು. ಈ ಸಂಬಂಧ ಆದೇಶ ಹೊರಡಿಸಬೇಕೆಂದು ಅನೇಕ ಕುಲಪತಿಗಳು ಒತ್ತಾಯಿಸಿದರು. ಇದಕ್ಕೆ ಜಿಟಿಡಿ ಸಮ್ಮತಿಸಿದರು. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‍ನ ಆಡಳಿತಾ ಧಿಕಾರಿ ಡಾ.ತಾಂಡವಗೌಡ, ಉನ್ನತ ಶಿಕ್ಷಣ ಸಚಿವರ ವಿಶೇಷಾಧಿಕಾರಿ ಪ್ರೊ.ನಿಂಗೇಗೌಡ, ಮೈಸೂರು ವಿವಿ ಕುಲಸಚಿವರಾರ ಪ್ರೊ.ಆರ್. ರಾಜಣ್ಣ, ಪ್ರೊ.ಜೆ.ಸೋಮಶೇಖರ್, ಅಕ್ಕಮಹಾ ದೇವಿ ಮಹಿಳಾ ವಿವಿ ಕುಲಪತಿ ಡಾ.ಸಬೀಹ, ತುಮಕೂರು ವಿವಿ ಕುಲಪತಿ ಪ್ರೊ.ವೈ. ಎಸ್. ಸಿದ್ದೇಗೌಡ, ಕನ್ನಡ ವಿವಿ ಕುಲಪತಿ ಪ್ರೊ. ಮಲ್ಲಿಕಾ ಘಂಟಿ, ದಾವಣಗೆರೆ ವಿವಿ ಕುಲಪತಿ ಡಾ.ಎಸ್.ವಿ.ಹಲಸೆ ಸೇರಿದಂತೆ ಬಹುತೇಕ ವಿವಿಗಳ ಕುಲಪತಿಗಳು ಸಭೆಯಲ್ಲಿದ್ದರು.

ಶಿಕ್ಷಣ ತಜ್ಞರನ್ನೇ ವಿವಿ ಸಿಂಡಿಕೇಟ್‍ಗೆ ನೇಮಕ ನಿರ್ಧಾರ

ಮೈಸೂರು: ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್‍ಗೆ ವೃತ್ತಿಪರರನ್ನೇ ಸದಸ್ಯರನ್ನಾಗಿ ನೇಮಕ ಮಾಡುವ ದಿಟ್ಟ ನಿರ್ಧಾರಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮುಂದಾಗಿದ್ದಾರೆ.

ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಸೋಮವಾರ ದಸರಾ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ವಿವಿ ಕುಲಪತಿಗಳ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಅವರು, ವಿವಿಗಳಿಗೆ ಸಂಬಂಧಿಸಿದ ಮಹತ್ವದ ನಿರ್ಧಾರ ಕೈಗೊಳ್ಳುವುದು ಸಿಂಡಿಕೇಟ್ ಸಭೆಯಲ್ಲಿ. ಸಿಂಡಿಕೇಟ್ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಶೈಕ್ಷಣಿಕ ತಜ್ಞರನ್ನೇ ಸದಸ್ಯ ರನ್ನಾಗಿ ನೇಮಕ ಮಾಡಬೇಕೆಂದು ನಿಯಮವಿದೆ. ಅದನ್ನು ಅನು ಷ್ಠಾನಗೊಳಿಸಬೇಕಿದೆ. ಮೌಲ್ಯಾಧಾರಿತ, ಗುಣಾತ್ಮಕ, ಉದ್ಯೋಗಾ ಧಾರಿತ ಶಿಕ್ಷಣ ನೀಡಬೇಕೆಂದು ಹೇಳುತ್ತೇವೆ. ಇದರ ಸಾಕಾರಕ್ಕೆ ಶಿಕ್ಷಣ ವ್ಯವಸ್ಥೆಯ ಮೂಲ ಸುಭದ್ರವಾಗಿರಬೇಕು. ಹಾಗಾಗಿ ಸಿಂಡಿ ಕೇಟ್‍ಗೆ ವೃತ್ತಿಪರರ ನೇಮಕಕ್ಕೆ ತೀರ್ಮಾನಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಒಪ್ಪಿದ್ದಾರೆ ಎಂದು ತಿಳಿಸಿದರು.

ವಿಶ್ವವಿದ್ಯಾನಿಯಗಳಿಗೆ ಸಂಬಂಧಿಸಿದ ನಿರ್ಣಯಗಳು ಸಿಂಡಿಕೇಟ್‍ನಲ್ಲೇ ಅಂತಿಮಗೊಳ್ಳುವುದು. ಶೈಕ್ಷಣಿಕ ನಿರ್ಧಾರ ತೆಗೆದುಕೊಳ್ಳುವ ಸಿಂಡಿಕೇಟ್‍ನಲ್ಲಿ ವೃತ್ತಿಪರರಿದ್ದರೆ ತಜ್ಞರನ್ನು ಸಂಪರ್ಕಿಸುವ ಅಗತ್ಯವಿರುವುದಿಲ್ಲ. ಕೌಶಲ್ಯಾಭಿವೃದ್ಧಿ ಕೋರ್ಸ್ ಗಳು, ಪಠ್ಯಕ್ರಮ ಇನ್ನಿತರ ಮಹತ್ವದ ವಿಷಯಗಳ ಬಗ್ಗೆ ತೀರ್ಮಾ ನಿಸುವುದಕ್ಕೆ ಅನುಕೂಲವಾಗುತ್ತದೆ. ಸಿಂಡಿಕೇಟ್ ಸದಸ್ಯತ್ವಕ್ಕಾಗಿ ಯಾವುದೇ ಲಾಬಿ ನಡೆಯುವುದಿಲ್ಲ ಎಂದು ತಿಳಿಸಿದರಲ್ಲದೆ, ಉಪ ನ್ಯಾಸಕರಿಗೆ ಕಡ್ಡಾಯವಾಗಿ ವಿಷಯಾದಾರಿತ ತರಬೇತಿ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ತಜ್ಞರೊಂದಿಗೆ ಚರ್ಚೆ ನಡೆಸಿ ದ್ದೇನೆ. ಜೊತೆಗೆ ಇಲಾಖೆಯಲ್ಲಿರುವ ಗೊಂದಲವನ್ನು ಹಂತಹಂತ ವಾಗಿ ಸರಿಪಡಿಸುವ ಕೆಲಸವನ್ನೂ ಮಾಡುತ್ತೇನೆ ಎಂದರು.

ಸಚಿವರ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕುಲಪತಿ ಗಳು, ಇದು ಅನುಷ್ಠಾನಕ್ಕೆ ಬಂದರೆ ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲೇ ಐತಿಹಾಸಿಕ ನಿರ್ಧಾರವಾಗಲಿದೆ. ಸ್ನಾತಕೋತ್ತರ ಪದವಿ ಪಡೆದ, ಶಿಕ್ಷಣ ಕ್ಷೇತ್ರದಲ್ಲಿ ಕನಿಷ್ಟ 20 ವರ್ಷ ಸೇವೆ ಸಲ್ಲಿಸಿ ದವರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಬೇಕು. ಸಿಂಡಿಕೇಟ್ ಸದಸ್ಯರು ಯಾವ ಕಾರಣಕ್ಕೂ ಸ್ಥಳೀಯ ಪರಿಶೀಲನಾ ಸಮಿತಿ(ಎಲ್‍ಐಸಿ)ಯ ಸದಸ್ಯರಾಗಲೀ, ಪದಾಧಿಕಾರಿಯಾಗಲೀ ಆಗಬಾರದೆಂಬ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

 

Translate »