ಮೈಸೂರು,ಸೆ.13 (ವೈಡಿಎಸ್)-ತಂಪಾದ ಇಳಿಸಂಜೆಯ ತುಂತುರು ಮಳೆಯಲ್ಲಿ ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತ ಗೊಂಡಿದ್ದ ವೇದಿಕೆಯಲ್ಲಿ ಗಾಯಕ ರಾಜೇಶ್ ಕೃಷ್ಣನ್ ಅವರ ಗಾಯನ ಸಂಗೀತ ಪ್ರಿಯರನ್ನು ತಲೆದೂಗು ವಂತೆ ಮಾಡಿತು. ಮಾನಸಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಸಿರಿ 3ರ ಸಂಭ್ರಮದ ಅಂಗ ವಾಗಿ ಗುರುವಾರ ಸಂಜೆ ಆಯೋಜಿಸಿದ್ದ ಸಂಗೀತ ರಸಸಂಜೆಯಲ್ಲಿ ಹಿನ್ನೆಲೆಗಾಯಕ ರಾಜೇಶ್ ಕೃಷ್ಣ ಅವರ ಸುಮಧುರ ಕಂಠದಲ್ಲಿ ಹೊರಹೊಮ್ಮಿದ ಹಾಡುಗಳು ಸಂಗೀತ ಪ್ರಿಯರಿಗೆ ಮುದ ನೀಡಿದವು.
ರಾಜೇಶ್ ಕೃಷ್ಣನ್ ಅವರು ವೇದಿಕೆಗೆ ಆಗಮಿಸು ವುದಕ್ಕೂ ಮುನ್ನ ವಿದ್ಯಾರ್ಥಿಗಳು, ಸಭಿಕರು ಜೋರಾದ ಚಪ್ಪಾಳೆಯೊಂದಿಗೆ ರಾಜೇಶ್ ಕೃಷ್ಣನ್ ಅವರನ್ನು ಆತ್ಮೀಯ ವಾಗಿ ಬರಮಾಡಿಕೊಂಡರು. ವೇದಿಕೆಗೆ ಆಗಮಿಸಿದ ಕೃಷ್ಣನ್, ಮೊದಲು `ಯಾರೋ ಕಣ್ಣಲ್ಲಿ
ಕಣ್ಣನಿಟ್ಟು’, ‘ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೇ ಒಲಿದೊಲಿದು ಬಾರಲೆ’, ‘ಉಸಿರೆ ಉಸಿರೆ ನೀ ಉಸಿರ ಕೊಲ್ಲಬೇಡ’ ಹಾಡನ್ನು ಸುಮಧುರವಾಗಿ ಹಾಡುವ ಮೂಲಕ ಎಲ್ಲರನ್ನೂ ರಂಜಿಸಿದರು.
ಇದಕ್ಕೂ ಮುನ್ನ ಮಾಜಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಗಾಯಕ ರಾಜೇಶ್ ಕೃಷ್ಣನ್ ಅವರನ್ನು ಮೈಸೂರಿಗೆ ಕರೆತರಬೇಕಾದರೆ ಕಷ್ಟವಾಗುತ್ತಿತ್ತು. ಇಂದು ಕರೆದರೆ ಸಾಕು ಪ್ರೀತಿ, ಅಭಿಮಾನದಿಂದ ಬರುತ್ತಾರೆ. ಮೈಸೂರಿನ ಮಗನಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಯುವ ಸಂಭ್ರಮ ಆರಂಭವಾಗಲಿದ್ದು, 250ಕ್ಕೂ ಹೆಚ್ಚು ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸಂಗೀತದ ರಸದೌತಣ ನೀಡಲಿದ್ದಾರೆ. ಸಿರಿ ವಾಹಿನಿಯ ರವಿ ಅವರು ಚಾನಲ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ಮುಂದೆಯೂ ಹೀಗೆಯೇ ನಡೆಸಿಕೊಂಡು ಹೋಗಲಿ ಎಂದು ಹಾರೈಸಿದರು.
ಬಿಜೆಪಿಯ ಮಾಜಿ ಕೇಂದ್ರ ಸಚಿವ ಸುಹೇದ್ ಶಹನವಾಜ್ ಹುಸೇನ್, ಮೇಯರ್ ಪುಷ್ಪಲತಾ ಜಗನ್ನಾಥ್, ನಟಿ ಶೃತಿ, ನಿರ್ಮಾಪಕಿ ಪ್ರೇಮಾ ಯುವರಾಜ್, ಸಿರಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಜಿ.ರವಿ ಮತ್ತಿತರರು ಉಪಸ್ಥಿತರಿದ್ದರು.