ರಣಾಂಗಣವಾಯ್ತು ನಂ.ಗೂಡು ಬಿಜೆಪಿ ಸಮಾವೇಶ
ಮೈಸೂರು

ರಣಾಂಗಣವಾಯ್ತು ನಂ.ಗೂಡು ಬಿಜೆಪಿ ಸಮಾವೇಶ

April 24, 2018

“ನನ್ನ ಮಗ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವುದಿಲ್ಲ, ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ…” ಯಡಿಯೂರಪ್ಪರ ಈ ಹೇಳಿಕೆಯಿಂದ ಕಾರ್ಯಕರ್ತರ ದಾಂಧಲೆ, ವೇದಿಕೆಯಲ್ಲಿ ಪೀಠೋಪಕರಣ ಧ್ವಂಸ, ಪುಡಿ ಪುಡಿಯಾದ ಕುರ್ಚಿಗಳು, ಹಲವು ವಾಹನಗಳು ಜಖಂ, ಪೊಲೀಸ್ ಭದ್ರತೆಯಲ್ಲಿ ನಿರ್ಗಮಿಸಿದ ನಾಯಕರು, ಕೆಲವೇ ಕ್ಷಣದಲ್ಲಿ ರಣಾಂಗಣವಾದ ಸಮಾವೇಶ ಸ್ಥಳ, ಪೊಲೀಸರಿಂದ ಲಾಠಿ ಚಾರ್ಜ್

ಮೈಸೂರು: ಸಿಎಂ ತವರು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ನಿದ್ದೆಗೆಡಿಸಿದ್ದ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವರುಣಾದಿಂದ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಬಿ.ವೈ.ವಿಜಯೇಂದ್ರ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಪಟ್ಟಣದ ವಿದ್ಯಾವರ್ಧಕ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ಬಹಿರಂಗ ಸಮಾವೇಶ ಇಂದು ಯಶಸ್ವಿಯಾಗಿ ನಡೆ ಯಿತು. ನಿರೀಕ್ಷೆಗೂ ಮೀರಿ ಸಾವಿರಾರು ಕಾರ್ಯಕರ್ತರು ನೆರೆದಿದ್ದರು.

ಆದರೆ, ಅಂತಿಮ ವಾಗಿ ಬಿ.ಎಸ್.ಯಡಿಯೂರಪ್ಪನವರ ಆ ಒಂದು ಮಾತು ಬಿರುಗಾಳಿಯನ್ನೇ ಎಬ್ಬಿಸಿತು.
‘ನನ್ನ ಮಗ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವುದಿಲ್ಲ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ’ ಎಂದು ಯಡಿಯೂರಪ್ಪನವರು ಅಪಾರ ಜನಸ್ತೋಮದ ಮುಂದೆ ಪ್ರಕಟಿಸುತ್ತಿದ್ದಂತೆ ಕ್ಷಣಕಾಲ ಇಡೀ ಸಭೆಯೇ ಸ್ತಬ್ಧ ಗೊಂಡಿತು. ಯಡಿಯೂರಪ್ಪ, ಪುತ್ರ ವಿಜಯೇಂದ್ರರಿಗೆ ಟಿಕೆಟ್ ನೀಡುವುದಿಲ್ಲ ಎಂದು ಘೋಷಿಸಿದ ತಕ್ಷಣವೇ ಸಮಾರಂಭದಲ್ಲಿ ಆಕ್ರೋಶ ಭುಗಿಲೆದ್ದು, ತಾಳ್ಮೆ ಕಳೆದುಕೊಂಡ ಕಾರ್ಯಕರ್ತರು ವೇದಿಕೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ಅಲ್ಲಿದ್ದ ಪ್ಲಾಸ್ಟಿಕ್ ಚೇರ್‍ಗಳನ್ನು ಪುಡಿ ಪುಡಿ ಮಾಡಿದರು. ವೇದಿಕೆಯತ್ತ ಅವುಗಳನ್ನು ತೂರಲಾಯಿತು. ಕಾರ್ಯಕರ್ತರ ಒಂದು ಗುಂಪು ವೇದಿಕೆಗೂ ನುಗ್ಗಿತು. ಅಪಾಯ ಅರಿತ ಮುಖಂಡರು ಕಾಲ್ಕಿತ್ತರು. ಯಡಿಯೂರಪ್ಪನವರ ವಾಹನ ತಡೆಯುವ ಯತ್ನ ನಡೆಯಿತು. ಆದರೆ ಅವರು ಪೊಲೀಸರ ಭದ್ರತೆಯಲ್ಲಿ ಸ್ಥಳದಿಂದ ನಿರ್ಗಮಿಸಿದರು. ಆದರೆ ವಿಜಯೇಂದ್ರರ ಕಾರಿಗೆ ಮುತ್ತಿಗೆ ಹಾಕಿ ಅವರನ್ನು ಅದರಿಂದ ಕೆಳಗಿಳಿಸಿದರು. ಕೊನೆಗೆ ಅವರನ್ನು ಪೊಲೀಸ್ ವಾಹನದಲ್ಲೇ ಕರೆದೊಯ್ಯಲಾಯಿತು. ಕಾರ್ಯಕರ್ತರ ಆಕ್ರೋಶ ಇಮ್ಮಡಿಯಾಯಿತು. ಪಕ್ಷದ ನಾಯಕರ ವಿರುದ್ಧ ಹರಿಹಾಯ್ದರು.

ಆರ್‍ಎಸ್‍ಎಸ್‍ನವರ ಕುತಂತ್ರದಿಂದ ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದೆ, ನ್ಯಾಯ ಸಿಗುವ ತನಕ ಹೋರಾಟ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಹಬದಿಗೆ ತರುವಷ್ಟರಲ್ಲಿ ಹತ್ತಾರು ವಾಹನಗಳು ಪ್ರತಿಭಟನಾಕಾರರ ದಾಂಧಲೆಗೆ ತುತ್ತಾಗಿದ್ದವು. ಅಲ್ಲಿವರೆಗೆ ವ್ಯವಸ್ಥಿತವಾಗಿ ನಡೆದ ಸಮಾವೇಶ ಸ್ಥಳ ರಣರಂಗದಂತೆ ಗೋಚರಿಸಿತು.

ಇದುವರೆಗೂ ವರುಣಾ ಕ್ಷೇತ್ರದ ಪ್ರಬಲ ಅಭ್ಯರ್ಥಿಯೆಂದೇ ಬಿಂಬಿತರಾಗಿ, ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರರ ವಿರುದ್ಧ ವಿಜಯೇಂದ್ರ ಕಳೆದ 20 ದಿನಗಳಿಂದ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿ, ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಸಂಪಾದಿಸಿದ್ದರು.

ಸಾಮೂಹಿಕ ರಾಜೀನಾಮೆ ಬೆದರಿಕೆ: ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧಿಸದಿದ್ದರೆ ಪಕ್ಷ ಸಾಮೂಹಿಕ ರಾಜೀನಾಮೆ ಸಲ್ಲಿಸುವ ಬೆದರಿಕೆ ಹಾಕಿದ ಪ್ರತಿಭಟನಾನಿರತ ಮುಖಂಡರು ಹಾಗೂ ಕಾರ್ಯಕರ್ತರು ದಿಢೀರ್ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಪ್ರಮುಖ ಮುಖಂಡರು ಗುಪ್ತ ಸ್ಥಳದಲ್ಲಿ ಸಭೆ ಸೇರಿ ವಿಜಯೇಂದ್ರರವರು ಸ್ಪರ್ಧೆಯಿಂದ ಹಿಂದೆ ಸರಿದರೆ ಬೇರೆ ಇತರೆ ಪಕ್ಷಗಳಿಗೆ ಬೆಂಬಲ ಸೂಚಿಸುವುದಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಯಡಿಯೂರಪ್ಪನವರ ಈ ಒಂದು ನಿರ್ಧಾರ ಇಡೀ ರಾಜಕೀಯ ವಲಯದಲ್ಲೇ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಅನಿರೀಕ್ಷಿತ ಬೆಳವಣ ಗೆಯಿಂದ ಸಮಾವೇಶದಲ್ಲಿ ಭಾಗವಹಿಸಿದ್ದ ಹಿರಿಯ ಬಿಜೆಪಿ ಮುಖಂಡರಾದ ವಿ.ಶ್ರೀನಿವಾಸ್ ಪ್ರಸಾದ್, ಸಂಸದ ಶ್ರೀರಾಮುಲು, ಸೇರಿದಂತೆ ಘಟಾನುಘಟಿ ನಾಯಕರು ವಿಚಲಿತರಾದರು. ಸಮಾವೇಶದಲ್ಲಿ ರಾಜ್ಯ ಕಾರ್ಯಕಾರಿಣ ವಿಶೇಷ ಆಹ್ವಾನಿತರು ಹಾಗೂ ವಕೀಲ ಅರುಣ್‍ಕುಮಾರ್, ಜಿಲ್ಲಾ ಮುಖಂಡ ಎಲ್.ಆರ್.ಮಹದೇವಸ್ವಾಮಿ ಇತರರು ಇದ್ದರು.

Translate »