ಬಿರು ಬಿಸಿಲಲ್ಲಿ ಬಸವಳಿದ ಜನತೆ
ಮೈಸೂರು, ಮೈಸೂರು ದಸರಾ

ಬಿರು ಬಿಸಿಲಲ್ಲಿ ಬಸವಳಿದ ಜನತೆ

October 20, 2018

ಮೈಸೂರು: ಶುಕ್ರವಾರ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ನೋಡಲು ಕಾತುರದಿಂದ ಕಾದಿದ್ದ ಜನತೆ ಬಿರು ಬಿಸಿಲಲ್ಲಿ ಬಸವಳಿದರು. ಮೆರವಣಿಗೆಯ ಉದ್ದಕ್ಕೂ ಭಾರೀ ಸಂಖ್ಯೆಯಲ್ಲಿ ಜನತೆ ಸೇರಿದ್ದರು. ಆದರೆ ಬೆಳಿಗ್ಗೆಯಿಂದಲೇ ಜಾಗ ಹಿಡಿದು ಕುಳಿತು ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದ ಜನರು, ಕಲಾವಿದರು, ಪೊಲೀಸರು ಎಲ್ಲರೂ ಬಿರು ಬಿಸಿಲಿನಿಂದ ಬೆವರಿದರು.

ಮೆರವಣಿಗೆ ಉದ್ದಕ್ಕೂ ವಿವಿಧ ಸಂಘಟನೆಗಳು ನೀರಿನ ವ್ಯವಸ್ಥೆ ಮಾಡಿದ್ದವು. ಡಾ.ರಾಜ್ ಸಂಘ, ಮೈಸೂರು ಕನ್ನಡ ವೇದಿಕೆ, ಶ್ರೀ ರಾಜೇಶ್ವರ್ ಪಟೇಲ್ ಗ್ರೂಪ್, ವಾಸವಿ ಯುವ ಜನ ಸಂಘ ಜಂಬೂಸವಾರಿಯಲ್ಲಿ ಭಾಗ ವಹಿಸಿದ್ದ ಕಲಾವಿದರಿಗೆ, ಜನರಿಗೆ ಉಚಿತ ನೀರಿನ ಬಾಟಲಿಗಳನ್ನು ನೀಡಿದರೆ, ಡಾ.ರಾಜ್ ಸಂಘ, ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಕೆ.ಆರ್.ವೃತ್ತದಲ್ಲಿ ಮಜ್ಜಿಗೆ ವಿತರಿಸಿ ಬಿಸಿಲಿನಿಂದ ಬಸವಳಿದಿದ್ದ ಕಲಾವಿದರಿಗೆ ತಂಪು ನೀಡಿದರು.

ಅನ್ನದಾನ: ದಸರಾ ಜಂಬೂಸವಾರಿ ನೋಡಲು ಆಗಮಿಸಿದ್ದ ಜನರಿಗೆ ಮೈಸೂರಿನ ದೇವರಾಜ ಮಾರುಕಟ್ಟೆ ವರ್ತಕರ ಸಂಘದ ವತಿಯಿಂದ ಅಧ್ಯಕ್ಷ ಕೆ.ದಿನೇಶ್ ಅಭಿಮಾನಿಗಳು, ಉಪಾಧ್ಯಕ್ಷ ಕೆ.ಎಂ.ಅನುರಾಗ್ ಇನ್ನಿತರರು ರೈಸ್‍ಬಾತ್, ಮೊಸರನ್ನದ ವ್ಯವಸ್ಥೆ ಮಾಡಿದ್ದರು. ಸುಮಾರು 10 ಕ್ವಿಂಟಾಲ್‍ನಷ್ಟು ಅನ್ನದಾನ ನಡೆಸುವ ಮೂಲಕ ಸೇವೆ ಸಲ್ಲಿಸಿದರು.

Translate »