ವಿಚಾರ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟವರು ಜ.ಹೊ.ನಾ
ಹಾಸನ

ವಿಚಾರ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟವರು ಜ.ಹೊ.ನಾ

November 17, 2018

ಹಾಸನ:  ಕುವೆಂಪು, ಪರ ಮಹಂಸರು, ವಿವೇಕಾನಂದರು ಹಾಗೂ ಲೋಹಿಯಾರವರ ಪ್ರಗತಿಪರ, ವಿಚಾರ ಪ್ರದವಾದ ಮಾನವೀಯ ನೆಲೆಗಟ್ಟಿನ ಸಾಹಿತ್ಯ ವನ್ನು ತಮ್ಮ ಹರಿತವಾದ ಬರವಣಿಗೆಗಳ ಮೂಲಕ ಕನ್ನಡಿಗರಿಗೆ ಉಣಬಡಿಸಿದ ಕೀರ್ತಿ ಜ.ಹೊ.ನಾರಾಯಣ ಸ್ವಾಮಿಯವರಿಗೆ ಸಲ್ಲುತ್ತದೆ ಎಂದು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಟ್ರೇಶ್ ಎಸ್.ಉಪ್ಪಾರ್ ಅಭಿಪ್ರಾಯಪಟ್ಟರು.

ಆಲೂರು ಪಟ್ಟಣದ ಕೇಂದ್ರ ಸಾರ್ವ ಜನಿಕ ಗ್ರಂಥಾಲಯದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸಾರ್ವಜನಿಕ ಕೇಂದ್ರ ಗ್ರಂಥಾಲಯ ಆಲೂರು ಇವರ ಸಂಯುಕಾಶ್ರಯದಲ್ಲಿ ನಾಡಿನ ಹಿರಿಯ ವೈಚಾರಿಕ ಸಾಹಿತಿ ಜ.ಹೊ.ನಾರಾ ಯಣಸ್ವಾಮಿಯವರ ಅಕಾಲಿಕ ಅಗಲಿಕೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಕುವೆಂಪುರವರ ಕೆಲವೇ ಕೆಲವು ಆಪ್ತಶಿಷ್ಯರಲ್ಲಿ ಪ್ರಮುಖ ರಾಗಿದ್ದ ಜ.ಹೊ.ನಾ.ರವರು ತಮ್ಮ ವೈಚಾರಿಕ ಬರವಣಿಗೆಗಳ ಮೂಲಕವೇ ಸದ್ದು ಮಾಡಿದವರು ಎಂದರು.

ಜಾತಿ, ಧರ್ಮದೆಲ್ಲೆಗಳ ಮೀರಿ ವಿಶ್ವ ಮಾನವೀಯ ಸಂದೇಶಗಳನ್ನು ಬೀರಿದ ಮಹಾಮಾನವತಾವಾದಿ, ಸಮಸಮಾಜದ ಕನಸುಗಾರರಾಗಿದ್ದ ಜ.ಹೊ.ನಾ ನನ್ನಂತಹ ನೂರಾರು ಶಿಷ್ಯಂದಿರನ್ನು ಬೆಳೆಸಿದ್ದಾರೆ. ಸಾವಿರಾರು ಪ್ರಗತಿಪರ ಚಳವಳಿಗಾರರನ್ನು ಬೆಂಬಲಿಸಿ ಪ್ರೋತ್ಸಾಹಿಸಿದ್ದಾರೆ. ಅವರು ಬರೆದ ಅದಮ್ಯ, ವೇದ ಕುರಾನ್ ಆಚೆಗೆ, ಸ್ವಾಮಿ ವಿವೇಕಾನಂದರ ಕ್ರಾಂತಿಕಾರಕ ವಿಚಾರಗಳು ಇಡೀ ನಾಡಿನಾದ್ಯಂತ ಪ್ರಸಿದ್ಧಿ ಪಡೆದ ಕೃತಿಗಳು. ಅವರ ಬರಹ ಮತ್ತು ಬದುಕಿನ ಸಾಮ್ಯತೆ ನಮಗೆ ಆದರ್ಶ. ಅವರ ಹಠಾತ್ ಅಗಲಿಕೆ ನನಗೆ ವೈಯಕ್ತಿಕವಾಗಿ ಅತೀವ ದುಃಖ ತಂದಿದೆ. ಇಡೀ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಟರಾಜ್ ನಾಕಲ ಗೂಡು ಮಾತನಾಡಿ ಜ.ಹೊ.ನಾ.ರವರು ತಮ್ಮ ಬರವಣಿಗೆಗಳ ಮೂಲಕ ಸಾಮಾಜಿಕ ಜಾಢ್ಯಗಳನ್ನು ತೊಡೆದವರು. ಕಳೆದ ಆಲೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಅವರ ವಿಶ್ವ ಮಾನವೀಯ ಸಂದೇಶದ ನುಡಿಗಳು ಇಂದಿಗೂ ರಿಂಗಣಿ ಸುತ್ತಿವೆ. ಅವರ ಅಗಲಿಕೆ ಹಾಸನ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದರು.

ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎ.ಟಿ.ಮಲ್ಲೇಶ್ ಮಾತನಾಡಿ, ‘ಮಾನವರಾಗೋಣ ನಾವು ಮಾನವ ರಾಗೋಣ’ ಎಂಬ ವಿಶ್ವ ಭ್ರಾತೃತ್ವದ ಸಂದೇಶ ಬೀರುವ ಅಮೂಲ್ಯ ಗೀತೆಯನ್ನು ದಲಿತ ಚಳವಳಿ ಹಾಗೂ ರೈತ ಚಳವಳಿಗೆ ಕೊಟ್ಟ ಕೀರ್ತಿ ಜ.ಹೊ.ನಾ.ರವರಿಗೆ ಸಲ್ಲುತ್ತದೆ. ನನ್ನಂತಹ ಸಾವಿರಾರು ಪ್ರಗತಿಪರ ಚಳವಳಿಗಾರರಿಗೆ ಮಾರ್ಗದರ್ಶಕರಾಗಿ ದಲಿತ ಚಳವಳಿಯಲ್ಲಿ ಗಟ್ಟಿಯಾಗಿ ನಿಲ್ಲಲ್ಲು ಪ್ರೇರೇಪಣೆಯಾದವರು ಎಂದರು.

ಕಾರ್ಯಕ್ರಮದಲ್ಲಿ ಗ್ರಂಥಾಲಯಾ ಧಿಕಾರಿಗಳಾದ ಟಿ.ಕೆ.ನಾಗರಾಜ್, ಸಮಾಜ ಸೇವಕರಾದ ಕಣಗಾಲ್ ಲೋಕೇಶ್, ಎ.ಎಸ್.ಈಶ್ವರ್, ಎಚ್.ಇ.ದ್ಯಾವಪ್ಪ, ಸಾಹಿತಿ ಗಳಾದ ಕೆ.ಕೆ.ಸಿದ್ಧೇಗೌಡ, ಆರ್.ಲಲಿತಮ್ಮ, ಎಸ್.ಕೆ.ವಾಸು ಸಮುದ್ರವಳ್ಳಿ, ಶಿಕ್ಷಕ ಶಿವಣ್ಣ, ಮಾಧ್ಯಮ ಪ್ರತಿನಿಧಿಗಳಾದ ಟಿ.ಕೆ.ಕುಮಾರಸ್ವಾಮಿ, ಬಿ.ಕೆ.ರಂಗಸ್ವಾಮಿ, ಆದಿಲ್, ಸತೀಶ್, ಪ್ರದೀಪ್ ಮುಂತಾದವರು ಹಾಜರಿದ್ದರು.

Translate »