ಇಂದು ವಿದೇಶಾಂಗ ನೀತಿ ಕುರಿತಂತೆ  ರಾಷ್ಟ್ರೀಯ ವಿಚಾರ ಸಂಕಿರಣ
ಹಾಸನ

ಇಂದು ವಿದೇಶಾಂಗ ನೀತಿ ಕುರಿತಂತೆ ರಾಷ್ಟ್ರೀಯ ವಿಚಾರ ಸಂಕಿರಣ

March 25, 2019

ಮೈಸೂರು: ಮಹಾರಾಜ ಕಾಲೇಜಿನ ಸ್ನಾತಕೋತ್ತರ ಪದವಿಯ ಅಂತಾರಾಷ್ಟ್ರೀಯ ಸಂಬಂಧಗಳು ವಿಭಾಗದ ವತಿಯಿಂದ ಮಾ.25ರಂದು `ಭಾರತೀಯ ವಿದೇಶಾಂಗ ನೀತಿ: 21ನೇ ಶತಮಾನದಲ್ಲಿ ನಿರಂತರತೆ ಮತ್ತು ಬದಲಾವಣೆ’ ಕುರಿತಂತೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ವಿಭಾಗದ ಸಂಯೋಜಕಿ ಡಾ.ಭಾರತಿ ಹೀರೆಮಠ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆಯಲಿರುವ ವಿಚಾರ ಸಂಕಿರಣಕ್ಕೆ ಅಂದುಬೆಳಿಗ್ಗೆ 9ಕ್ಕೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಚಾಲನೆ ನೀಡಲಿದ್ದು, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ಭಾರತದ ಅಂತಾರಾಷ್ಟ್ರೀಯ ಕೇಂದ್ರದ ನಿವೃತ್ತ ನಿರ್ದೇಶಕ ಎ.ಮಾಧವನ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಬಳಿಕ 11.30ರಿಂದ ತಾಂತ್ರಿಕ ಗೋಷ್ಠಿಗಳು ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಲಿದ್ದಾರೆ. ಸಂಜೆ 4.15ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾರತದ ಮಾಜಿ ರಾಯಭಾರಿ ಬಿ.ಆರ್.ಮುತ್ತುಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ವಿದ್ಯಾರ್ಥಿಗಳಿಗೆ 100 ರೂ. ಹಾಗೂ ಬೋಧಕರು ಹಾಗೂ ಸಂಶೋಧಕರಿಗೆ 200 ರೂ. ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ ಎಂದರು. 2016-17ನೇ ಸಾಲಿನಲ್ಲಿ ಅಂತಾ ರಾಷ್ಟ್ರೀಯ ಸಂಬಂಧಗಳು ವಿಭಾಗ ಆರಂಭಗೊಂಡಿತು. ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ಈ ವಿಭಾಗ ಬೆಳಕು ಚೆಲ್ಲಲಿದ್ದು, ಈ ವಿಷಯದಲ್ಲಿ ವ್ಯಾಸಂಗ ಮಾಡಿದರೆ, ವಿದೇಶಾಂಗ ಇಲಾಖೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಲಭಿಸಲಿದೆ ಎಂದರು.

Translate »