ಕೊಡಗಿನಲ್ಲಿ ನಳನಳಿಸುತ್ತಿವೆ ಫಸಲು ಭರಿತ ಖರ್ಜೂರ ಮರಗಳು..!
ಕೊಡಗು

ಕೊಡಗಿನಲ್ಲಿ ನಳನಳಿಸುತ್ತಿವೆ ಫಸಲು ಭರಿತ ಖರ್ಜೂರ ಮರಗಳು..!

March 25, 2019

ಮಡಿಕೇರಿ: ಕೊಡಗು ಜಿಲ್ಲೆ ಎಂದರೆ ನೆನಪಿಗೆ ಬರೋದು ದೇಶ ಕಾಯುವ ಸೈನಿಕರು. ಅದರೊಂದಿಗೆ ಉತ್ತಮ ಗುಣ ಮಟ್ಟದ ಕಾಫಿ, ಕರಿಮೆಣಸು, ಏಲಕ್ಕಿ ಮತ್ತು ಸ್ವಾದಿಷ್ಟ ಗುಣವುಳ್ಳ ಕಿತ್ತಳೆಗೂ ಕೊಡಗು ಹೆಸರುವಾಸಿ.

ಹಸಿರ ಪ್ರಕೃತಿ, ನಿಸರ್ಗ ರಮಣೀಯ ತಾಣ ದೊಂದಿಗೆ ವಿಶ್ವ ಪ್ರವಾಸೋದ್ಯಮದ ಭೂಪಟ ದಲ್ಲೂ ಪುಟ್ಟ ಕೊಡಗು ತನ್ನನ್ನು ಗುರುತಿಸಿ ಕೊಂಡಿದೆ. ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಈ ಜಿಲ್ಲೆಯಲ್ಲಿ, ಬಹುತೇಕ ಕಾಲ ತಂಪು ಹವಾಮಾನ ಕಂಡು ಬರುತ್ತದೆ. ಜಿಲ್ಲೆಯ ಹವಾಗುಣಕ್ಕೆ ಅನುಗುಣವಾಗಿ ವಿವಿಧ ತಳಿಯ ಹಣ್ಣುಗಳನ್ನು ಕೂಡ ಬೆಳೆಯಲಾಗುತ್ತಿದೆ.

ವಿಶೇಷ ಮತ್ತು ಅಚ್ಚರಿಯ ವಿಷಯವೇನೆಂ ದರೆ ಜಿಲ್ಲೆಯ ತಂಪು ಹವಾಮಾನದ ನಡುವೆ ಕೊಲ್ಲಿ ರಾಷ್ಟ್ರಗಳ ಮರುಭೂಮಿಯಲ್ಲಿ ಮಾತ್ರವೇ ಯಥೇಚ್ಚವಾಗಿ ಬೆಳೆಯುವ ಖರ್ಜೂರವನ್ನೂ ಕೂಡ ಬೆಳೆಯಲಾಗಿದ್ದು, ಖರ್ಜೂರ ಮರದಲ್ಲಿ ಭರಪೂರ ಫಸಲು ತುಂಬಿಕೊಂಡಿದೆ.

ವಿರಾಜಪೇಟೆಯ ನಿಸರ್ಗ ಬಡಾವಣೆ ನಿವಾಸಿ ಅಕ್ಬರ್ ತಂಪು ಹವಾಗುಣದ ಕೊಡಗಿನಲ್ಲಿ ಮರು ಭೂಮಿಯ ಹಣ್ಣಾದ ಸವಿ ಖರ್ಜೂರ ಬೆಳೆಸಿ ಯಶಸ್ವಿಯಾದ ಕಥೆಯಿದು. ಕೆಲವು ವರ್ಷಗಳ ಹಿಂದೆ ಅಕ್ಬರ್ ಕೆಲಸ ನಿಮಿತ್ತ ಸೌದಿ ಅರೇಬಿ ಯಾಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಅಲ್ಲಿನ ನಿವಾಸಿ ಶೇಕ್ ಇರ್ಫಾನ್ ಎಂಬವರ ಮನೆಯ ಮುಂದೆ ಖರ್ಜೂರ ಬೆಳೆದಿದ್ದನ್ನು ಅಕ್ಬರ್ ಗಮನಿಸಿದ್ದರು.

ಮರುಭೂಮಿ ಮಾತ್ರವಲ್ಲದೇ, ಮನೆಯ ಮುಂದೆಯೂ ಖರ್ಜೂರದ ಮರಗಳು ಫಲವತ್ತಾಗಿ ಬೆಳೆದಿರು ವುದನ್ನು ನೋಡಿದ ಅಕ್ಬರ್, ಕೊಡಗಿನ ವಿರಾಜ ಪೇಟೆಯಲ್ಲಿರುವ ತಮ್ಮ ಮನೆಯ ಮುಂದೆಯೂ ಖರ್ಜೂರದ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಯೋಚಿಸಿದ್ದರು. ಒಂದು ದಿನ ತನ್ನ ಮನದ ಇಂಗಿತವನ್ನು ಶೇಕ್ ಇರ್ಫಾನ್‍ಗೆ ತಿಳಿಸಿದ ಅಕ್ಬರ್, ತಮಗೂ ಖರ್ಜೂರದ ಗಿಡಗಳನ್ನು ನೀಡುವಂತೆ ಮನವಿ ಮಾಡಿದರು. ಅಕ್ಬರ್ ಅವರ ಕೋರಿಕೆಗೆ ಸಮ್ಮತಿಸಿದ ಶೇಕ್ ಇರ್ಫಾನ್, ಸುಮಾರು 12 ಖರ್ಜೂರದ ಗಿಡಗಳನ್ನು ಹಡಗಿನ ಮೂಲಕ ಸೌದಿ ಅರೇಬಿಯದಿಂದ ದಕ್ಷಿಣ ಭಾರತದ ತಮಿಳುನಾಡಿನ ಚೆನ್ನೈ ಬಂದರಿಗೆ ತಲುಪಿಸಿದ್ದರು.

14 ಅಡಿ ಎತ್ತರ ಮತ್ತು ಅತೀವ ಭಾರ ಹೊಂದಿದ್ದ ಖರ್ಜೂರದ ಗಿಡಗಳನ್ನು ಚೆನ್ನೈನಿಂದ ಲಾರಿಯಲ್ಲಿ ವಿರಾಜಪೇಟೆಗೆ ತಂದ ಅಕ್ಬರ್, ಅವು ಗಳನ್ನು ಕ್ರೈನ್ ಮೂಲಕ ನಾಟಿ ಮಾಡಿ ಪೋಷಿಸಲು ಆರಂಭಿಸಿದರು. ದಿನದಿಂದ ದಿನಕ್ಕೆ ಜಿಲ್ಲೆಯ ಹವಾ ಮಾನಕ್ಕೆ ಹೊಂದಿಕೊಂಡ ಖರ್ಜೂರದ ಗಿಡಗಳು, ಒಂದೂವರೆ ವರ್ಷಗಳ ನಂತರ 14 ಅಡಿಯಿಂದ 16 ಅಡಿ ಎತ್ತರದ ಮರವಾಗಿ ಬೆಳೆದು ನಿಂತು ಎಲ್ಲರ ಅಚ್ಚರಿಗೆ ಕಾರಣವಾಯಿತು. ಇದೀಗ ಬೇಸಿಗೆಯ ಅವಧಿಯಾದ್ದರಿಂದ ಒಂದೊಂದು ಮರದಲ್ಲಿಯೂ ನಾಲ್ಕೈದು ಗೊನೆಗಳಂತೆ ಒಟ್ಟು ಆರು ಮರಗಳಲ್ಲಿ ಖರ್ಜೂರ ಫಸಲು ಭರಪೂರ ತುಂಬಿಕೊಂಡು ಮರ ನಳನಳಿಸುತ್ತಿದೆ. ಅಷ್ಟು ಮಾತ್ರವಲ್ಲದೇ, ಪ್ರತಿ 2 ತಿಂಗಳಿಗೊಮ್ಮೆ ಚೆನೈನಿಂದ ಕೃಷಿ ಮತ್ತು ತೋಟಗಾರಿಕಾ ತಜ್ಞರ ತಂಡ ವಿರಾಜಪೇಟೆಯಲ್ಲಿ ರುವ ಅಕ್ಬರ್ ಅವರ ಮನೆಗೆ ಆಗಮಿಸಿ ಖರ್ಜೂರದ ಮರಗಳ ಬೆಳವಣಿಗೆ, ಅದಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುವ ಮೂಲಕ ಪೋಷಿಸುತ್ತಿದ್ದಾರೆ.

ಸಾಮಾನ್ಯವಾಗಿ ಭಾರತ ದೇಶದ ರಾಜಸ್ಥಾನ್ ಹೊರತುಪಡಿಸಿದರೆ ಬೇರೆ ಯಾವುದೇ ರಾಜ್ಯ ಮತ್ತು ಭೂಭಾಗದಲ್ಲಿ ಖರ್ಜೂರ ಬೆಳೆದಿರುವುದು ಕಾಣಸಿಗುವುದಿಲ್ಲ. ಅದಕ್ಕೆ ತನ್ನದೇ ಆದ ಪ್ರಾಕೃತಿಕ ಕಾರಣಗಳೂ ಇರಬಹುದು. ಆದರೆ ಇದೀಗ ಕೊಡಗಿನ ವಿರಾಜಪೇಟೆಯಲ್ಲಿ ಖರ್ಜೂರ ಬೆಳೆ ಬೆಳೆದು ಇಲ್ಲಿನ ಕೃಷಿಕರು ಎಂಥ ಸಾಹಸಕ್ಕೂ ಸೈ ಎಂಬು ದನ್ನೂ ಸಾಕ್ಷೀಕರಿಸಿದ್ದಾರೆ.

ಮನಸ್ಸು ಮಾಡಿದರೆ ನಮ್ಮ ಭಾರತ ದೇಶ ದಲ್ಲಿಯೂ ಎಲ್ಲಾ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ಅಕ್ಬರ್ ನಿರೂಪಿಸಿದ್ದಾರೆ. ಆ ಮೂಲಕ ದೂರದ ಕೊಲ್ಲಿ ರಾಷ್ಟ್ರ ಸೌದಿ ಅರೇಬಿಯಾ ಮತ್ತು ಕೊಡಗು ಜಿಲ್ಲೆಯ ನಡುವೆ ಸವಿರುಚಿಯ ಖರ್ಜೂರದ ಮರಗಳು ಬಾಂಧವ್ಯದ ಬೆಸುಗೆ ಹೆಣೆದಿವೆ ಎಂದರೂ ತಪ್ಪಾಗಲಾರದು.

ಪ್ರಸಾದ್ ಸಂಪಿಗೆಕಟ್ಟೆ

Translate »