ಮೈಸೂರು ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರಿಂದ ನಜರ್‍ಬಾದ್ ಕನ್ನಡ ಶಾಲಾ ಕಟ್ಟಡ ಪರಿಶೀಲನೆ
ಮೈಸೂರು

ಮೈಸೂರು ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರಿಂದ ನಜರ್‍ಬಾದ್ ಕನ್ನಡ ಶಾಲಾ ಕಟ್ಟಡ ಪರಿಶೀಲನೆ

June 11, 2019

ಮೈಸೂರು: ಶಿಥಿಲಾವಸ್ಥೆಯಲ್ಲಿರುವ ಮೈಸೂರಿನ ಮೃಗಾಲಯದ ಬಳಿ ಇರುವ ಸರ್ಕಾರಿ ಕನ್ನಡ ಶಾಲಾ ಕಟ್ಟಡವನ್ನು ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರು ಇಂದು ಪರಿಶೀಲಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ಸೇರಿದ 10 ಗುಂಟೆ ಜಾಗದಲ್ಲಿ ಈ ಹಿಂದೆ ಸರ್ಕಾರಿ ಕನ್ನಡ ಶಾಲೆ ನಡೆಯು ತ್ತಿತ್ತು. ಕಳೆದ 20 ವರ್ಷಗಳಿಂದ ಶಾಲೆ ಮುಚ್ಚಿರುವ ಕಾರಣ ಈ ಕಟ್ಟಡ ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯ ಕ್ಕೊಳಗಾಗಿ ಶಿಥಿಲಾವಸ್ಥೆ ತಲುಪಿದೆ.

ಪಾರಂಪರಿಕ ಶೈಲಿಯಲ್ಲಿರುವ ಶಾಲಾ ಕಟ್ಟಡ ನೆಲಕ್ಕುರುಳುವ ಸ್ಥಿತಿ ಯಲ್ಲಿರುವುದರಿಂದ ಅದನ್ನು ಕೆಡವಿ ಆ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಿ ಬಾಡಿಗೆಗೆ ನೀಡುವ ಉದ್ದೇಶ ದಿಂದ ಮುಡಾ ಅಧಿಕಾರಿಗಳು ಕಿಟಕಿ-ಬಾಗಿಲುಗಳನ್ನು ತೆಗೆಸಿ ಹಾಕಿದ್ದರು. ವಿಷಯ ತಿಳಿದ ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರಾದ ಪ್ರೊ.ರಂಗರಾಜು, ಈಚನೂರು ಕುಮಾರ, ಚಂಪಾ ಅರಸ್, ಪಾರಂಪರಿಕ ಇಲಾಖೆ ಸಹಾಯಕ ನಿರ್ದೇಶಕ ನಿರ್ಮಲಾ ಮಠಪತಿ ಅವರು ಇಂದು ಬೆಳಿಗ್ಗೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿದರು. ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಕಿಟಕಿ-ಬಾಗಿಲು ಗಳನ್ನು ತೆಗೆದಿರುವುದರಿಂದ ಅದನ್ನು ಮತ್ತೆ ರಿಪೇರಿ ಮಾಡಿ ಮೂಲ ಸ್ವರೂಪಕ್ಕೆ ತರಲು ಸಾಧ್ಯವಿಲ್ಲದಂತಹ ಸ್ಥಿತಿಯಲ್ಲಿರುವುದು ಕಂಡು ಬಂದಿತು. ಈ ಕುರಿತು ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ ತಮ್ಮ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಪರಿಶೀಲಿಸಿದ ಸದಸ್ಯರು ತೀರ್ಮಾನಿಸಿದ್ದಾರೆ.

ಈ ನಡುವೆ ಇದೇ ವೇಳೆ ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ಸೂಪರಿಂಟೆಂ ಡಿಂಗ್ ಇಂಜಿನಿಯರ್ ಬಿ.ಕೆ.ಸುರೇಶ್‍ಬಾಬು, ಎಗ್ಸಿಕ್ಯೂಟಿವ್ ಇಂಜಿನಿಯರ್ ಪ್ರಭಾಕರ್, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಭಾಸ್ಕರ್ ಸಹ ಇಂದು ಬೆಳಿಗ್ಗೆ ಸ್ಥಳಕ್ಕೆ ತೆರಳಿ ವಸ್ತುಸ್ಥಿತಿ ಬಗ್ಗೆ ಪಾರಂಪರಿಕ ಸಮಿತಿ ಸದಸ್ಯರಿಗೆ ವಿವರಿಸಿದರು.

ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿರುವುದರಿಂದ, ಶಾಲೆ ಮುಚ್ಚಿ 20 ವರ್ಷಗಳಾಗಿರುವ ಕಾರಣ ಹಾಗೂ ಮೈಸೂರು ನಗರದಲ್ಲಿ ಗುರುತಿಸಿರುವ 201 ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಈ ಕಟ್ಟಡ ಸೇರಿಲ್ಲದ ಕಾರಣ ನಾವು ಅದನ್ನು ಕೆಡವಿ ಅಲ್ಲಿ ಹೊಸ ಕಟ್ಟಡ ನಿರ್ಮಿಸಿ ಪಾಸ್‍ಪೋರ್ಟ್ ಸೇವಾ ಕೇಂದ್ರಕ್ಕೆ ಬಾಡಿಗೆಗೆ ನೀಡಲು ಯೋಜಿಸಿದ್ದೇವೆ ಎಂದು ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ವಿವರಿಸಿದರು. ಪಾರಂಪರಿಕ ಸಮಿತಿ ಸದಸ್ಯರು ಚಾಮುಂಡಿ ಬೆಟ್ಟದ ನಂದಿ ಬಳಿಗೂ ತೆರಳಿ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾದ ಬಗ್ಗೆ ಪರಿಶೀಲನೆ ನಡೆಸಿದರು.

ಬಣ್ಣ ಬದಲಾಯಿಸಿದಾಗ ನಂದಿಯ ಬಿರುಕು ಸ್ಥಳವನ್ನು ಫಿಲ್ ಮಾಡಿರುವುದು ಕಂಡು ಬಂದಿತು ಎಂದು ಪ್ರೊ.ರಂಗರಾಜು `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »