ಎಲ್ಲರೂ ಡಾ.ಅಂಬೇಡ್ಕರ್‍ರನ್ನು ಒಪ್ಪುವುದು ಅನಿವಾರ್ಯ: ಹಿರಿಯ ದಲಿತಪರ ಹೋರಾಟಗಾರ ಪ್ರೊ.ಹೆಚ್.ಎಂ.ರುದ್ರಸ್ವಾಮಿ ಅಭಿಮತ
ಮೈಸೂರು

ಎಲ್ಲರೂ ಡಾ.ಅಂಬೇಡ್ಕರ್‍ರನ್ನು ಒಪ್ಪುವುದು ಅನಿವಾರ್ಯ: ಹಿರಿಯ ದಲಿತಪರ ಹೋರಾಟಗಾರ ಪ್ರೊ.ಹೆಚ್.ಎಂ.ರುದ್ರಸ್ವಾಮಿ ಅಭಿಮತ

August 10, 2018

ಮೈಸೂರು: ಇಂದು ಪ್ರಸ್ತುತವಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಇಂದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಬಂದಿದೆ ಎಂದು ಚಿಕ್ಕಮಗಳೂರಿನ ಹಿರಿಯ ದಲಿತಪರ ಹೋರಾಟಗಾರ ಪ್ರೊ.ಹೆಚ್.ಎಂ.ರುದ್ರಸ್ವಾಮಿ ಅಭಿಪ್ರಾಯಪಟ್ಟರು.

ಮೈಸೂರು ವಿವಿ ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಪೀಠ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಭಾಂಗಣದಲ್ಲಿ `ಕರ್ನಾಟಕದ ದಲಿತ ಚಳವಳಿ: ರೂಪಿಸಿದ ಹೋರಾಟಗಳು, ವೈವಿಧ್ಯತೆ, ಮಹತ್ವ, ಪ್ರಸ್ತುತತೆ ಮತ್ತು ದಾಖಲೀಕರಣದ ಆಯಾಮಗಳು’ ಕುರಿತ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ದಲಿತ ಸಂಘಟನೆಗಳು ಮಾನವತೆಗಾಗಿ ಹೋರಾಟ ನಡೆಸಿದರು. ಅವರ ಹೋರಾಟದ ಆಶಯಗಳು ಸಂವಿಧಾನ ಬದ್ಧವಾಗಿರುತ್ತಿತ್ತು. ಅಂಬೇಡ್ಕರ್ ಅವರ ವಿಚಾರ ಧಾರೆಯೇ ದಲಿತ ಚಳವಳಿಗೆ ಸ್ಫೂರ್ತಿ.

ಇದು ಬರೀ ನಮ್ಮ ವಿಮೋಚನೆಗಷ್ಟೇ ಅಲ್ಲ. ಇಡೀ ದೇಶದ ವಿಮೋಚನೆಗಾಗಿ ನಡೆದ ಹೋರಾಟ ಎಂದು ಹೇಳಿದರು.
ಸಂವಿಧಾನದತ್ತವಾಗಿ ಸೌಲಭ್ಯ ನೀಡಿದ್ದರೂ ಇಂದು ದಲಿತರು ಏನೂ ಇಲ್ಲದಂತಿದ್ದಾರೆ. ಇದು ವ್ಯವಸ್ಥೆಯಲ್ಲಿನ ದೋಷ. ಈ ದೋಷವನ್ನು ಸರಿಪಡಿಸುವ ಪ್ರಯತ್ನ ಆಗಬೇಕಿದೆ. ಅದುವೇ ದಮ್ಮ ಕಾರ್ಯ. ಅದನ್ನು ದಲಿತ ಸಂಘಟನೆಗಳು ಪುನಃ ಪುನಃ ಮಾಡಬೇಕು. ಹೊಸ ತಲೆಮಾರಿನ ಯುವಕರನ್ನು ಪ್ರೋತ್ಸಾಹಿಸಲು ಆಗಾಗ್ಗೆ ಇಂಥ ಕಾರ್ಯಾಗಾರಗಳ ಮೂಲಕ ಸೇರಬೇಕು ಎಂದು ಅಭಿಪ್ರಾಯಪಟ್ಟರು.

ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಅಂಬೇಡ್ಕರ್ ಫಾದರ್ ಆಫ್ ಎವೆರಿಥಿಂಗ್. ಇಂಥ ಮಹಾತ್ಮರನ್ನು ಒಂದು ಸಮಾಜಕ್ಕಷ್ಟೇ ಸೇರಿದವರು ಎಂದು ಕರೆಯುವುದು ದುರಂತ. ಸಂಸ್ಕøತಿ ಎಂದರೆ ಹೊಣೆಗಾರಿಕೆ, ಜವಾಬ್ದಾರಿ, ಸಮಾನತೆ, ಸೋದರತ್ವ, ಸಹಬಾಳ್ವೆ ಎಂದವರು ಡಾ.ಅಂಬೇಡ್ಕರ್. ಇದನ್ನು ಕೇಳಿದರೆ ಆ ಕಾಲದಲ್ಲಿ ಯಾವುದೂ ಇರಲಿಲ್ಲವೇನೋ ಎಂದು ಹೇಳಲು ಸಂಕಟವಾಗುತ್ತದೆ ಎಂದರು.

ಕಾರ್ಯಾಗಾರದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಪೀಠದ ಸಂದರ್ಶಕ ಪ್ರಾಧ್ಯಾಪಕ ಎನ್.ವೆಂಕಟೇಶ್ ಉಪಸ್ಥಿತರಿದ್ದರು.

ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿ

ಕರ್ನಾಟಕದ ದಲಿತ ಚಳವಳಿಗೆ 40 ವರ್ಷಗಳಾಗಿದೆ. ಇಂತಹ ನಿರಂತರ ಚಳವಳಿಯಲಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿ ಎಂದು ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್ (ಜನ್ನಿ) ಬೇಸರದಿಂದ ನುಡಿದರು.

ಅಗಲಿದ ದಲಿತ ಹೋರಾಟಗಾರರಿಗೆ ಗೌರವ ಸಮರ್ಪಿಸಿ ಮಾತನಾಡಿದ ಅವರು, ಅಂಬೇಡ್ಕರ್, ಲೋಹಿಯಾ ಅವರು ಹಾಕಿ ಕೊಟ್ಟ ತಾತ್ವಿಕ ನೆಲೆಯಲ್ಲಿ ಲಕ್ಷಾಂತರ ಜನರು ನ್ಯಾಯ, ನೀತಿ, ಸಮಾನತೆಗಾಗಿ ಬೀದಿಗಿಳಿದು ಹೋರಾಡಿದರು. ಅಂತಹ ಹಿರಿಯ ದಲಿತ ಪರ ಹೋರಾಟಗಾರರನ್ನು ಸ್ಮರಿಸಿಕೊಂಡು, ಅವರ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕಾದದ್ದು ನಮ್ಮ ಗುರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ದಲಿತ ಪರ ಚಳವಳಿಗಳಲ್ಲಿ ಭಾಗವಹಿಸಿದ್ದ ಪ್ರೊ.ಬಿ.ಕೃಷ್ಣಪ್ಪ, ಎನ್.ಗಿರಿಯಪ್ಪ, ದೇವಯ್ಯ ಹರವೆ, ಎಂ.ಡಿ.ಗಂಗಣ್ಣ, ಮುಳ್ಳೂರು ನಾಗರಾಜ, ಭಾಗ್ಯ ಸೋಮಶೇಖರ್, ಹಳ್ಳಿಗೆರೆ ರಾಮಚಂದ್ರ ಸೇರಿದಂತೆ ನೂರಾರು ಮಂದಿಯ ಸ್ಮರಿಸಿಕೊಂಡ ಅವರು, ಇವರೆಲ್ಲರೂ ಜಿಲ್ಲಾ, ತಾಲೂಕು ಸಂಘಟನೆಗಳಲ್ಲಿ ಕೆಲಸ ಮಾಡುತ್ತಾ ಅನಾರೋಗ್ಯಕ್ಕೊಳಗಾಗಿದ್ದರು ಎಂದು ಹೇಳುವಾಗ ಜನಾರ್ಧನ್ (ಜನ್ನಿ) ಬಾವುಕರಾದರು.

ಹಿರಿಯ ದಲಿತ ಹೋರಾಟಗಾರರು ನಡೆಸಿದ್ದ ಅಂತಹ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗಬೇಕಾಗಿರುವ ಅನಿವಾರ್ಯತೆಯ ಬಗ್ಗೆ ಒತ್ತಿ ಹೇಳಿದರು.

Translate »