ಮೈಸೂರು ರಿಂಗ್ ರಸ್ತೆ ಡಾಂಬರೀಕರಣ
ಮೈಸೂರು

ಮೈಸೂರು ರಿಂಗ್ ರಸ್ತೆ ಡಾಂಬರೀಕರಣ

October 17, 2019

ಮೈಸೂರು,ಅ.16(ಆರ್‍ಕೆ)- ಸುಮಾರು 320 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮೈಸೂರಿನ ರಿಂಗ್ ರಸ್ತೆಯಲ್ಲಿ ಗುಂಡಿ ಗಳು ಬಿದ್ದಿದ್ದು, ಡಾಂಬರೀಕರಣ ಮಾಡಲು ರಾಷ್ಟ್ರೀಯ ಹೆದ್ದಾರಿ ವಿಭಾಗವು ಮುಂದಾಗಿದೆ. ಒಟ್ಟು 42 ಕಿ.ಮೀ. ಉದ್ದದ ಮೈಸೂರು ಹೊರ ವರ್ತುಲ ರಸ್ತೆ ಪೈಕಿ ಮೊದಲ ಹಂತದಲ್ಲಿ 10 ಕಿ.ಮೀ.ಗೆ ಡಾಂಬರೀಕರಣ ಮಾಡುವ ಕಾಮಗಾರಿಗೆ ಅನುಮೋದನೆ ದೊರೆ ತಿದ್ದು, 15 ಕೋಟಿ ರೂ. ಅನುದಾನ ಮಂಜೂರಾಗಿದೆ. ನಾರಾ ಯಣ ಹೃದಯಾಲಯದ ಸಮೀಪದ ಜಂಕ್ಷನ್‍ನಿಂದ ಹಿನಕಲ್ ಫ್ಲೈ ಓವರ್‍ವರೆಗೆ ಮೊದಲ ಹಂತದಲ್ಲಿ 10 ಕಿ.ಮೀ. ರಿಂಗ್ ರಸ್ತೆಗೆ ಎರಡೂ ಬದಿಯ ಸರ್ವಿಸ್ ರೋಡ್ ಸೇರಿ ಆಸ್ಫಾಲ್ಟಿಂಗ್ ಕೆಲಸ ಮಾಡಲು ರಾಷ್ಟ್ರೀಯ ಹೆದ್ದಾರಿ ವಿಭಾಗವು ಇ-ಟೆಂಡರ್ ಪ್ರಕಟಿಸಿದೆ.

ಟೆಂಡರ್ ಹಾಕಲು ನವೆಂಬರ್ 14 ಕಡೇ ದಿನವಾಗಿದ್ದು, ನವೆಂಬರ್ 15ರ ನಂತರ ಅರ್ಹ ಗುತ್ತಿಗೆದಾರರಿಗೆ ಡಾಂಬರೀ ಕರಣ ಮಾಡಲು ವರ್ಕ್ ಆರ್ಡರ್ ಕೊಡಲಾಗುವುದು. ನವೆಂಬರ್ 3ನೇ ವಾರದಲ್ಲಿ ಕಾಮಗಾರಿ ಆರಂಭಿಸಿ ತಿಂಗಳೊಳಗೆ ಪೂರ್ಣ ಗೊಳಿಸಲು ಕ್ರಮ ವಹಿಸಲಾಗುವುದು ಎಂದು ಇಲಾಖೆ ಅಧಿಕಾರಿ ಗಳು ತಿಳಿಸಿದ್ದಾರೆ. ಉಳಿದ 32 ಕಿ.ಮೀ. ರಸ್ತೆಗೂ ಆಸ್ಫಾಲ್ಟಿಂಗ್ ಮಾಡಲು ಅನುಮೋದನೆ ಹಾಗೂ ಅನುದಾನಕ್ಕೆ ದರಪಟ್ಟಿ ಮತ್ತು ಡಿಪಿಆರ್‍ನೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ದೆಹಲಿಯ ಕೇಂದ್ರ ಕಚೇರಿಯಿಂದ ಅನುಮತಿ ಬಂದ ನಂತರ ನಿಯಮಾನುಸಾರ ಡಾಂಬರೀಕರಣ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ವಾಹನಗಳು ಮೈಸೂರು ನಗರಕ್ಕೆ ಪ್ರವೇಶಿಸುವುದನ್ನು ತಡೆದು, ಬನ್ನೂರು ರಸ್ತೆ, ತಿ.ನರಸೀಪುರ ರಸ್ತೆ, ನಂಜನಗೂಡು ರಸ್ತೆ, ಹೆಚ್.ಡಿ.ಕೋಟೆ ರಸ್ತೆ, ಹುಣಸೂರು ರಸ್ತೆಗಳಿಂದ ಬರುವ ವಾಹನಗಳು ಬೆಂಗಳೂರಿಗೆ ತೆರಳಲು ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸುವ ಸಲುವಾಗಿ 2003ರಲ್ಲಿ ಆರಂಭಿಸಿದ ಮೈಸೂರು ರಿಂಗ್ ರಸ್ತೆ ಕಾಮಗಾರಿಯು 2016ರಲ್ಲಿ ಪೂರ್ಣಗೊಂಡಿತ್ತು.

ಕೇಂದ್ರದ ನರ್ಮ್ ಯೋಜನೆಯಡಿ ಕೈಗೊಂಡಿದ್ದ ರಿಂಗ್ ರಸ್ತೆ ಯೋಜನೆಗೆ ರಾಜ್ಯ ಸರ್ಕಾರ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವೂ ಸಹಭಾಗಿಯಾಗಿ ಒಟ್ಟು ಸುಮಾರು 320 ಕೋಟಿ ರೂ.ಗಳನ್ನು ರಿಂಗ್ ರಸ್ತೆಗೆ ವ್ಯಯ ಮಾಡಲಾಗಿತ್ತು. ಯಾವುದೇ ರಸ್ತೆಯನ್ನು ಪ್ರತೀ 3 ವರ್ಷಕ್ಕೊಮ್ಮೆ ಡಾಂಬರೀಕರಣ ಮಾಡಬೇಕಾ ಗಿದ್ದು, ಇದೀಗ ಅಲ್ಲಲ್ಲಿ ಗುಂಡಿ ಬಿದ್ದಿರುವ ಕಾರಣ ರಾಷ್ಟ್ರೀಯ ಹೆದ್ದಾರಿ ವಿಭಾಗವು ಆಸ್ಫಾಲ್ಟಿಂಗ್ ಕೆಲಸವನ್ನು ಕೈಗೆತ್ತಿಕೊಂಡಿದೆ.

ರಸ್ತೆ ನಿರ್ಮಿಸಿದ ಮುಡಾ, ಅದರ ನಿರ್ವಹಣೆ ಮಾಡಲಾಗದ ಕಾರಣ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಸಂಪರ್ಕಿಸುವುದರಿಂದ ಇತ್ತೀಚೆಗಷ್ಟೇ ರಿಂಗ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ವಶಕ್ಕೆ ವಹಿಸ ಲಾಗಿದೆ. ರಿಂಗ್ ರಸ್ತೆಯ ಸ್ಟ್ರೀಟ್‍ಲೈಟ್ ನಿರ್ವಹಣೆ ಮಾತ್ರ ಮುಡಾ ಮತ್ತು ಪಾಲಿಕೆ ಹೆಗಲಿಗೆ ಹೊರಿಸಲಾಗಿದ್ದು, ದಸರಾ ವೇಳೆ ಕೆಟ್ಟಿರುವ ವಿದ್ಯುದ್ದೀಪಗಳನ್ನು ರಿಪೇರಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Translate »