ಮಳವಳ್ಳಿಯಲ್ಲಿ ನಿಖಿಲ್ ರೋಡ್‍ಶೋ
ಮಂಡ್ಯ

ಮಳವಳ್ಳಿಯಲ್ಲಿ ನಿಖಿಲ್ ರೋಡ್‍ಶೋ

March 20, 2019
  • ಅಪ್ಪನಂತೆ ಅಭಿವೃದ್ಧಿ ಕೆಲಸ ಮಾಡುವೆ, ಒಂದು ಅವಕಾಶ ಕೊಡಿ
  • ಪ್ರಚಾರ ವೇಳೆ `ಯಶ್, ದರ್ಶನ್ ಗೋ ಬ್ಯಾಕ್’ ಘೋಷಣೆ
  • ಯಾರಿಗೇ ಆಗಲಿ ಗೋಬ್ಯಾಕ್ ಎನ್ನುವುದು ಸರಿಯಲ್ಲ: ನಿಖಿಲ್

ಮಂಡ್ಯ: ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಳವಳ್ಳಿ ಕ್ಷೇತ್ರದ ವಿವಿಧೆಡೆ ಮಂಗಳವಾರ ರೋಡ್ ಶೋ ನಡೆಸಿ ಮತ ಯಾಚಿಸಿದರು.

ಮಳವಳ್ಳಿ ತಾಲೂಕಿನ ದೇವಿರಳ್ಳಿ ಬಳಿ ಜೆಡಿಎಸ್ ಕಾರ್ಯಕರ್ತರಿಂದ ನಿಖಿಲ್ ಕುಮಾರಸ್ವಾಮಿಗೆ ಭರ್ಜರಿ ಸ್ವಾಗತ ದೊರೆಯಿತು. ಗಡಿ ಭಾಗದಿಂದ ಮಳವಳ್ಳಿ ಪಟ್ಟಣದವರೆಗೂ ಬೈಕ್‍ಗಳ ಮೆರವಣಿಗೆ ನಡೆಯಿತು. ದಳವಾಯಿ ಕೋಡಿಹಳ್ಳಿ, ಹಲಗೂರು, ಹಾಡ್ಲಿ ಸರ್ಕಲ್, ಬೆಳಕವಾಡಿ, ಪೂರಿಗಾಲಿ, ಮಳವಳ್ಳಿ, ತಳಗವಾದಿಯಲ್ಲಿ ನಿಖಿಲ್ ಪ್ರಚಾರ ಸಭೆ ನಡೆಸಿದರು.

ನಾಳೆ ಸುಮಲತಾ ನಾಮಪತ್ರ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಅವರು, ಚುನಾ ವಣೆಗೆ ಸ್ಪರ್ಧಿಸಲು ಎಲ್ಲರಿಗೂ ಅವಕಾಶ ಇದೆ ಅವರಿಗೆ ಒಳ್ಳೆಯದಾಗಲಿ, ಈಗಾಗಲೇ ನಾನು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡ ರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಅವರು ನಮಗೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚೆಗೆ `ಗೋ ಬ್ಯಾಕ್’ ಎಂಬುದು ಅಭಿಯಾನ ರೀತಿ ಆರಂಭವಾಗಿದೆ. ಜಾಲ ತಾಣದಲ್ಲಿರೋ ನಾಲ್ಕು ಜನ `ಗೋ ಬ್ಯಾಕ್’ ಎಂದರೆ ಕ್ಷೇತ್ರದ ಜನರ ಮನದ ಚಿತ್ರಣ ಬದಲಾಗದು. ಹಾಗಾಗಿ ಯಾರೂ ಯಾರಿಗೂ ಗೋ ಬ್ಯಾಕ್ ಎನ್ನುವುದು ಸರಿಯಲ್ಲ. ಜಿಲ್ಲೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದೇ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ದೇವೇಗೌಡರೇ ಹೀರೋ: ಶಾಸಕ ಡಾ.ಕೆ. ಅನ್ನದಾನಿ ಮಾತನಾಡಿ, ದೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರೇ ದೊಡ್ಡ ಮತ್ತು ನಿಜವಾದ ಹೀರೋ ಎಂದರು.

ಸಿನಿಮಾ ನಟರು ಸಿನಿಮಾದಲ್ಲಷ್ಟೇ ಹೀರೊ. ಆದರೆ ನಿಜವಾಗಿ ದೇವೇಗೌಡರೇ ಹೀರೋ ಅದು ರೈತರ ಹೀರೋ.ಹಾಗಾಗಿ ಜಿಲ್ಲೆಯಲ್ಲಿ ಯಾವುದೇ ಹೀರೊಗಳು ಬಂದರೂ ಏನೂ ಆಗೋದಿಲ್ಲ. ಕಾಂಗ್ರೆಸ್ ಮುಖಂಡರು ಮೈತ್ರಿ ಧರ್ಮಕ್ಕೆ ಅನುಗುಣವಾಗಿ ನಡೆದು ಕೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ. ನಾವು ಎಚ್ಚರಿಕೆಯಿಂದ ಚುನಾವಣೆ ಮಾಡಿ ನಿಖಿಲ್ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಹಲಗೂರು: ಬಳಿಕ ಹಲಗೂರಿನಲ್ಲಿ ಮಾತನಾಡಿದ ನಿಖಿಲ್, ತಂದೆ, ತಾತನ ಹೆಸರಲ್ಲಿ ಮತಯಾಚಿಸಿದರು. ಕುಮಾರ ಸ್ವಾಮಿ ಮಗ ಅಂತ ಮತ ಕೊಡಿ. ಅಪ್ಪನಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಜೆಡಿಎಸ್- ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ಮಾಡಿ ನನ್ನನ್ನು ಅಭ್ಯರ್ಥಿ ಮಾಡಲಾಗಿದೆ. ನನಗೆ ಯಾವುದೇ ಸ್ವಾರ್ಥ ಇಲ್ಲ. ನಮ್ಮ ಪಕ್ಷದ ಮುಖಂಡರು ತೆಗೆದುಕೊಂಡ ತೀರ್ಮಾನಕ್ಕೆ ಬೆಲೆ ಕೊಟ್ಟು ಅಭ್ಯರ್ಥಿ ಆಗಿದ್ದೇನೆ. ತಮ್ಮ ಮಧ್ಯೆ ಇದ್ದು ಪ್ರೀತಿ-ವಿಶ್ವಾಸ ಸಂಪಾದಿಸಲು ಬಂದಿದ್ದೇನೆ. ಲೋಕಸಭೆಗೆ ಹೋಗಿ ಮೆರೆಯಲು ಅಲ್ಲ. ದೇವೇಗೌಡ, ಕುಮಾರಸ್ವಾಮಿ ಹಾದಿ ಯಲ್ಲಿ ನಾನು ನಡೆಯುತ್ತೇನೆ ಎಂದರು.

ಯಶ್, ದರ್ಶನ್ ಗೋ ಬ್ಯಾಕ್: ಸುಮ ಲತಾ ಪರ ಪ್ರಚಾರಕ್ಕೆ ಬರಲಿರುವ ಚಿತ್ರನಟ ರಾದ ದರ್ಶನ್, ಯಶ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಎದುರೇ ಗೋ ಬ್ಯಾಕ್ ಘೋಷಣೆ ಕೂಗಿದರು.

ಟ್ರಾಫಿಕ್ ಕಿರಿಕಿರಿ: ನಿಖಿಲ್ ಪ್ರಚಾರದ ವೇಳೆ ಟ್ರಾಫಿಕ್ ಕಿರಿಕಿರಿ ಉಂಟಾಯಿತು. ಹಲಗೂರು ವೃತ್ತದಲ್ಲಿ ಅರ್ಧಗಂಟೆ ಕಾಲ ತೆರೆದ ವಾಹನದಲ್ಲಿ ನಿಂತು ನಿಖಿಲ್ ಪ್ರಚಾರ ಮಾಡುತ್ತಿದ್ದಾಗ ಮುಖ್ಯರಸ್ತೆಯಲ್ಲಿ 2 ಕಿ.ಮೀ. ಉದ್ದ ವಾಹನಗಳು ಸಾಲು ಗಟ್ಟಿ ನಿಂತಿದ್ದುದು ಕಂಡುಬಂತು. ನಿಖಿಲ್ ಪ್ರಚಾರದಿಂದ ಉಂಟಾದ ಟ್ರಾಫಿಕ್ ಕಿರಿ ಕಿರಿಗೆ ವಾಹನ ಸವಾರರು ಹೈರಾಣಾದರು. ರಸ್ತೆ ಮಧ್ಯೆ ಪ್ರಚಾರ ಮಾಡುತ್ತಿದ್ದುದಕ್ಕೆ ಜೆಡಿಎಸ್ ನಾಯಕರಿಗೆ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದುದು ಕಂಡುಬಂತು.
ಪೆಟ್ರೋಲ್ ಭಾಗ್ಯ: ಪ್ರಚಾರದ ಸಲು ವಾಗಿ ಬೈಕ್ ರ್ಯಾಲಿ ನಡೆಸಿದ ಜೆಡಿಎಸ್ ಕಾರ್ಯಕರ್ತರಿಗೆ ಪೆಟ್ರೋಲ್ ಭಾಗ್ಯವೂ ಲಭಿಸಿತು. ಪ್ರತಿ ಬೈಕ್‍ಗೂ 100 ರೂ. ಪೆಟ್ರೋಲ್ ಕೂಪನ್ ವಿತರಿಸಲಾಗಿತ್ತು. ಹಲಗೂರು ಹೊರವಲಯದ ಇಂಡಿಯನ್ ಪೆಟ್ರೋಲ್ ಬಂಕ್‍ನಲ್ಲಿ ಸಾಲುಗಟ್ಟಿದ್ದ ಜೆಡಿಎಸ್ ಕಾರ್ಯಕರ್ತರು ಕೂಪನ್ ನೀಡಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದುದು ಕಂಡು ಬಂತು.

ಇಂದಿನ ನಿಖಿಲ್ ರೋಡ್ ಷೋನಲ್ಲಿ ಸಚಿವ ತಮ್ಮಣ್ಣ, ದೇವರಾಜ ಅರಸು ನಿಗಮದ ಅಧ್ಯಕ್ಷ, ಶಾಸಕ ಅನ್ನದಾನಿ ಮತ್ತಿತರರು ಸಾಥ್ ನೀಡಿದರು.

Translate »