ಗುಂಡ್ಲುಪೇಟೆ ಸಾರಿಗೆ ಬಸ್ ನಿಲ್ದಾಣ ಪರಿಶೀಲಿಸಿದ ಶಾಸಕ ನಿರಂಜನ್
ಚಾಮರಾಜನಗರ

ಗುಂಡ್ಲುಪೇಟೆ ಸಾರಿಗೆ ಬಸ್ ನಿಲ್ದಾಣ ಪರಿಶೀಲಿಸಿದ ಶಾಸಕ ನಿರಂಜನ್

June 1, 2018

ಗುಂಡ್ಲುಪೇಟೆ:  ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಹಾಗೂ ಡಿಪೋಗೆ ಶಾಸಕ ಸಿ.ಎಸ್.ನಿರಂಜನಕುಮಾರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಸಾರಿಗೆ ಬಸ್‍ನಿಲ್ದಾಣದಲ್ಲಿ ಮತ್ತು ಡಿಪೋ ಒಳಗಡೆ ಸಿಬ್ಬಂದಿ ವಾಹನ ನಿಲುಗಡೆ ಸ್ಥಳದಲ್ಲಿ ಮಳೆ ನೀರು ನಿಂತು ತೇಗದ ಮರಗಳು ನೆಲಕ್ಕೆ ಬೀಳುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇದಲ್ಲದೇ ಬಹಳ ವರ್ಷಗಳಿಂದ ಪಟ್ಟಣದಿಂದ ಕೊಯಮತ್ತೂರಿಗೆ ಸಂಚರಿಸುತ್ತಿದ್ದ ಬಸ್ ಮಾರ್ಗ ಕೂಡಲೇ ಪ್ರಾರಂಭಿಸಲು ಸೂಚನೆ ನೀಡಿ, ನಿಲ್ದಾಣದಲ್ಲಿ ಪ್ರಯಾಣ ಕರಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಹಾಗೂ ಆವರಣದಲ್ಲಿ ಶುದ್ಧ ಕುಡಿಯುವ ನೀರು ಘಟಕ ಪ್ರಾರಂಭಿಸಲು ನೆರವು ನೀಡುವುದಾಗಿ ತಿಳಿಸಿದರು.

ಮಳೆ ನೀರು ನಿಲ್ದಾಣದೊಳಗೆ ನುಗ್ಗಿ ಅವಾಂತರಗಳುಂಟಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಹೆದ್ದಾರಿ ಪ್ರಾಧಿಕಾರ ಹಾಗೂ ಪುರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದ ನಿರಂಜನ್, ಸೂಕ್ತ ತುರ್ತು ಕ್ರಮ ತೆಗೆದುಕೊಂಡು ಪ್ರತ್ಯೇಕ ಒಳಚರಂಡಿ ನಿರ್ಮಿಸಲು ಸೂಚನೆ ನೀಡಿದರು. ಬೇಡಿಕೆಯಿರುವ ವಿವಿಧ ಗ್ರಾಮಗಳಿಗೆ ಸೂಕ್ತ ಬಸ್ ಮಾರ್ಗ ಕಲ್ಪಿಸಿ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ಅವರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಾರಿಗೆ ಡಿಪೋ ಮ್ಯಾನೇಜರ್ ಎಂ.ಜಿ.ಜಯಕುಮಾರ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ಎನ್.ರಮೇಶ್, ಕುಮಾರ್, ಎಸ್.ಗೋವಿಂದರಾಜನ್, ಮಲ್ಲರಾಜು, ತಾಪಂ ಮಾಜಿ ಸದಸ್ಯ ಸಿ.ಮಹದೇವಪ್ರಸಾದ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ಮುಖಂಡರಾದ ಎಸ್.ಸಿ.ಮಂಜುನಾಥ್ ಮತ್ತಿತರರು ಇದ್ದರು.

Translate »