ನವದೆಹಲಿ, ಜ.16- 2012ರಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ನಿಗದಿಯಾಗಿರುವ ಮರಣ ದಂಡನೆ ಕುರಿತಂತೆ ನಾಳೆಯೊಳಗೆ ವರದಿಯೊಂದನ್ನು ಸಲ್ಲಿಸುವಂತೆ ದೆಹಲಿಯ ನ್ಯಾಯಾಲಯವೊಂದು ತಿಹಾರ್ ಜೈಲಿಗೆ ನಿರ್ದೇಶಿಸಿದೆ.
ಜನವರಿ 22ಕ್ಕೆ ಮರಣ ದಂಡನೆ ನಿಗದಿಯಾಗಿರುವಂತೆ ಬಾಕಿ ಉಳಿದಿರುವ ಪ್ರಕ್ರಿಯೆಗಳ ಕುರಿತಂತೆ ದೆಹಲಿ ಸರ್ಕಾರಕ್ಕೆ ಜೈಲಿನ ಆಡಳಿತ ವರ್ಗ ತಿಳಿಸಿದ ನಂತರ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ದೆಹಲಿ ಜೈಲಿನ ನಿಯಮ 840 ಪ್ರಕಾರ ಒಂದು ವೇಳೆ ಮರಣ ದಂಡನೆ ದಿನಾಂಕವನ್ನು ಮುಂದೂಡಬೇಕಾದರೆ ತಿಹಾರ್ ಆಡಳಿತ ವರ್ಗ ದೆಹಲಿ ಸರ್ಕಾರದ ಪ್ರತಿಕ್ರಿಯೆಯನ್ನು ಪಡೆಯಬೇಕಾಗುತ್ತದೆ. ನಾಳೆ ಮಧ್ಯಾಹ್ನ 3.30ಕ್ಕೆ ಮತ್ತೆ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ. ಕ್ಷಮಾದಾನ ಅರ್ಜಿ ಬಗ್ಗೆ ಮಾತ್ರ ಮಾಹಿತಿ ನೀಡಲಾಗಿದೆ.
ನಿಯಮ 840ನ್ನು ಪಾಲಿಸಲಾಗಿದೆಯೇ? ಎಂದು ನ್ಯಾಯಾಲಯ ಉಲ್ಲೇಖಿಸಿತ್ತು. ಮತ್ತೊಂದೆಡೆ ಅತ್ಯಾಚಾರಿಗಳ ಪೈಕಿ ಒಬ್ಬನಾಗಿದ್ದ ಮುಕೇಶ್ ಕುಮಾರ್ ಕ್ಷಮಾದಾನ ಅರ್ಜಿಯನ್ನು ದೆಹಲಿ ಸರ್ಕಾರ ವಜಾಗೊಳಿಸಿದೆ. ಮುಕೇಶ್ ಕುಮಾರ್ ಸಲ್ಲಿಸಿರುವ ಕ್ಷಮಾದಾನ ಅರ್ಜಿ ದೆಹಲಿಯ ಗೃಹ ಸಚಿವಾಲಯನ್ನು ತಲುಪಿದ್ದು, ಅದನ್ನು ಶೀಘ್ರದಲ್ಲಿಯೇ ರಾಷ್ಟ್ರಪತಿಗಳಿಗೆ ರವಾನಿಸಲಾಗುತ್ತದೆ. ರಾಷ್ಟ್ರಪತಿ ಈ ಕ್ಷಮಾದಾನ ಅರ್ಜಿಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.