‘ಇಲ್ಲ’ಗಳ ನಡುವೆ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ
ಚಾಮರಾಜನಗರ

‘ಇಲ್ಲ’ಗಳ ನಡುವೆ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ

September 3, 2018

ಯಳಂದೂರು:- ಮೃತ್ಯುಗೆ ಆಹ್ವಾನ ನೀಡುವ ವಿದ್ಯುತ್ ಪರಿವರ್ತಕ….. ದೈಹಿಕ ಶಿಕ್ಷ ಕರೇ ಇಲ್ಲದೆ ಕ್ರೀಡಾ ವಂಚಿತ ವಿದ್ಯಾರ್ಥಿಗಳು… ಚುಮು ಚುಮು ಚಳಿಯಲ್ಲಿ ಹೆಣ್ಣು ಮಕ್ಕಳಿಗೆ ತಣ್ಣೀರು ಸ್ನಾನ! ಬಿಸಿ ನೀರು ಬೇಕೆಂದರೆ, ಮಕ್ಕಳೇ ಸ್ವತಃ ಒಲೆಯಲ್ಲಿ ನೀರು ಕಾಯಿಸಬೇಕಾದ ಪರಿಸ್ಥಿತಿ… ಇದು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಸಚಿವರ ಕ್ಷೇತ್ರದಲ್ಲಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ದುಸ್ಥಿತಿ.

ಯಳಂದೂರು ತಾಲೂಕು ಕೇಂದ್ರದಿಂದ 3 ಕಿಮೀ ದೂರದಲ್ಲಿರುವ ಮೆಲ್ಲಹಳ್ಳಿ ಗೇಟ್ ಬಳಿ ದುಗ್ಗಹಟ್ಟಿ ಗ್ರಾಮದ ರಾಜೇಶ ಎಂಬುವರ ತೋಟದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಡಳಿತ ವ್ಯಾಪ್ತಿಗೆ ಬರುವ ಕಿತ್ತೂರು ರಾಣಿ ಚೆನ್ನಮ್ಮ ಹೆಣ್ಣು ಮಕ್ಕಳ ವಸತಿ ಶಾಲೆಯಲ್ಲಿ ಸುಮಾರು 75 ಮಕ್ಕಳು ಇದ್ದಾರೆ.

ರಾಜ್ಯ ಸರಕಾರ ಕೋಟಿ ಹಣ ವ್ಯಯ ಮಾಡಿ ವಸತಿ ಶಾಲೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಆದರೂ ಈ ವಸತಿ ಶಾಲೆಯಲ್ಲಿ ಇಲ್ಲಗಳದ್ದೇ ದರ್ಬಾರು. ಈ ಹೆಣ್ಣು ಮಕ್ಕಳ ವಸತಿ ಶಾಲೆಯಲ್ಲಿ ಬಿಸಿ ನೀರಿಲ್ಲದೆ, ತಣ್ಣೀರು ಸ್ನಾನ ಮಾಡಬೇಕಾದ ಪರಿಸ್ಥಿತಿ. ಇದರಿಂದ ಶೀತ ಜ್ವರ, ಚಳಿ, ಕೆಮ್ಮು ಇವುಗಳಿಗೆ ತುತ್ತಾ ಗುವ ಮಕ್ಕಳು ಮೊದಲೇ ತೋಟದಲ್ಲಿ ಶಾಲೆ ಇರುವುದರಿಂದ ಮಕ್ಕಳ ಶಿಕ್ಷಣ ಕಲಿಕೆಗೆ ಉತ್ತಮ ಪರಿಸರ ಇದೆಯಾದರು ಕಬಿನಿ ಚಾನಲ್ ನೀರು ಬಿಟ್ಟಿರುವುದರಿಂದ ಮಕ್ಕಳಿಗೆ ಶೀತಗಾಳಿಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಮಳೆಗಾಲದಲ್ಲಿ ಮೋಡ ಕವಿದ ಸಂದರ್ಭದಲ್ಲಿ ಸೋಲಾರ್ ಇದ್ದರೂ ಮಕ್ಕಳಿಗೆ ಪ್ರಯೋಜನವಾಗದೆ ಬಿಸಿ ನೀರಿಗಾಗಿ ಒಳ್ಳೆಣ್ಣೆಯ ಟಿನ್‍ನಲ್ಲಿ ಮಕ್ಕಳೇ ನೀರು ಕಾಯಿಸಿಕೊಂಡು ಸ್ನಾನ ಮಾಡುವ ಪರಿಸ್ಥಿತಿ ಇದೆ.

ನೆಲದಲ್ಲೆ ಕುಳಿತು ಪಾಠ: ವಸತಿ ಶಾಲೆಯಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದಾರೆ. ಈ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ ಕೇಳುವ ಸ್ಥಿತಿ ಇದೆ. ಇಲ್ಲಿ ವಿದ್ಯಾರ್ಥಿಗಳಿಗೆ ಊಟ, ಮಲಗಲು ಚಾಪೆ, ಎಲ್ಲಾ ನೀಡಿರುವ ಸರಕಾರ, ಕಲಿತ ಜಾಗದಲ್ಲೇ ಮಲ ಗುವ ಸ್ಥಿತಿ ನಿರ್ಮಿಸಿದ್ದಾರೆ.

ಈ ಶಾಲೆಯಲ್ಲಿ 6 ಜನ ಶಿಕ್ಷಕರು ಇದ್ದಾರೆ. 6 ಮತ್ತು 7ನೇ ತರಗತಿ ನಡೆಯುತ್ತಿದೆ. ಆದರೆ ಇಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳನ್ನು ಹೇಳಿ ಕೊಡಲು ಮಾತ್ರ ದೈಹಿಕ ಶಿಕ್ಷಕರೇ ಇಲ್ಲ.

ಮೃತ್ಯುವಿಗೆ ಆಹ್ವಾನ ನೀಡುತ್ತಿದೆ ಪರಿವರ್ತಕ: ಶಾಲೆ ಅವರಣದಲ್ಲೇ ಕಬ್ಬಿಣದ ವಿದ್ಯುತ್ ಪರಿವರ್ತಕ ಪಟ್ಟಿ ಇದ್ದು ಕಬ್ಬಿಣದ ಕಂಬಗಳಿಂದ ಹಾಕಲಾಗಿದೆ. ಇದರಿಂದ ಆಕಸ್ಮಿಕವಾಗಿ ವಿದ್ಯುತ್ ಪರಿವರ್ತಕ ಸಿಡಿದು ಇಲ್ಲ ಭೂಮಿಗೆ ವಿದ್ಯುತ್ ಇಳಿದು ಪ್ರಾಣ ಹಾನಿಯಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕಾಗಿದೆ.

Translate »