ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಮೈಸೂರು ಪಾಲಿಕೆಯ ನಾಲ್ಕು ವಾರ್ಡ್‍ಗಳಲ್ಲಿ ನಡೆಯದ ದಸರಾ ಕಾಮಗಾರಿ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಮೈಸೂರು ಪಾಲಿಕೆಯ ನಾಲ್ಕು ವಾರ್ಡ್‍ಗಳಲ್ಲಿ ನಡೆಯದ ದಸರಾ ಕಾಮಗಾರಿ

September 17, 2019

ಮೈಸೂರು,ಸೆ.16(ಆರ್‍ಕೆಬಿ)-ದಸರಾ ಸಂದರ್ಭದಲ್ಲಿ ಮೈಸೂರು ನಗರಾದ್ಯಂತ ವಿವಿಧ ಕಾಮಗಾರಿಗಳು ಆರಂಭವಾಗಿ ದ್ದರೂ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಗೆ ಬರುವ ಮೈಸೂರಿನ ನಾಲ್ಕು ವಾರ್ಡ್ ಗಳಲ್ಲಿ ಕಾಮಗಾರಿ ನಡೆಯದ ಸಂಬಂಧ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸೋಮವಾರ ಜಲದರ್ಶಿನಿ ಅತಿಥಿಗೃಹದ ಸಭಾಂಗಣದಲ್ಲಿ ನಗರ ಪಾಲಿಕೆ ಹಾಗೂ ಮುಡಾ ಅಧಿಕಾರಿಗಳ ಸಭೆ ನಡೆಸಿದರು.

ತಮ್ಮ ಕ್ಷೇತ್ರ ವ್ಯಾಪ್ತಿಯ ನಾಲ್ಕು ವಾರ್ಡ್ ಗಳಲ್ಲಿ ಸ್ವಚ್ಛತೆ ಇಲ್ಲ. ಉದ್ಯಾನವನಗಳ ಅಭಿವೃದ್ಧಿ ಆಗುತ್ತಿಲ್ಲ. ವಿದ್ಯುತ್ ಮತ್ತು ನೀರಿನ ಸಮಸ್ಯೆಗಳ ಬಗ್ಗೆ ಬಂದ ದೂರು ಗಳ ಬಗ್ಗೆ ಶಾಸಕರು, ಅಧಿಕಾರಿಗಳನ್ನು ಪ್ರಶ್ನಿಸಿದರು. ದಸರಾ ಕಾಮಗಾರಿಗಳು ಆರಂಭವಾಗಿ ಇಷ್ಟು ದಿನ ಕಳೆದರೂ ಈ ನಾಲ್ಕು ವಾರ್ಡ್‍ಗಳ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳದಿರುವ ಬಗ್ಗೆ ಪ್ರಶ್ನಿಸಿದರು.

ದಸರಾ ಸಂದರ್ಭದಲ್ಲಿ ಉದ್ಯಾನವನ ಗಳ ಸೌಂದರ್ಯೀಕರಣ, ವಾರ್ಡ್‍ಗಳ ಸ್ವಚ್ಛತೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿ ಸಿದರು. ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತೆ ನೋಡಿ ಕೊಳ್ಳಲೂ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ, ವಾಣಿ ವಿಲಾಸ ನೀರು ಸರಬ ರಾಜು ಕೇಂದ್ರ ಅಧಿಕಾರಿಗಳು, ವಲಯ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಗುತ್ತಿಗೆದಾರನಿಂದಾಗಿ ಕಬಿನಿ ನೀರು ವಿಳಂಬ: ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಕಬಿನಿಯಿಂದ ನಗರಪಾಲಿಕೆ ಮತ್ತು ಮುಡಾದಿಂದ ಹಣ ಕೊಡಿಸಿ, 30 ಎಂಎಲ್‍ಡಿ ನೀರು ತರಲು 6 ತಿಂಗಳಲ್ಲಿ ತಾವೇ ಖುದ್ದು ಹೊಂಗಳ್ಳಿ ಮತ್ತು ಮೇಗಳಾಪುರ ನೀರು ಶುದ್ಧೀಕರಣ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೆ. ಜೊತೆಗೆ ಕಾಮಗಾರಿ ಶೀಘ್ರ ಕೈಗೊಳ್ಳಲು ಸೂಚಿಸಲಾಗಿತ್ತು. ಆ.31ರೊಳಗೆ ನೀರು ನೀಡುವುದಾಗಿ ಗುತ್ತಿಗೆದಾರರು ತಿಳಿಸಿದ್ದರು. ಹೀಗಾಗಿ ಅದು ಯಾವ ಹಂತದಲ್ಲಿದೆ ಎಂದು ಇಂದು ಕರೆದಿದ್ದ ಸಭೆಯಲ್ಲಿ ಅಧಿ ಕಾರಿಗಳಿಂದ ಮಾಹಿತಿ ಪಡೆಯಲಾಗಿದೆ.

ಕಬಿನಿಯಿಂದ 30 ಎಂಎಲ್‍ಡಿ ನೀರು ತರುವ ಬಗ್ಗೆ ಟೆಂಡರ್ ಅಂತಿಮವಾಗಿದೆ. ತಾಂತ್ರಿಕ ಬಿಡ್ ಮಾತ್ರ ಆಗಬೇಕು. ಅದಾದರೆ 6-7 ತಿಂಗಳಲ್ಲಿ ನೀರಿನ ಸಮಸ್ಯೆ ಕೊನೆಯಾಗುತ್ತದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ. ಹೀಗಾಗಿ ಗುತ್ತಿಗೆದಾರನ ವಿಳಂಬ ದಿಂದಾಗಿ ನೀರು ಬಂದಿಲ್ಲ. ಹಾಲಿ ಗುತ್ತಿಗೆ ದಾರನನ್ನು ಕೈಬಿಟ್ಟು ಬೇರೆಯವರಿಗೆ ಕಾಮಗಾರಿ ವಹಿಸುವಂತೆ ಸೂಚಿಸಿದ್ದೇನೆ ಎಂದರು.

Translate »