ಮೈಸೂರಿನ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ನೆನೆಗುದಿಗೆ
ಮೈಸೂರು

ಮೈಸೂರಿನ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ನೆನೆಗುದಿಗೆ

July 1, 2019

ಮೈಸೂರು, ಜೂ. 30- 2030ರ ವೇಳೆಗೆ ಮೈಸೂರು ನಗರದ ಜನಸಂಖ್ಯೆ 25 ಲಕ್ಷಕ್ಕೇರಬಹುದು ಎಂಬುದನ್ನು ಗುರಿಯಾಗಿರಿಸಿಕೊಂಡು ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರವು ಕೆ.ಆರ್.ಮೋಹನ್‍ಕುಮಾರ್ ಅವರು ಅಧ್ಯಕ್ಷ ರಾಗಿದ್ದಾಗ ಮೈಸೂರು ನಗರದಲ್ಲಿ ಮತ್ತೊಂದು ಪೆರಿ ಫೆರಲ್ ರಿಂಗ್ ರಸ್ತೆ ನಿರ್ಮಿಸುವ 750 ಕೋಟಿ ರೂ. ಅಂದಾಜು ವೆಚ್ಚದ ಮಹತ್ವದ ಯೋಜನೆಗೆ 2016ರಲ್ಲಿ ಮುಂದಾಗಿತ್ತು. ಆದರೆ ಈ ಯೋಜನೆಗೆ ಸಮೀಕ್ಷೆಯೇ ನಡೆಯದೇ ನೆನೆಗುದಿಗೆ ಬಿದ್ದಿದೆ.

ಪ್ರಸ್ತುತ ಇರುವ ಹೊರ ವರ್ತುಲ ರಸ್ತೆಯಿಂದ 5 ರಿಂದ 8 ಕಿ.ಮೀ. ದೂರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿ ಸುವ ಯೋಜನೆಗೆ ಸಮೀಕ್ಷೆ ನಡೆಸಿ ಎಷ್ಟು ಭೂಮಿ ಅಗತ್ಯ ವಿದೆ. ಯಾವ ಯಾವ ಗ್ರಾಮಗಳ ಮೇಲೆ ಹಾದು ಹೋಗು ತ್ತದೆ, ಪ್ರಸ್ತುತ ಇರುವ ರಸ್ತೆಗಳಿಗೆ ಸಂಪರ್ಕ ಕಲ್ಪಿಸಬಹುದು, ಒಟ್ಟಾರೆ ಯೋಜನೆಗೆ ಎಷ್ಟು ಹಣ (ಭೂಸ್ವಾಧೀನ ಮತ್ತು ಸರ್ವಿಸ್ ರಸ್ತೆ ಹಾಗೂ 4 ಪಥದ ಪೆರಿಫೆರಲ್ ರಿಂಗ್ ರಸ್ತೆ) ಬೇಕಾಗುತ್ತದೆ ಎಂಬುದರ ಮಾಹಿತಿಯನ್ನೊಳಗೊಂಡ ಪ್ರಾಥಮಿಕ ವರದಿ ತಯಾರಿಸಲು ಮುಡಾ 5 ಕೋಟಿ ರೂ. ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿರಿಸಿತ್ತು.

ಉದ್ದೇಶಿತ ಅಂದಾಜು 96 ಕಿ.ಮೀ. ಉದ್ದದ ರಸ್ತೆ ನಿರ್ಮಿ ಸಲು ಮಹಾ ಯೋಜನೆ (ಸಿಡಿಪಿ)ಯಲ್ಲೂ ಗುರುತು ಮಾಡಿ ಆ ಜಾಗದಲ್ಲಿ ಬೇರೆ ಯಾವ ಉದ್ದೇಶಕ್ಕೂ ಅನುಮೋದನೆ ನೀಡಬಾರದೆಂದು ಸಂಬಂಧಪಟ್ಟ ಇಲಾಖೆಗಳಿಗೂ ಮಾಹಿತಿ ನೀಡಲಾಗಿತ್ತು. ಪೆರಿಫೆರಲ್ ರಸ್ತೆ ಹಾದು ಹೋಗುವ ಮಾರ್ಗದ ಕೆಲವು ಕಡೆ ಪ್ರಸ್ತುತ ಶೇ.48ರಷ್ಟು ಕಚ್ಚಾ ರಸ್ತೆ ಗಳಿವೆ. ಖಾಸಗಿ ಬಡಾವಣೆಗಳಿಗೆ ನಕ್ಷೆ ಅನುಮೋದನೆ ಮಾಡುವಾಗ ಮುಂದಾಲೋಚನೆಯಿಂದ ಸಿಎ ನಿವೇಶನ ಬಿಡುವ ಬದಲು ಆ ಜಾಗವನ್ನು ಪೆರಿಫೆರಲ್ ರಿಂಗ್ ರಸ್ತೆಗೆಂದೇ ಬಿಡಿಸಿಕೊಂಡಿರುವುದರಿಂದ ಸುಮಾರು ಶೇ.4ರಷ್ಟು ಭೂಮಿ ಸಿಕ್ಕಿದೆ ಎಂದು ಮಾಜಿ ಮುಡಾ ಅಧ್ಯಕ್ಷ ಕೆ.ಆರ್.ಮೋಹನ್‍ಕುಮಾರ್ ಅಂಕಿ-ಅಂಶಗಳ ಸಮೇತ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಅದರನ್ವಯ ಈಗಾಗಲೇ ಶೇ. 52ರಷ್ಟು ಭೂಮಿ ಲಭ್ಯವಿದೆ. ಉಳಿದ ಶೇ.48ರಷ್ಟು ಭೂಮಿಯನ್ನು ಮಾತ್ರ ಮುಡಾ ಸ್ವಾಧೀನ ಮಾಡಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಣಕಾಸು ನೆರವು ಪಡೆದು ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಿದರೆ, ಭಾರೀ ವಾಹನಗಳೂ ಸೇರಿದಂತೆ ಎಲ್ಲಾ ಬಗೆಯ ವಾಹನಗಳು ಸರಾಗವಾಗಿ ಸಂಚರಿಸಲು ಅನುಕೂಲವಾಗುತ್ತದೆಯಲ್ಲದೆ, ಹೊಸ ಬಡಾವಣೆಗಳು, ಗ್ರಾಮಗಳಿಗೂ ಸಂಪರ್ಕ ಸೌಲಭ್ಯ ಸಿಗುವುದರಿಂದ ಮುಂದೆ ಮೈಸೂರು ನಗರದಲ್ಲಿ ಸಂಚಾರ ಒತ್ತಡ ತಪ್ಪಿಸಬಹುದಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತೀ ವೇಗವಾಗಿ ಹಾಗೂ ನಾಗಾಲೋಟದಲ್ಲಿ ವಿಸ್ತಾರಗೊಳ್ಳುತ್ತಿರುವ ನಗರ ಮೈಸೂರು. ರೈಲು, ರಸ್ತೆ, ವಾಯು ಸಂಚಾರ ಸುವ್ಯವಸ್ಥೆಯಾಗಿ ರುವುದರಿಂದ ರಾಜ್ಯವಷ್ಟೇ ಅಲ್ಲದೆ, ದೇಶ-ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇಲ್ಲಿನ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವುದು ಒಂದೆಡೆ ಯಾದರೆ, ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಕೈಗಾರಿಕಾ ಬಡಾವಣೆಗಳು ಸ್ಥಾಪನೆಗೊಂಡಿರುವ ಕಾರಣ ಬೃಹತ್, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಆರಂಭ ಗೊಂಡಿರುವುದು ಸಾಂಸ್ಕøತಿಕ ನಗರಿಯಲ್ಲಿ ಜನಸಂಖ್ಯೆ ಹಾಗೂ ವಾಹನ ಸಂಖ್ಯೆ ಅಧಿಕವಾಗಲು ಪ್ರಮುಖ ಕಾರಣವಾಗಿದೆ. ಸುತ್ತಮುತ್ತಲ ಜಿಲ್ಲೆ, ನೆರೆ ರಾಜ್ಯಗಳಿಗೆ ಉತ್ತಮ ಸಾರಿಗೆ ಸಂಪರ್ಕ ವಿರುವುದರಿಂದ ಪಾರಂಪರಿಕ ನಗರ ಎಂದು ಖ್ಯಾತಿಯಾಗಿರುವ ಮೈಸೂರು ನಗರದ ಮೇಲೆ ಸಹಜವಾಗಿಯೇ ಸಂಚಾರ ಒತ್ತಡ ಜಾಸ್ತಿಯಾಗುತ್ತಿದೆ. ಈ ಒತ್ತಡ ತಪ್ಪಿಸಬೇಕೆಂಬ ಉದ್ದೇಶ ದಿಂದಲೇ 14 ವರ್ಷಗಳ ಹಿಂದೆ ಹೊರ ವರ್ತುಲ ರಸ್ತೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವು ನಿರ್ಮಿಸಿತು. 42.5 ಕಿ.ಮೀ. ರಿಂಗ್ ರಸ್ತೆ ಯೋಜನೆಯನ್ನು ಕೈಗೆತ್ತಿಕೊಂಡಾಗ ಅದರ ಅಗತ್ಯತೆ ಬಗ್ಗೆ ಪ್ರಶ್ನಿಸಿ ಕೆಲವರು ಟೀಕೆ ಮಾಡಿದ್ದರು. ಅದು ಪೂರ್ಣಗೊಳ್ಳುವ ವೇಳೆಗೆ 400 ಕೋಟಿ ರೂ. ವೆಚ್ಚವಾಯಿತಾದರೂ, ಈ ಯೋಜನೆ ಯನ್ನು ಅನುಷ್ಠಾನಗೊಳಿಸದಿದ್ದರೆ, ಇಂದಿನ ವಾಹನ ಸಂಚಾರವನ್ನು ಮೈಸೂರು ನಗರದಲ್ಲಿ ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಮಹತ್ವದ ವಿಚಾರ.

ತಿ.ನರಸೀಪುರ, ನಂಜನಗೂಡು, ಹೆಚ್.ಡಿ. ಕೋಟೆ, ಬೋಗಾದಿ, ಹುಣಸೂರು, ಕೆಆರ್‍ಎಸ್, ಬೆಂಗಳೂರು, ಮಹದೇವಪುರ ಹಾಗೂ ಬನ್ನೂರು ರಸ್ತೆಗಳಿಂದ ಬರುವ ಭಾರೀ ಹಾಗೂ ಲಘು ವಾಹನಗಳು ರಿಂಗ್ ರಸ್ತೆ ಇಲ್ಲದಿದ್ದರೆ ಮೈಸೂರು ನಗರಕ್ಕೆ ಪ್ರವೇಶಿಸಿ ಮುಂದೆ ಸಾಗು ವುದು ಅನಿವಾರ್ಯವಾಗುತ್ತಿತ್ತು. ಇದೀಗ ಮೈಸೂರು ನಗರ ಮತ್ತಷ್ಟು ಬೆಳೆದಿರುವುದ ರಿಂದ ಜನಸಂಖ್ಯೆಯಂತೆ ವಾಹನಗಳ ಸಂಖ್ಯೆಯೂ ಅಧಿಕವಾಗಿರುವುದರಿಂದ ಸಹಜವಾಗಿಯೇ ಸಂಚಾರ ದಟ್ಟನೆ ಉಂಟಾಗಿ ಆಗಿಂದಾಗ್ಗೆ ಟ್ರಾಫಿಕ್ ಜಾಮ್ ಆಗುತ್ತಿರುವುದು ನಗರದ ಸರ್ವತೋಮುಖ ಅಭಿವೃದ್ಧಿಗೆ ಮಾರಕವಾಗತೊಡಗಿದೆ. ಮುಡಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೂತನ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯತ್ತ ಗಮನಹರಿಸಿ ಶೀಘ್ರ ಸಮೀಕ್ಷೆ ಮಾಡಿ ಡಿಪಿಆರ್‍ನೊಂದಿಗೆ ಸರ್ಕಾರದ ಗಮನ ಸೆಳೆದು ಸಾಕಾರಗೊಳಿಸಲು ಯತ್ನಿಸಿದರೆ, ಮುಂದಿನ ದಿನಗಳಲ್ಲಿ ಉತ್ತಮವಾದ ಮತ್ತೊಂದು ರಿಂಗ್ ರಸ್ತೆ ನಿರ್ಮಾಣ ವಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಎಸ್.ಟಿ.ರವಿಕುಮಾರ್

Translate »