ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸಲ್ಮಾನರಿಗೆ ತೊಂದರೆಯಿಲ್ಲ ಜಾಗೃತಿ ಅಭಿಯಾನದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಸ್ಪಷ್ಟನೆ
ಕೊಡಗು

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸಲ್ಮಾನರಿಗೆ ತೊಂದರೆಯಿಲ್ಲ ಜಾಗೃತಿ ಅಭಿಯಾನದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಸ್ಪಷ್ಟನೆ

January 6, 2020

ಮಡಿಕೇರಿ, ಜ.5- ಮುಸಲ್ಮಾನರು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಯಾವುದೇ ಆತಂಕ ಮತ್ತು ಗೊಂದಲಪಡುವ ಅಗತ್ಯವಿಲ್ಲ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಮಡಿಕೇರಿ ನಗರ ಬಿಜೆಪಿ ಘಟಕದಿಂದ ಪೌರತ್ವ ಕಾಯ್ದೆ ಬೆಂಬಲಿಸಿ ಜಾಗೃತಿ ಅಭಿಯಾನಕ್ಕೆ ನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ವಿನಾಕಾರಣ ನಡೆಯುತ್ತಿ ರುವ ಅಪಪ್ರಚಾರಗಳಿಗೆ ಕಿವಿಗೊಡದೆ ಪೌರತ್ವ ತಿದ್ದುಪಡಿ ವಿಧೇಯಕದ ಬಗ್ಗೆ ಸಮಗ್ರ ಮಾಹಿತಿಯನ್ನು ಅರ್ಥ ಮಾಡಿಕೊಂಡಾಗ ಇದು ಮುಸ್ಲಿಂ ವಿರೋಧಿ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಬಾಂಗ್ಲಾ, ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದವರಿಗೆ ಭಾರತದಲ್ಲಿ ಆಶ್ರಯ ನೀಡಲಾಗುತ್ತಿದೆ. ಎನ್‍ಆರ್‍ಸಿ ಕಾಯ್ದೆ ಕೇವಲ ಪ್ರಸ್ತಾಪ ದಲ್ಲಿದ್ದು, ಈ ವಿಚಾರವಿಟ್ಟುಕೊಂಡು ಮುಸ್ಲಿಮರಲ್ಲಿ ಕೆಲವು ಸಂಘಟನೆ ಹಾಗೂ ಪಕ್ಷಗಳು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಯ್ದೆಯ ಮಹತ್ವದ ಕುರಿತು ಬೂತ್ ಮಟ್ಟ, ಪ್ರತಿ ಗ್ರಾಮ ಹಾಗೂ ಮನೆ ಮನೆಗಳಿಗೆ ತೆರಳಿ ಅರಿವು ಮೂಡಿಸುವ ಕಾರ್ಯ ವನ್ನು ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಲೋಕ ಸಭೆ ಹಾಗೂ ರಾಜ್ಯಸಭೆಯಲ್ಲಿ ಕಾಯ್ದೆ ತಿದ್ದುಪಡಿಗೆ ಅನುಮೋದನೆ ದೊರೆತಿದ್ದು, ಕ್ಷುಲ್ಲಕ ರಾಜಕಾರಣಕ್ಕೆ ವಿಪಕ್ಷಗಳು ದೇಶದಲ್ಲಿ ಅಶಾಂತಿ ಮೂಡಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೌರತ್ವ ತಿದ್ದುಪಡಿ ವಿಧೇಯಕ ಹಿಂದುತ್ವ ಕಾಯ್ದೆಯಲ್ಲ. ರಾಷ್ಟ್ರದ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾಯ್ದೆಯಾಗಿದೆ. ಆದರೆ, ರಾಜಕೀಯ ಕಾರಣಕ್ಕಾಗಿ ವಿರೋಧ ಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸಿ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದ ಅವಧಿಯಲ್ಲೇ ಪೌರತ್ವ ಕಾಯ್ದೆ ಬಗ್ಗೆ ಪ್ರಸ್ತಾಪವಾಗಿತ್ತು. ನಂತರ ಕೆಲವು ತಿದ್ದುಪಡಿ ಕೂಡ ಆಗಿದೆ. ಜಾರಿಯಾದ ಕಾಯ್ದೆಯಿಂದ ಯಾರೂ ಭಯ ಪಡುವ ಅಗತ್ಯವಿಲ್ಲ. ಭಾರತದಲ್ಲಿರುವ ಯಾವುದೇ ಮುಸ್ಲಿಂರನ್ನು ಹೊರಗಟ್ಟುವ ಸಂಚು ಇದರ ಹಿಂದೆ ಇಲ್ಲ. ಕಾಯ್ದೆಯ ಪೂರ್ಣ ಮಾಹಿತಿಯನ್ನು ತಿಳಿದು ಕೊಳ್ಳುವುದು ಬಹುಮುಖ್ಯ ಎಂದರು. ಬಿಜೆಪಿ ಅಲ್ಪಸಂಖ್ಯಾತರ ಘಟಕದ ಪ್ರಮುಖ ಮೊಯ್ದು ಮಾತನಾಡಿ, ಕೆಲವು ಪಕ್ಷ ಹಾಗೂ ಸಂಘಟನೆಗಳು ದೇಶದ ಶಾಂತಿ ಕದಡಿ ಲಾಭ ಪಡೆದು ಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ಗಲಭೆಕೋರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪೌರತ್ವ ಕಾಯ್ದೆ ಸಂಬಂಧ ಬಿಜೆಪಿ ಹೊರತಂದಿರುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ನಗರದ ಮಹ ದೇವಪೇಟೆಯಲ್ಲಿರುವ ಬನ್ನಿಮಂಟಪದ ಬಳಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಅವರುಗಳು ಅಭಿ ಯಾನಕ್ಕೆ ಚಾಲನೆ ನೀಡಿದರು. ನಂತರ ನಗರದ ಮನೆ ಮನೆಗೆ ಭೇಟಿ ನೀಡಿ ಪೌರತ್ವ ಕಾಯ್ದೆಯ ಉದ್ದೇಶದ ಬಗ್ಗೆ ನಿವಾಸಿಗಳಿಗೆ ಮನವರಿಕೆ ಮಾಡಿದರು.

ಈ ವೇಳೆ ಬಿಜೆಪಿ ನಗರಾಧ್ಯಕ್ಷ್ಷ ಮನು ಮಂಜುನಾಥ್, ಮಾಜಿ ಅಧ್ಯಕ್ಷ ಮಹೇಶ್ ಜೈನಿ, ಪ್ರಮುಖರಾದ ಉಣ್ಣಿಕೃಷ್ಣನ್, ಮುರುಗೇಶ್, ಸತೀಶ್, ಶಿವಕುಮಾರ್, ಸವಿತಾ ರಾಕೇಶ್, ಅನಿತಾ ಪೂವಯ್ಯ, ಉಮೇಶ್ ಸುಬ್ರಮಣಿ, ಪಿ.ಡಿ.ಪೊನ್ನಪ್ಪ ಮತ್ತಿತರರು ಹಾಜರಿದ್ದರು.

ಅಪಪ್ರಚಾರ ಮಾಡುತ್ತಾ, ಕಾಯ್ದೆ ವಿರುದ್ಧ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ. ದೇಶಕ್ಕೆ ಅನುಗುಣವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲಾಗಿದೆ. ಈ ನೆಲದ ಕಾನೂನನ್ನು ಗೌರವಿಸುವುದು ಪ್ರತಿ ಭಾರತೀಯರ ಕರ್ತವ್ಯವಾಗಬೇಕು. -ಕೆ.ಜಿ.ಬೋಪಯ್ಯ, ಶಾಸಕರು.

Translate »