ಮೈಸೂರಲ್ಲಿ ರಸ್ತೆಗಿಳಿಯದ ಸಾರಿಗೆ ಬಸ್‍ಗಳು
ಮೈಸೂರು

ಮೈಸೂರಲ್ಲಿ ರಸ್ತೆಗಿಳಿಯದ ಸಾರಿಗೆ ಬಸ್‍ಗಳು

September 11, 2018

ಮೈಸೂರು: ‘ಭಾರತ್ ಬಂದ್’ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ನಗರ ಹಾಗೂ ಗ್ರಾಮಾಂತರ ವಿಭಾಗದ ಸಾರಿಗೆ ಬಸ್‍ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ತೀವ್ರ ಪರದಾಡಿದರು. ಇದರಿಂದ ಸಾರಿಗೆ ಸಂಸ್ಥೆಗೆ ಸುಮಾರು ಕೋಟಿ ರೂ ನಷ್ಟ ವಾಗಿದೆ ಎಂದು ಅಂದಾಜಿಸಲಾಗಿದೆ.

ತೈಲ ಹಾಗೂ ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳು, ಸಂಘಟನೆಗಳು ಬೆಂಬಲ ಸೂಚಿಸಿದ್ದರಿಂದ ಮೈಸೂರಿನಲ್ಲಿ ಬಂದ್ ಯಶಸ್ವಿಯಾಗಲಿದೆ ಎಂಬ ಗುಪ್ತದಳ ಮಾಹಿತಿ ಆಧರಿಸಿ ಸಾರಿಗೆ ಸಂಸ್ಥೆ ಹಿರಿಯ ಅಧಿಕಾರಿಗಳು ಬಸ್ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದರು. ಈ ನಡುವೆ ಬಂದ್‍ಗೆ ಸಾರಿಗೆ ನೌಕರರ ಸಂಘ ಬೆಂಬಲ ಘೋಷಿಸಿದ್ದರಿಂದ ಬೆಳಗಿನಿಂದಲೇ ಡಿಪೋಗಳಿಂದ ಬಸ್‍ಗಳು ಹೊರ ಬೀಳಲಿಲ್ಲ. ಕಿಡಿಗೇಡಿಗಳು ಬಸ್‍ಗಳಿಗೆ ಹಾನಿ ಯುಂಟು ಮಾಡಿದರೆ ತಾವೇ ದಂಡ ತೆರಬೇಕಾಗುತ್ತದೆ ಎಂಬ ಭಯದಿಂದಲೂ ಚಾಲಕರು ಬಸ್ ಚಾಲನೆಗೆ ಮುಂದಾ ಗಲಿಲ್ಲ. ಅಲ್ಲದೆ ಕಳೆದ ರಾತ್ರಿ ವಿವಿಧ ಗ್ರಾಮ ಗಳಲ್ಲಿ ತಂಗಿದ್ದ ಬಸ್‍ಗಳು ಬೆಳಿಗ್ಗೆ 7 ಗಂಟೆವ ರೆಗೂ ಡಿಪೋಗೆ ಬಂದು ನಿಂತವು.

ನಗರ ಬಸ್ ನಿಲ್ದಾಣ: ಮೈಸೂರು ನಗರ ವಿಭಾಗದ ಕುವೆಂಪುನಗರ, ಬನ್ನಿಮಂಟಪ, ಸಾತಗಳ್ಳಿ ಹಾಗೂ ವಿಜಯನಗರ ಬಸ್ ಡಿಪೋಗಳ ಒಟ್ಟು 450 ಬಸ್‍ಗಳು ಪ್ರತಿದಿನ 175 ಮಾರ್ಗಗಳಲ್ಲಿ ಆರು ಸಾವಿರ ಟ್ರಿಪ್ ನಲ್ಲಿ ಸಂಚರಿಸಲಿವೆ. ದಿನವೊಂದಕ್ಕೆ 30 ಲಕ್ಷ ಆದಾಯ ತಂದು ಕೊಡಲಿವೆ. ಆದರೆ ಇಂದು ಬಹುತೇಕ ಎಲ್ಲಾ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ಸಂಸ್ಥೆಗೆ ಭಾರೀ ನಷ್ಟವುಂಟಾಗಿದೆ.

ಗ್ರಾಮಾಂತರ ಬಸ್ ನಿಲ್ದಾಣ: ವಿವಿಧ ಜಿಲ್ಲೆ, ಅಂತರರಾಜ್ಯದ ಪ್ರಯಾಣಿಕರನ್ನು ಪ್ರತಿದಿನ 700 ಬಸ್‍ಗಳು 650 ಮಾರ್ಗ ಗಳಲ್ಲಿ 2500 ಟ್ರಿಪ್ ಮೂಲಕ ಕರೆದೊಯ್ಯು ತ್ತಿದ್ದವು. ಆದರೆ ವಿವಿಧ ತಾಲೂಕು ಹಾಗೂ ಗ್ರಾಮಗಳಲ್ಲಿಯೇ ರಾತ್ರಿ ತಂಗಿದ್ದ ಬಸ್‍ಗಳು ಮಾತ್ರ ಇಂದು ಬೆಳಿಗ್ಗೆ ಪ್ರಯಾಣಿಕರನ್ನು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಕರೆತಂದು, ನಂತರ ಡಿಪೋಗೆ ತೆರಳಿದವು. ಗ್ರಾಮಾಂ ತರ ಪ್ರದೇಶದಲ್ಲಿ ಸಂಚರಿಸುವ ಬಸ್ ಗಳಿಂದ ಪ್ರತಿದಿನ 65 ರಿಂದ 70 ಲಕ್ಷ ರೂ ಆದಾಯ ಸಂಗ್ರಹವಾಗುತ್ತಿತ್ತು.

ಬೆಂಗಳೂರಿಗೆ ಬೇಡಿಕೆ: ಮೈಸೂರಿನಿಂದ ಬೆಂಗಳೂರಿಗೆ ಪ್ರತಿದಿನ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ. ಬಂದ್ ಬಗ್ಗೆ ಮಾಹಿತಿ ಇಲ್ಲದೆ ಬಂದಿದ್ದ ಕೆಲ ಮಂದಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಚಿಂತಾಕ್ರಾಂತರಾಗಿ ದ್ದರು. ಆದರೆ ಗ್ರಾಮಾಂತರ ಬಸ್ ನಿಲ್ದಾಣ ದಿಂದ ಮುಂಭಾಗದಿಂದಲೇ ಬಿಳಿ ಬಣ್ಣದ ನಂಬರ್ ಪ್ಲೇಟ್ ಹೊಂದಿದ್ದ ಕೆಲವು ಕಾರ್ ಗಳು ಒಬ್ಬರಿಗೆ 250ರೂ ನಿಂದ 300 ರೂ ಪಡೆದು ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೃಶ್ಯವೂ ಕಂಡು ಬಂದಿತು.

ನಿದ್ದೆಗೆ ಜಾರಿದ ಪ್ರಯಾಣಿಕರು: ವಿವಿಧ ನಗರ, ಪಟ್ಟಣಗಳಿಗೆ ತೆರಳಲು ಕುಟುಂಬ ಸದಸ್ಯರು, ಮಕ್ಕಳೊಂದಿಗೆ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಬಸ್ ಇಲ್ಲದ ಕಾರಣ ಗ್ರಾಮಾಂತರ ಬಸ್ ನಿಲ್ದಾಣದಲ್ಲಿಯೇ ನಿದ್ರೆಗೆ ಜಾರಿದರು. ಮಕ್ಕಳು, ಹಿರಿಯ ನಾಗರಿಕರು, ಮಹಿಳೆ ಯರು ಬಸ್ ನಿಲ್ದಾಣದ ಆವರಣದಲ್ಲಿಯೇ ಗೋಡೆಗೆ ಒರಗಿ ಮಲಗಿದರೆ, ಪುರುಷರು ಚೇರ್‍ಗಳ ಮೇಲೆ ತೂಕಡಿಸುತ್ತಾ ಕುಳಿತಿದ್ದ ದೃಶ್ಯ ಕಂಡು ಬಂದಿತು.

ಬಿಕೋ ಎನ್ನುತ್ತಿದ್ದ ರಸ್ತೆಗಳು: ಮೈಸೂರಿನ ಪ್ರಮುಖ ವಾಣಿಜ್ಯ ಮಾರ್ಗಗಳಾದ ದೇವರಾಜ ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿ ನಗರದ ಹೃದಯ ಭಾಗದಲ್ಲಿ ರುವ ಎಲ್ಲಾ ರಸ್ತೆಗಳ ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಲಾಗಿತ್ತು. ದೇವರಾಜ ಅರಸು ರಸ್ತೆಯಲ್ಲಿ ಕೆಲವು ಅಂಗಡಿಗಳನ್ನು ತೆರೆಯ ಲಾಗಿತ್ತಾದರೂ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೈಕ್‍ಗಳಲ್ಲಿ ಆಗಮಿಸಿ ತೆರೆದಿದ್ದ ಅಂಗಡಿಗಳನ್ನು ಬಂದ್ ಮಾಡಿಸಿ ದರು. ನಂತರ ಮಳಿಗೆಗಳ ಮಾಲೀಕರು ಎಲ್ಲೆಡೆ ವ್ಯಾಪಾರ ಬಂದ್ ಮಾಡಿದರು. ಕೆಲಸ ಗಾರರನ್ನು ಮನೆಗೆ ವಾಪಸ್ಸು ಕಳುಹಿಸಿದರು. ಇದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಆಟೋ ಸಂಚಾರ ವಿರಳವಾಗಿತ್ತು: ಇಂದು ಬಂದ್ ಇತ್ತಾದರೂ ಕೆಲವೆಡೆ ಆಟೋರಿಕ್ಷಾ ಗಳು ಸಂಚರಿಸಿದವು. ಪ್ರಮುಖವಾಗಿ ರೈಲ್ವೆ ನಿಲ್ದಾಣ ರಸ್ತೆ, ನಗರ ಬಸ್ ನಿಲ್ದಾಣ ಸೇರಿ ದಂತೆ ವಿವಿಧ ಸ್ಥಳಗಳಲ್ಲಿ ಕೆಲವು ಆಟೋ ರಿಕ್ಷಾಗಳು ಪ್ರಯಾಣಿಕರ ಸೇವೆಗೆ ಲಭ್ಯವಿ ದ್ದವು. ಈ ನಡುವೆ ಕೆಲವು ಆಟೋ ಚಾಲಕರು ದುಪ್ಪಟ್ಟು ಹಣ ಪಡೆಯುತ್ತಿದ್ದರು ಎಂಬ ಆರೋಪವು ಕೇಳಿ ಬಂದಿದ್ದರಿಂದ ಪೊಲೀ ಸರು ಕೆಲವು ಆಟೋ ಚಾಲಕರಿಗೆ ಪ್ರಯಾಣಿಕರ ಸುಲಿಗೆ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ರಸ್ತೆಗಿಳಿಯದ ಟ್ಯಾಕ್ಸಿಗಳು: ತೈಲ ಬೆಲೆ ಹೆಚ್ಚಳ ವಿರೋಧಿಸಿ ನಡೆಸಲಾದ ಬಂದ್ ನಲ್ಲಿ ಪ್ರವಾಸಿ ಟ್ಯಾಕ್ಸಿ ಚಾಲಕರ ಸಂಘವೂ ಬೆಂಬಲ ನೀಡಿದ್ದರಿಂದ ಇಂದು ಟ್ಯಾಕ್ಸಿ ಗಳು ರಸ್ತೆಗಿಳಿಯಲಿಲ್ಲ. ಆ್ಯಪ್ ಮೂಲಕ ಬುಕ್ ಮಾಡಬಹುದಾದ ಟ್ಯಾಕ್ಸಿಗಳು ಪ್ರತಿ ಭಟನಾಕಾರರ ಕೆಂಗಣ್ಣಿಗೆ ಗುರಿಯಾಗ ಬಹುದೆಂಬ ಕಾರಣಕ್ಕೆ ಸೇವೆ ಸ್ಥಗಿತಗೊಳಿ ಸಿದ್ದವು. ಬೆಳಿಗ್ಗೆ ಕೆಲವು ಟ್ಯಾಕ್ಸಿಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗಿದ್ದವು.

ಸಂಜೆ 4ಕ್ಕೆ ಪುನರಾರಂಭ: ಬೆಳಗಿನಿಂದ ಸ್ಥಗಿತಗೊಂಡಿದ್ದ ಸಾರಿಗೆ ಬಸ್‍ಗಳ ಸಂಚಾರ ಸಂಜೆ 4 ಗಂಟೆಯಿಂದ ಪುನರಾರಂಭವಾಯಿತು. ನಗರ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದಿಂದ ವಿವಿಧ ನಗರ, ಬಡಾವಣೆ ಹಾಗೂ ಗ್ರಾಮಗಳು ಮತ್ತು ಅಂತರರಾಜ್ಯ ಸಾರಿಗೆ ಬಸ್ಸುಗಳು ಪ್ರಯಾಣಿಕರನ್ನು ಕರೆದೊಯ್ಯಲು ಆರಂಭಿಸಿದವು. ಸಂಜೆ 6 ಗಂಟೆಯ ನಂತರ ಬಸ್ ಸಂಚಾರ ಸಹಜ ಸ್ಥಿತಿಗೆ ಮರಳಿತು.

Translate »