ಭಾರತ್ ಬಂದ್‍ಗೆ ಬಡವರ ಜೀವನ ಬಲಿ
ಮೈಸೂರು

ಭಾರತ್ ಬಂದ್‍ಗೆ ಬಡವರ ಜೀವನ ಬಲಿ

September 11, 2018

ಮೈಸೂರು:  ಈ ಬಂದು-ಗಿಂದು ಯಾಕಾದ್ರೂ ಮಾಡ್ತಾರೆ ಸ್ವಾಮಿ?. ಬೆಳಿಗ್ಗೆಯಿಂದ ತಿಂಡಿ, ಊಟ ಮಾಡಿಲ್ಲ. ಒಂದ್ ರೂಪಾಯ್ ವ್ಯಾಪಾರ ಆಗಿಲ್ಲ. ಸಾಕಪ್ಪ ಈ ಜೀವ್ನ… ಇದು ಭಾರತ್ ಬಂದ್ ಬಿಸಿಯಿಂದ ನಲುಗಿದ್ದ ಮೈಸೂರಿನ ಬೀದಿ ಬದಿ ವ್ಯಾಪಾರಿಯೊಬ್ಬರ ವಿಷಾದದ ಮಾತು.

ತೈಲ ಬೆಲೆ ಏರಿಕೆ ಖಂಡಿಸಿ, ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‍ಗೆ ರಾಜ ಕೀಯ ಪಕ್ಷಗಳು ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿದ್ದವು. ದೇಶಾದ್ಯಂತ ಬಂದ್ ಯಶಸ್ವಿಯಾಗಿ ದ್ದಾಯ್ತು. ಇದರಿಂದಾಗುವ ಪರಿಣಾಮ ವನ್ನು ಕಾದು ನೋಡಬೇಕು. ಆದರೆ ಬಂದ್ ನಿಂದ ದಿನದ ದುಡಿಮೆ ನಂಬಿರುವ ಲಕ್ಷಾಂತರ ಮಂದಿಯ ಜೀವನದ ಬಂಡಿಗೆ ಪೆಟ್ಟು ಬೀಳುವುದಂತೂ ಸತ್ಯ.

ಮಳೆ, ಚಳಿ, ಬಿಸಿಲಿಗೂ ಜಗ್ಗದೆ ಬೀದಿ ಬದಿ ಯಲ್ಲಿ ಕುಳಿತು ವ್ಯಾಪಾರ ಮಾಡಿ, ಒಂದಷ್ಟು ಕಾಸು ಸಂಪಾದಿಸುವ ಸಣ್ಣ ವ್ಯಾಪಾರಿ ಗಳು, ಕೂಲಿ ಕಾರ್ಮಿಕರು, ಬಂದ್ ಎಂಬ ಪದ ಕೇಳಿದರೆ ಬೆಚ್ಚಿ ಬೀಳುತ್ತಾರೆ. ಒಂದು ದಿನ ದುಡಿಮೆ ಇಲ್ಲದಿದ್ದರೂ ಅವರ ಬದು ಕಿನಲ್ಲಿ ಮತ್ತೊಂದು ಸಮಸ್ಯೆ ಎದುರಾಗು ತ್ತದೆ. ಕೈಸಾಲದ ಬಡ್ಡಿ ಹೆಚ್ಚಾಗುತ್ತದೆ. ಖರೀದಿಸಿದ್ದ ವಸ್ತು ಹಾಳಾಗುತ್ತದೆ. ಜೊತೆಗೆ ಚಿಂತೆಯ ಕಂತೆಯ ಭಾರವೂ ಹೆಚ್ಚಾಗುತ್ತದೆ.

ದೊಡ್ಡ ವ್ಯಾಪಾರಿಗಳು, ಉದ್ಯೋಗಿ ಗಳು, ಉದ್ಯಮಿಗಳು ಸೇರಿದಂತೆ ಉಳ್ಳವ ರಿಗೂ ಬಂದ್ ಬಿಸಿ ತಟ್ಟುತ್ತದೆ. ಆದರೆ ನಷ್ಟ ವನ್ನು ಸರಿದೂಗಿಸಿಕೊಳ್ಳುವ ಸಾಮಥ್ರ್ಯ ಅವರಲ್ಲಿರುತ್ತದೆ. ಆದರೆ ಸಣ್ಣ-ಪುಟ್ಟ ವ್ಯಾಪಾರಿಗಳು, ರೈತರಿಗೆ ಬಂದ್ ಬಲವಾದ ಪೆಟ್ಟು ನೀಡುತ್ತದೆ. ಆದರೂ ಮೈಸೂರಿನ ಕೆಲ ವ್ಯಾಪಾರಿಗಳು `ನಮಗೆ ನಷ್ಟವಾ ದರೂ ಪರವಾಗಿಲ್ಲ ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆಯಾದರೆ ಸಾಕು ಎಲ್ಲರಿಗೂ ಒಳ್ಳೆಯದಾಗುತ್ತೆ’ ಎಂದರೆ, ಬಹುತೇಕ ಮಂದಿ ಇನ್ನೂ `ಬಂದ್‍ನಿಂದಾಗಿ ನಮ್ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಊಟಕ್ಕೂ ತೊಂದರೆಯಾಗುತ್ತದೆ ಏನ್ ಮಾಡೋದು? ಎಂದು ಅಳಲು ತೋಡಿ ಕೊಂಡಿದ್ದಾರೆ.

ನಿಂಗಮ್ಮ, ಸಣ್ಣಮ್ಮನ ಕಥೆ ವ್ಯಥೆ: 30 ವರ್ಷದಿಂದ ದೇವರಾಜ ಮಾರುಕಟ್ಟೆ ಸಮೀಪ ರಸ್ತೆ ಬದಿಯಲ್ಲಿ ಗುಡ್ಡೆ ತರಕಾರಿ ಮಾರಾಟ ಮಾಡುತ್ತಿರುವ ಸುಮಾರು 65 ವರ್ಷದ ನಿಂಗಮ್ಮ ಹಾಗೂ ಸಣ್ಣಮ್ಮ, ಇಂದು ಒಂದು ರೂಪಾಯಿ ವ್ಯಾಪಾರ ವಾಗದೆ ಗೋಳಾಡುತ್ತಿದ್ದರು. `ಮಂಡ್ಯ ಜಿಲ್ಲೆ ಹೆಬ್ಬಾಡಿಯಿಂದ ಇಲ್ಲಿಗೆ ಬಂದು ವ್ಯಾಪಾರ ಮಾಡ್ತೀವಿ. ಇವತ್ತು ಬೆಳಿಗ್ಗೆಯಿಂದ ಬಸ್ ಇಲ್ಲದೆ ಒಂದಷ್ಟು ದೂರ ನಡೆದು ನಂತರ ಆಟೋ ಹತ್ತಿ ಬಂಡಿಪಾಳ್ಯದಲ್ಲಿರುವ ಎಪಿಎಂಸಿ ಮಾರ್ಕೆಟ್‍ಗೆ ಬಂದೋ. ಅಲ್ಲಿಂದ ತಲೆಯ ಮೇಲೆ ತರಕಾರಿ ಚೀಲ ಗಳನ್ನು ಹೊತ್ತು ಇಲ್ಲಿವರೆಗೆ ನಡೆದು ಕೊಂಡೇ ಬಂದು ವ್ಯಾಪಾರಕ್ಕೆ ಕುಳಿತೆವು. ಆದರೆ ಏನೂ ಪ್ರಯೋಜನವಿಲ್ಲ ಸಾರ್, ಒಂದು ರೂಪಾಯಿ ವ್ಯಾಪಾರವಾಗಿಲ್ಲ. ಊಟ ಮಾಡೋಕೂ ದುಡ್ಡಿಲ್ಲ. ವ್ಯಾಪಾರ ಆದ್ರೆ ಮನೆಗೆ ಹೋಗ್ತೀವಿ. ಇಲ್ದಿದ್ರೆ ಇಲ್ಲೇ ಬಸ್‍ಸ್ಟಾಂಡ್ ಅಥವಾ ಎಲ್ಲಿಯಾದರು ಮಲ್ಕೋತೀವಿ. ನಮ್ಮಂತ ಬಡವರಿಗೆ ಸರ್ಕಾರ ಏನೂ ಮಾಡಿಲ್ಲ. ನಮ್ಮದು ‘ಫುಟ್‍ಪಾತ್ ಜೀವನ’ ಎಂದರು. ಸ್ವಾಭಿಮಾನದ ಜೀವನಕ್ಕಾಗಿ ಇಳಿ ವಯಸ್ಸಿನಲ್ಲೂ ದೂರದಿಂದ ಬಂದು ತರಕಾರಿ ಮಾರುವ ಇವರ ಮಾತುಗಳು ವಾಸ್ತವತೆಯನ್ನು ಬಿಚ್ಚಿಟ್ಟವು.

Translate »