ಕಾನೂನು ರಕ್ಷಕರು ಮಾತ್ರವಲ್ಲ ಈ ಆರಕ್ಷಕರು ಕೃಷಿಕರು!
ಮೈಸೂರು

ಕಾನೂನು ರಕ್ಷಕರು ಮಾತ್ರವಲ್ಲ ಈ ಆರಕ್ಷಕರು ಕೃಷಿಕರು!

June 14, 2019

ಮೈಸೂರು: ಪಾಳು ಬಿದ್ದ ಭೂಮಿಯನ್ನು ಸ್ವಚ್ಛಗೊಳಿಸಿ, ಕೃಷಿ ಮಾಡಿರುವ ಪೊಲೀಸ್ ಪೇದೆಗಳು ರೈತರು ನಾಚುವಂತÀ ಕಾರ್ಯವನ್ನು ಮಾಡಿದ್ದಾರೆ.

ಹೌದು! ಕಸದ ರಾಶಿ, ಮುಳ್ಳಿನ ಪೊದೆ ಗಳಿಂದ ಕೂಡಿದ್ದ ಬಿಳಿಕೆರೆ ಪೊಲೀಸ್ ಠಾಣೆ ಆವರಣ ಇಂದು ಸಂಪೂರ್ಣ ಹಸಿರೀಕರಣವಾಗಿದೆ. ಕಳೆದ ಮೂರು ತಿಂಗಳ ಹಿಂದೆ ಬಂಜರು ಭೂಮಿಯಂತೆ ಕಾಣುತ್ತಿದ್ದ ಬಿಳಿಕೆರೆ ಠಾಣೆ ಆವರಣವಿಂದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ಮಳೆ-ಬೆಳೆ ಇಲ್ಲ ಎಂದು ಪರಿತಪಿಸುವ ಕಾಲದಲ್ಲಿ ಹಲಸಂದೆ ಕಾಳುಗಳ ಜತೆಗೆ ತೆಂಗು ಸೇರಿದಂತೆ ವಿವಿಧ ಬಗೆಯ 40ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನೆಟ್ಟು, ಸುತ್ತಲು ತಂತಿ ಬೇಲಿಯನ್ನು ಹಾಕಿ ಪೋಷಣೆ ಮಾಡುತ್ತಿದ್ದಾರೆ.

ಸುಮಾರು ಎರಡು ಎಕರೆ 20 ಗುಂಟೆ ವಿಸ್ತೀರ್ಣದಲ್ಲಿರುವ ಬಿಳಿಕೆರೆ ಠಾಣೆಯಲ್ಲಿ ಒಂದು ಎಕರೆ ಜಾಗವನ್ನು ದಿನನಿತ್ಯದ ಕಾರ್ಯಚಟುವಟಿಕೆಗಳಿಗೆ ಬಳಸಿ ಕೊಂಡರೆ, ಇನ್ನುಳಿದ ಜಾಗದಲ್ಲಿ ಬೇಸಾಯ ಮಾಡುವ ಮೂಲಕ ಇತರ ರಿಗೂ ಮಾದರಿಯಾಗಿದ್ದಾರೆ.

ಇಲ್ಲಿಯವರೆಗೆ ಬಿದ್ದಿರುವ ಮುಂಗಾರು ಮಳೆಯಿಂದ ಹಲಸಂದೆ ಕಾಳುಗಳನ್ನು ಬೆಳೆದರೆ, ಠಾಣೆಯಲ್ಲಿ ಅಳವಡಿಸಿರುವ ಪಂಪ್‍ಸೆಟ್ ನೀರಿನಿಂದ ತೆಂಗು, ಹಲಸು, ಮಾವು, ಸೀಬೆ, ನೇರಳೆ, ಬೇವು ಸೇರಿ ದಂತೆ ಇತರೆ ಗಿಡಗಳನ್ನು ಬೆಳೆಸಲಾಗುತ್ತಿದೆ.

ಕಡಿಮೆ ಖರ್ಚು: ಸಾಮಾನ್ಯವಾಗಿ ಒಂದು ಎಕರೆಯಲ್ಲಿ ಬೇಸಾಯ ಮಾಡ ಬೇಕಾದರೆ ಗೊಬ್ಬರ, ಕ್ರಿಮಿನಾಶಕ ಗಳೆಂದು ಲಕ್ಷಾಂತರ ಹಣ ಬೇಕಾಗುತ್ತದೆ. ಆದರೆ, ಬಿಳಿಕೆರೆ ಪೊಲೀಸ್ ಠಾಣೆ ಆವರಣದಲ್ಲಿ ನೈಸರ್ಗಿಕ ಸಾವಯವ ಗೊಬ್ಬರವನ್ನು ಬಳಸಿಕೊಂಡು ಕೇವಲ 12 ಸಾವಿರ ರೂ.ಗಳಲ್ಲಿ ಕೃಷಿ ಮಾಡ ಲಾಗಿದೆ. ಅಲ್ಲದೆ ಪೊಲೀಸರು ತಮ್ಮ ಸ್ವಂತ ಹಣವನ್ನು ಸಂಗ್ರಹ ಮಾಡಿ, ಬಂಡ ವಾಳವನ್ನಾಗಿ ಮಾಡಿಕೊಂಡಿದ್ದಾರೆ.

ಪೊಲೀಸರೇ ಕೃಷಿ ಕಾರ್ಮಿಕರು: ವಾರದಲ್ಲಿ ಭಾನುವಾರ ಹಾಗೂ ಇತರೆ ಬಿಡುವಿನ ವೇಳೆ ಶ್ರಮದಾನ ಪರಿಕಲ್ಪನೆ ಯಲ್ಲಿ ಮಹಿಳಾ ಸಿಬ್ಬಂದಿಗಳು ಸೇರಿದಂತೆ ಎಲ್ಲರೂ ಕಳೆ ಕೀಳುವುದು, ಗಿಡಗಳಿಗೆ ನೀರನ್ನು ಹಾಕುವುದು, ಪಾಟ್‍ಗಳನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಾರೆ.

ನಾವು ರೈತರ ಮಕ್ಕಳಾಗಿದ್ದು, ರೈತರ ನಿಜವಾದ ಕಷ್ಟ-ನಷ್ಟಗಳನ್ನು ಅರಿತು ಕೊಳ್ಳಲು ಹಾಗೂ ಜಂಜಾಟದಿಂದ ಮುಕ್ತ ವಾಗಲು ಕೃಷಿ ಕಾರ್ಯವನ್ನು ಮಾಡು ತ್ತಿದ್ದೇವೆ. ಇದರಿಂದ ಮನಸ್ಸಿಗೆ ತೃಪ್ತಿ ಸಿಗುವುದರ ಜತೆಗೆ ಬೆಳೆ ಅಥವಾ ಭೂಮಿ ಯನ್ನು ಕಳೆದುಕೊಂಡ ರೈತನ ನೋವನ್ನು ಅರ್ಥಮಾಡಿಕೊಳ್ಳಲು ಪೂರಕವಾಗಿದೆ ಎಂದು ಬಿಳಿಕೆರೆ ಠಾಣೆ ಸಬ್ ಇನ್ಸ್‍ಪೆಕ್ಟರ್ ಎಂ.ನಾಯಕ್ ತಿಳಿಸಿದರು.

ಬಿಳಿಕೆರೆ ಪೊಲೀಸ್ ಠಾಣೆಗೆ ಕೊಲೆ, ಸುಲಿಗೆ ಪ್ರಕರಣಗಳಿಗಿಂತ ಬೆಳೆ ಹಾನಿ, ಭೂಮಿಗಾಗಿ ಜಗಳದಂತಹ ಪ್ರಕರಣಗಳೇ ಹೆಚ್ಚು. ಈ ಹಿನ್ನೆಲೆ ನಾವು ರೈತರಂತೆ ಬೆಳೆಗಳನ್ನು ಬೆಳೆದಿರುವುದು ಪ್ರಕರಣಗಳ ಇತ್ಯರ್ಥಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸಹಾಯಕವಾಗಿದೆ ಎಂದು ಹೇಳಿದರು.

Translate »