ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸ್ಥಳ ಪರಿಶೀಲನೆ ದಶಕಗಳಿಂದ ನೆನೆಗುದಿಗೆ ಬಿದ್ದ ಕಾಮಗಾರಿಗಳ ಪುನಾರಂಭಕ್ಕೆ ಸೂಚನೆ
ಹಾಸನ

ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸ್ಥಳ ಪರಿಶೀಲನೆ ದಶಕಗಳಿಂದ ನೆನೆಗುದಿಗೆ ಬಿದ್ದ ಕಾಮಗಾರಿಗಳ ಪುನಾರಂಭಕ್ಕೆ ಸೂಚನೆ

June 13, 2018

ಹಾಸನ: ಜಿಲ್ಲೆಯ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪುನಾರಂಭಿ ಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಬೆಳಿಗ್ಗೆಯಿಂದಲೇ ಜಿಲ್ಲೆಯ ಹೊಳೆನರಸೀಪುರ ಹಾಗೂ ಹಾಸನ ತಾಲೂಕುಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಹಾಸನ ನಗರದ ಹೊಸ ಬಸ್ ನಿಲ್ದಾಣದ ಬಳಿ ಸ್ಥಗಿತಗೊಂಡಿರುವ ಪ್ರವಾಸಿ ಹೋಟೆಲ್ ಮತ್ತು ಮನರಂಜನಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಇನ್ನಷ್ಟು ವಿನೂತನತೆ ಸೇರ್ಪಡೆಗೊಳಿಸಿ ಕಾಮಗಾರಿ ಮುಕ್ತಾಯ ಗೊಳಿಸಲು ಚಿಂತಿಸಿದ್ದು, ಇದಕ್ಕಾಗಿ ಲೋಕೋಪಯೋಗಿ, ಅರಣ್ಯ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರಲ್ಲದೆ, ಪ್ರವಾಸಿ ಹೋಟೆಲ್ ಕಾಮಗಾರಿ ಮುಕ್ತಾಯಗೊಳಿ ಸುವ ಜವಾಬ್ದಾರಿಯನ್ನು ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ವಹಿಸಿದ್ದು, ಅರಣ್ಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಲು ಸೂಚಿಸಿದರು.
ಬೋಟಿಂಗ್, ಮನೊರಂಜನೆಗೆ ಆದ್ಯತೆ: ಹಾಲಿ ನಿರ್ಮಾಣಗೊಂಡಿರುವ ಕಟ್ಟಡದ ಸುತ್ತ ಇರುವ ಸರೋವರವನ್ನು ಅಭಿವೃದ್ಧಿ ಪಡಿಸಿ ಬೋಟಿಂಗ್ ಹಾಗೂ ಇತರ ಜಲ ಸಾಹಸ ಕ್ರೀಡೆ ಚಟುವಟಿಕೆಗಳಿಗೆ ಅಗತ್ಯ ವ್ಯವಸ್ಥೆ ಮಾಡಬೇಕು. ಕಟ್ಟಡದ ಎರಡು ಬದಿಗಳಲ್ಲಿ ಅತ್ಯಾಧುನಿಕ ಸೇತುವೆ ನಿರ್ಮಾಣ, ವರ್ಷವಿಡಿ ಹೂ ಬಿಡುವ ಪುಷ್ಪೋದ್ಯಾನ, ಅರಣ್ಯೇಕರಣ ಮಾಡುವಂತೆ ಹಾಗೂ ಅದಕ್ಕೆ ಅಗತ್ಯವಿರುವ ಸಮಗ್ರ ಅಂದಾಜು ಪಟ್ಟಿಯನ್ನು ಒಂದೆರಡು ದಿನಗಳೊಳಗೆ ಸಿದ್ಧಪಡಿಸಿ ಸಲ್ಲಿಸುವಂತೆ ಸಚಿವರು ಅಧಿಕಾರಿ ಗಳಿಗೆ ನಿರ್ದೇಶಿಸಿದರು. ಪ್ರವಾಸಿ ಹೋಟೆಲ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರಿ ನಲ್ಲಿ ಇನ್ನೊಂದು ಹಂತದ ಸಭೆ ನಡೆಸ ಲಾಗುವುದು. ಇದರ ಸುತ್ತ ಮನರಂಜನಾ ರೈಲು ಸಂಚಾರ ವ್ಯವಸ್ಥೆ ಜವಾಬ್ದಾರಿ ಯನ್ನು ಮೆಟ್ರೋ ಸಂಸ್ಥೆಗೆ ವಹಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಮಹಿಳಾ ಹಾಸ್ಟೆಲ್‍ಗೆ ನಿರ್ಮಾಣ: ಬಸ್ ನಿಲ್ದಾಣದಿಂದ ಸರ್ಕಾರಿ ಆಸ್ಪತ್ರೆವರೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡಲು ಸ್ಥಳ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸಲು ನಿರ್ದೇಶನ ನೀಡಿದರು.
ನಂತರ ಜಿಲ್ಲಾ ಆಸ್ಪತ್ರೆ ಬಳಿ ಜಿಪಂ ಸಿಇಓ ವಸತಿ ನಿಲಯದ ಹಿಂಭಾಗ ಇರುವ ಖಾಲಿ ಜಾಗ ಪರಿಶೀಲಿಸಿ ಇಲ್ಲಿ ಬಹು ಅಂತಸ್ತಿನ ವಸತಿ ನಿಲಯ ಸ್ಥಾಪಿಸಿ, 600 ಮಹಿಳಾ ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಯೋಜನೆ ತಯಾರಿಸಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಸಚಿವರು ಜಿಲ್ಲಾಸ್ಪತ್ರೆ ಆವರಣದಲ್ಲಿರುವ ವಿದ್ಯಾರ್ಥಿ ನಿಲಯಗಳ ಸ್ಥಳ ಪರೀಶೀಲನೆ ಕೂಡ ನಡೆಸಿದರು.

ಪ್ರಯೋಗಾಲಯದ ಭರವಸೆ : ನಂತರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕರೊಂದಿಗೆ ಚರ್ಚಿಸಿ ಮಾಹಿತಿ ಪಡೆದ ಸಚಿವರು, ಕಾಲೇಜಿನ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು. ಕಾಲೇಜು ಪ್ರಾರಂಭವಾಗಿ 10 ವರ್ಷ ಕಳೆದರೂ ಇನ್ನೂ ಸ್ವಂತ ಲ್ಯಾಬ್ ಇಲ್ಲದೆ ಎಂಸಿಇ ಕಾಲೇಜನ್ನು ಅವಲಂಬಿಸಿರುವ ಬಗ್ಗೆ ವಿವರ ಪಡೆದ ಸಚಿವರು, ಶೀಘ್ರವೇ ಕಾಲೇಜಿನಲ್ಲಿ ಪ್ರಯೋ ಗಾಲಯ ಆರಂಭಿಸುವ ಭರವಸೆ ನೀಡಿದರು.

3.5 ಕೋಟಿ ರೂ. ಬಿಡುಗಡೆ: ನಗರದ ಗಂಧದಕೋಠಿ ಆವರಣದಲ್ಲಿ ಸ್ಥಳ ಪರಿಶೀಲಿಸಿದ ಸಚಿವ ರೇವಣ್ಣ, ಈಗಾಗಲೇ ಮಂಜೂರಾಗಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜು ಕಟ್ಟಡವನ್ನು ತಕ್ಷಣವೇ ಪ್ರಾರಂಭಿಸಿ. 2 ತಿಂಗಳಲ್ಲಿ ಮೊದಲ ಹಂತದ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ಹಾಲಿ 5 ಕೋಟಿ ರೂ. ಹಣ ಲಭ್ಯವಿದ್ದು, ಹೆಚ್ಚುವರಿಯಾಗಿ 3.5 ಕೋಟಿ ರೂ.ಗಳನ್ನು ಕೆಲವೇ ದಿನಗಳಲ್ಲಿ ಒದಗಿ ಸುವುದಾಗಿ ಹೇಳಿದರು. ಗಂಧದ ಕೋಠಿ ಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಮರಗಳನ್ನು ವಿಲೇವಾರಿ ಮಾಡಿ ಕಟ್ಟಡ ತೆರವುಗೊಳಿಸಿಕೊಡುವಂತೆ ಸಚಿವರು ಇದೇ ವೇಳೆ ತಿಳಿಸಿದರು.

ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯದರ್ಶಿ ಕೃಷ್ಣ ರೆಡ್ಡಿ, ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ಶ್ರೀನಿವಾಸ್, ಅಧೀಕ್ಷಕ ಇಂಜಿನಿಯರ್ ರಾಜ್‍ಕುಮಾರ್ ರೆಡ್ಡಿ, ಮುಖ್ಯ ವಾಸ್ತು ಶಿಲ್ಪಿ ಸಾವಿತ್ರಿ, ಕಾರ್ಯ ಪಾಲಕ ಇಂಜಿನಿಯರ್ ಗುರುಲಿಂಗಪ್ಪ, ನಗರಸಭಾಧ್ಯಕ್ಷ ಅನಿಲ್‍ಕುಮಾರ್, ನಗರಸಭೆ ಆಯುಕ್ತ ಪರಮೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಸಂಜಯ್ ವಿವಿಧ ಇಲಾಖಾ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

Translate »