ಒತ್ತುವರಿ ತೆರವಿಗೆ ಬಂದ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್
ಮೈಸೂರು ಗ್ರಾಮಾಂತರ

ಒತ್ತುವರಿ ತೆರವಿಗೆ ಬಂದ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್

February 4, 2020

ಬೈಲಕುಪ್ಪೆ, ಫೆ.3(ರಾಜೇಶ್)-ಪಿರಿಯಾ ಪಟ್ಟಣ ತಾಲೂಕು ಮುತ್ತಿನಮುಳ್ಳುಸೋಗೆ ಗ್ರಾಮದ ಸರ್ವೇ ನಂ.54ರಿಂದ 65 ವರೆಗಿನ ಕಾವೇರಿ ನದಿ ತೀರದಲ್ಲಿನ ಒತ್ತುವರಿ ಜಮೀನು ತೆರವಿಗೆ ಆಗಮಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಉಚ್ಛ ನ್ಯಾಯಾ ಲಯದ ತಡೆಯಾಜ್ಞೆ ಇರುವುದನ್ನು ಅರಿತು ಬರಿಗೈಯಲ್ಲಿ ವಾಪಸ್ಸಾದರು.

ಕಾವೇರಿ ನದಿ ತೀರ ಪ್ರದೇಶ ಒತ್ತುವರಿ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ಆದೇಶ ದಂತೆ ಶಿರಸ್ತೇದಾರ್ ವಿನೋದ್ ನೇತೃತ್ವದ ತಂಡ ಭಾನುವಾರ ಮುತ್ತಿನಮುಳ್ಳುಸೊಗೆ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿ, ರೈತರ ಜಮೀನುಗಳ ಸರ್ವೇ ಕಾರ್ಯಕ್ಕೆ ಮುಂದಾ ಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ನದಿ ಪ್ರವಾಹದಿಂದ ತಾಲೂ ಕಿನ ಕಣಗಾಲ್‍ನಿಂದ ಕೊಪ್ಪರಾಣಿ ಗೇಟ್ ಅಕ್ಕಪಕ್ಕದ ರೈತರ ಬೆಳೆ ಕೊಚ್ಚಿಹೋಗಿ ಕಂಗಾಲಾಗಿದ್ದಾರೆ. ಇದನ್ನು ಅರಿಯದೆ ಕಂದಾಯ ಅಧಿಕಾರಿಗಳು ಗ್ರಾಮಕ್ಕೆ ಆಗ ಮಿಸಿ ಅಸಹಾಯಕ ರೈತರ ಜಮೀನು ಗಳನ್ನು ಮಾತ್ರ ಸರ್ವೇ ಮಾಡಿಸಿ ತೆರವು ಗೊಳಿಸಲು ಮುಂದಾಗಿದ್ದಾರೆ. ಒತ್ತುವರಿ ತೆರವುಗೊಳಿಸುವುದಾದರೆ ಇಡೀ ತಾಲೂ ಕಿನ ನದಿ ದಡದಲ್ಲಿರುವ ರೈತರ ಜಮೀನು ಗಳ ಸರ್ವೇ ಕಾರ್ಯ ನಡೆಸಲಿ ಎಂದು ರೈತರು ಆಗ್ರಹಿಸಿದರು. ಅಲ್ಲದೆ ಈ ಸಂಬಂಧ ಉಚ್ಛ ನ್ಯಾಯಾಲಯದಿಂದ ನೀಡಿರುವ ತಡೆಯಾಜ್ಞೆ ಪ್ರತಿಯನ್ನು ತೋರಿದರು.

ಇದರಿಂದ ಎಚ್ಚೆತ್ತ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿ ರುಗಿದರು. ಈ ಸಂದರ್ಭದಲ್ಲಿ ಆರ್‍ಐ ನಂದೀಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಸುನೀಲ್, ನವೀನ್, ಪ್ರದೀಪ್, ಬೆಟ್ಟದ ಪುರ ಪೊಲೀಸ್ ಠಾಣಾಧಿಕಾರಿ ಪಿ. ಲೋಕೇಶ್, ಸಿಬ್ಬಂದಿ ಮಂಜು, ರೈತ ಮುಖಂಡರಾದ ಶಿವಕುಮಾರ್, ರವಿ, ಮಂಜುನಾಥ್, ಚಂದ್ರಶೇಖರ್, ಕುಮಾರ್ ಸೇರಿದಂತೆ ಮತ್ತಿತರರಿದ್ದರು.

ನದಿ ದಡದ ಒತ್ತುವರಿ ಜಮೀನು ತೆರವಿಗಾಗಿ ಮುತ್ತಿಮುಳ್ಳುಸೋಗೆಗೆ ಬಂದಿದ್ದು, ಸರ್ವೇ ನಂ.54ರಿಂದ 65ರವರೆಗೆ ಸರ್ವೇ ಕಾರ್ಯ ನಡೆದಿದೆ. ಸರ್ವೇ ನಂ.60ಕ್ಕೆ ಮಾತ್ರ ಉಚ್ಚನ್ಯಾಯಾಲಯದ ತಡೆಯಾಜ್ಞೆ ಇದೆ. ಅದರ ಪ್ರತಿಯನ್ನು ರೈತರು ನಮಗೆ ತಲುಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಯಮಾನುಸಾರ ಕ್ರಮ ಕೈಕೊಳ್ಳಲಾಗುವುದು. – ವಿನೋದ್, ಶಿರಸ್ತೇದಾರ್.

ಮುತ್ತಿನಮುಳ್ಳುಸೋಗೆ ಗ್ರಾಮಕ್ಕೆ ಸೇರಿದ ಸರ್ವೇ ನಂ.54ರಿಂದ 65ರವರೆಗೂ ಕಾವೇರಿ ನದಿ ದಡದ ಜಮೀನಿನ ರೈತರ ಗಮನಕ್ಕೆ ತಾರದೆ ಸರ್ವೇ ನಡೆಸುವ ಮೂಲಕ ತೊಂದರೆ ಕೊಡುತ್ತಿದ್ದಾರೆ. ಸರ್ವೇ ನಂ.60ರ ಜಮೀನುಗಳನ್ನು ತೆರವುಗೊಳಿಸದಂತೆ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಿದೆ. ಆದರೂ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ನಮ್ಮ ಗ್ರಾಮದ ಕೆಲ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಈ ರೀತಿ ತೊಂದರೆ ಕೊಟ್ಟರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ. – ಎಂ.ಎನ್.ಚಂದ್ರಶೇಖರ್, ಜೆಡಿಎಸ್ ಮುಖಂಡ.

Translate »