ಕೆ.ಆರ್.ನಗರ-ಮೈಸೂರು ತಡೆರಹಿತ ಬಸ್ ಸೇವೆಗೆ ಚಾಲನೆ
ಮೈಸೂರು ಗ್ರಾಮಾಂತರ

ಕೆ.ಆರ್.ನಗರ-ಮೈಸೂರು ತಡೆರಹಿತ ಬಸ್ ಸೇವೆಗೆ ಚಾಲನೆ

February 4, 2020

ಹಳ್ಳಿಹಕ್ಕಿ ಸತ್ಯಾಂಶ ಬರೆಯಲಿ ಮಾಜಿ ಸಚಿವ ಎ.ಹೆಚ್.ವಿಶ್ವನಾಥ್ ಬಗ್ಗೆ ಸಾ.ರಾ. ವ್ಯಂಗ್ಯ
ಕೆ.ಆರ್.ನಗರ, ಫೆ.3(ಕೆಟಿಆರ್)-ಹಳ್ಳಿಹಕ್ಕಿ ಪುಸ್ತಕದಲ್ಲಿ ಸತ್ಯಾಂಶ ಬರೆಯಲಿ, ಅದನ್ನು ನಾನೂ ಓದುತ್ತೇನೆ ಎಂದು ಮಾಜಿ ಸಚಿವ, ಶಾಸಕ ಸಾ.ರಾ.ಮಹೇಶ್, ಎ.ಹೆಚ್. ವಿಶ್ವನಾಥ್ ಹೆಸರೇಳದೆ ವ್ಯಂಗ್ಯವಾಡಿದರು.

ಪಟ್ಟಣ ಜನತೆಯ ಬಹುದಿನದ ಬೇಡಿಕೆ ಯಾದ ಕೆ.ಆರ್.ನಗರ-ಮೈಸೂರಿಗೆ ತಡೆರಹಿತ 6 ಬಸ್‍ಗಳ ಸಂಚಾರ ಸೇವೆಗೆ ಚಾಲನೆ ನೀಡಿದ ಅವರು, ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಈ ಹಿಂದೆ ಸಂಗೋಳ್ಳಿ ರಾಯಣ್ಣ ಸಮು ದಾಯ ಭವನ ಉದ್ಘಾಟನೆಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಿದ್ದಾಗ ಕಾಂಗ್ರೆಸ್ ಪಕ್ಷದ ಯಾರೂ ಈ ಹಳ್ಳಿ ಹಕ್ಕಿಯನ್ನು ಕರೆಯದೆ ಕಡೆಗಣಿಸಿದರು. ಆ ವೇಳೆ ಮೈಸೂರು ಎಸ್ಪಿ ಅವರ ಕಾರಿ ನಲ್ಲಿ ಕುಳಿತಿದ್ದ ಅವರನ್ನು ಕಂಡು ಮರುಗಿದ ನಾನು ನನ್ನ ಕಾರಿನಲ್ಲಿ ಅವರನ್ನು ಕಾರ್ಯ ಕ್ರಮಕ್ಕೆ ಕಳುಹಿಸಿದೆ. ಅಲ್ಲದೆ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೊಡನೆ ಮಾತ ನಾಡಿದ್ದರಿಂದ ಪಕ್ಷಕ್ಕೆ ಸೇರಿಸಿಕೊಂಡು ಅವರಿಗೆ ಉನ್ನತ ಸ್ಥಾನ ನೀಡಿ ಗೌರವಿಸ ಲಾಯಿತು. ಇದನ್ನು ಸಹ ಅವರು ಪುಸ್ತಕ ದಲ್ಲಿ ಬರೆಯುವುದನ್ನು ಮರೆಯದಿರಲಿ ಎಂದು ಕುಟುಕಿದರು.

ಬಿಜೆಪಿ ಪೂರ್ಣಾವಧಿ ಪೂರೈಸಲಿ: ವಾಮಮಾರ್ಗದಲ್ಲಿ ಅಧಿಕಾರಕ್ಕೇರಿದ ಬಿಜೆಪಿ ತನ್ನ ಪೂರ್ಣಾವಧಿ ಪೂರೈಸಲಿ ಎಂಬ ನಾಗಮಂಗಲ ಶಾಸಕ ಸುರೇಶ್‍ಗೌಡರ ಹೇಳಿಕೆ ಸಮರ್ಥಿಸಿಕೊಂಡ ಸಾ.ರಾ. ಮಹೇಶ್, ರಾಜ್ಯದಲ್ಲಿ ಅತಿವೃಷ್ಟಿಯಿಂದ ಬಳಲುತ್ತಿರುವ ಸಂತ್ರಸ್ತರ ಬದುಕು ಕಟ್ಟಿ ಕೊಡಲು ಬಿಜೆಪಿ ಸರ್ಕಾರ ಪೂರ್ಣಾವಧಿ ಪೂರೈಸಲಿ ಎಂದು ನಮ್ಮ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿಯವರೇ ಹೇಳಿದ್ದಾರೆ. ಸರ್ಕಾರದ ಅಸ್ಥಿರತೆಯಿಂದ ರಾಜ್ಯದ ಅಭಿ ವೃದ್ಧಿ ಕುಂಠಿತವಾಗುವುದರ ಜೊತೆಗೆ ಪದೇ ಪದೆ ಚುನಾವಣೆಯಿಂದಾಗಿ ರಾಜ್ಯದ ತೆರಿಗೆ ಹಣ ವ್ಯಯವಾಗಲಿದೆ. ಇದರಿಂದ ಜನರಿಗೆ ಆರ್ಥಿಕ ಹೊರೆ ಉಂಟಾಗಬಾರದೆಂಬುದು ಜೆಡಿಎಸ್ ನಿಲುವಾಗಿದೆ ಎಂದರು.

ಕೇಂದ್ರ ಬಜೆಟ್ ಶೂನ್ಯ: ಕೇಂದ್ರದ ವಿತ್ತ ಸಚಿವರು ಶೂನ್ಯ ಬಜೆಟ್ ಮಂಡಿಸಿದ್ದು, ದೇಶದಲ್ಲಿ ಯುವಕರು ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ಬಜೆಟ್‍ನಲ್ಲಿ ಉದ್ಯೋಗ ಸೃಷ್ಟಿಸುವತ್ತ ಗಮನ ಹರಿಸಿಲ್ಲ. ಇದು ರೈತರು ಮತ್ತು ಬಡವರಿಗೆ ಅನುಕೂಲಕರ ಬಜೆಟ್ ಅಲ್ಲ. ಕೇವಲ ಉಳ್ಳವರಿಗಾಗಿ ಮಂಡಿಸಿದ ಬಜೆಟ್. ಮುಂದೆ ರಾಜ್ಯ ಸರ್ಕಾರ ಮಂಡಿಸುವ ಬಜೆಟ್ ಆದರೂ ಜನಸಾಮಾನ್ಯರು, ರೈತರು ಹಾಗೂ ನಿರುದ್ಯೋಗಿಗಳ ಪರ ಇರಲಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ದೇವರಹಳ್ಳಿ ಸೋಮಶೇಖರ್, ನವನಗರ ಬ್ಯಾಂಕ್ ಅಧ್ಯಕ್ಷ ಬಸಂತ್, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಮಧುಚಂದ್ರ, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಪುರಸಭಾ ಸದಸ್ಯರಾದ ಸಂತೋಷ್ ಗೌಡ, ಪ್ರಭುಶಂಕರ್, ಕೆ.ಎಲ್.ಜಗದೀಶ್, ಮಂಜುಳಾ ಚಿಕ್ಕವೀರ್, ಘಟಕ ವ್ಯವಸ್ಥಾಪಕ ಪಾಪಾನಾಯಕ, ಚಾಲಕ ಸುಧಾಕರ್, ಸೈಯಾದ್ ಅಸ್ಲಂ, ಫರೋಖ್, ಅತಿಕ್, ನಾಗೇಶ್ ಸೇರಿದಂತೆ ಇನ್ನಿತರರಿದ್ದರು.

Translate »