ಮೈಸೂರು ವಿವಿ ಆವರಣದಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ
ಮೈಸೂರು

ಮೈಸೂರು ವಿವಿ ಆವರಣದಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ

February 4, 2020

ಮೈಸೂರು, ಫೆ.3(ಎಂಕೆ)- ಮೈಸೂರು ವಿವಿ ಮಾನಸಗಂಗೋತ್ರಿ ಆವರಣದಲ್ಲಿ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ಇ-ಕಾರ್ಟ್ ವಾಹನಗಳ ಸೌಲಭ್ಯ ಒದಗಿಸಿರುವ ಹಿನ್ನೆಲೆ ಪ್ರಾಯೋಗಿಕವಾಗಿ ಖಾಸಗಿ ವಾಹನಗಳನ್ನು ನಿರ್ಬಂಧಿಸಲಾಗಿದೆ.

ಸೋಮವಾರ ಬೆಳಿಗ್ಗೆಯಿಂದಲೇ ಖಾಸಗಿ ವಾಹನಗಳನ್ನು ಮಾಸನಗಂಗೋತ್ರಿ ಆವರಣದೊಳಗೆ ಸಂಚರಿಸದಂತೆ ತಡೆಯಲಾಯಿತು. ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಕುಲಸಚಿವ ಶಿವಪ್ಪ, ವಿದ್ಯಾರ್ಥಿಗಳಿಗೆ ಬ್ಯಾಟರಿ ಚಾಲಿತ ಇ-ಕಾರ್ಟ್ ವಾಹನಗಳ ಪರಿಚಯವನ್ನು ಮಾಡಿಸುವ ದೃಷ್ಟಿಯಿಂದ ಆಟೋ, ಕಾರು ಇನ್ನಿತರೆ ಖಾಸಗಿ ವಾಹನಗಳನ್ನು ಪ್ರಾಯೋಗಾತ್ಮಕವಾಗಿ ತಡೆಯಲಾಯಿತು. ಆದರೆ ಖಾಸಗಿ ವಾಹನಗಳನ್ನು ಕಡ್ಡಾಯವಾಗಿ ನಿರ್ಬಂಧಿಸುವ ಕುರಿತು ಅಂತಿಮ ನಿರ್ಣಯ ಕೈಗೊಂಡಿಲ್ಲ ಎಂದರು.

ವಿದ್ಯಾರ್ಥಿಗಳು ಇ-ಕಾರ್ಟ್ ವಾಹನಗಳಲ್ಲಿ ಒಂದು ಪಾಯಿಂಟ್‍ನಿಂದ ಮತ್ತೊಂದು ಪಾಯಿಂಟ್‍ಗೆ ಪ್ರಯಾಣಿಸಲು ಕೇವಲ 5 ರೂ. ನೀಡಬೇಕಾಗುತ್ತದೆ. ಇದು ಆಟೋ, ಕಾರುಗಳಿಗೆ ಹೋಲಿಸಿದರೆ ಈ ಹಣ ತುಂಬಾ ಕಡಿಮೆ. ವಿದ್ಯಾರ್ಥಿಗಳು ಇ-ಕಾರ್ಟ್ ವಾಹನ ಸೌಲಭ್ಯವನ್ನು ಹೆಚ್ಚಾಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

Translate »