ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 2014-19ರ ಮೊದಲ ಅವಧಿಯ ಆಡಳಿತ ಕಾಲದಲ್ಲಿ ಸಚಿವ ಸಂಪುಟದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಹಲವರು ಮೋದಿ ಅವರ 2ನೇ ಇನ್ನಿಂಗ್ಸ್‍ನಲ್ಲಿ ವಿವಿಧ ಕಾರಣಗಳಿಂದಾಗಿ ದೂರ ಉಳಿಯುವಂತಾ ಗಿದೆ. ಅರುಣ್ ಜೇಟ್ಲಿ ಅವರೇ ಅನಾರೋಗ್ಯದ ಕಾರಣ ನೀಡಿ ಸಂಪುಟ ಸೇರುವುದಿಲ್ಲ ಎಂದು ಮುಂಚಿತವಾಗಿಯೇ ಘೋಷಿಸಿದ್ದರು. ಖುದ್ದು ಪ್ರಧಾನಿ ಮೋದಿ ಅವರೇ ಮನೆಗೆ ಬಂದು ಮನವೊಲಿಸಲೆತ್ನಿಸಿದರೂ ಅವರು ಸದ್ಯಕ್ಕೆ ವಿಶ್ರಾಂತಿ ಅಗತ್ಯವಿದೆ ಎಂದು ಕೈಮುಗಿದಿದ್ದರು. ವಿದೇಶಾಂಗ ವ್ಯವಹಾರಗಳ ಖಾತೆಯಲ್ಲಿ ಪಾಕಿಸ್ತಾನವೂ ಸೇರಿದಂತೆ ದೇಶ-ವಿದೇಶದಲ್ಲೆಲ್ಲ ಅತ್ಯುತ್ತಮ ಹೆಸರು ಮಾಡಿದ್ದ, ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರ ಕರೆಗೆ ಟ್ವಿಟರ್‍ನಲ್ಲಿ ಕ್ಷಿಪ್ರಗತಿಯಲ್ಲಿ ಸ್ಪಂದಿಸುತ್ತಿದ್ದ, ದಿನದ ಯಾವುದೇ ಕಾಲದಲ್ಲಾದರೂ ಸಹಾಯಹಸ್ತ ಚಾಚುತ್ತಾ ಕೋಟ್ಯಂತರ ಮಂದಿಗೆ ಅಚ್ಚುಮೆಚ್ಚಿನವರಾ ಗಿದ್ದ ಸುಷ್ಮಾ ಸ್ವರಾಜ್ ಅವರ ಆರೋಗ್ಯವೂ ಈಗ ಮೊದಲಿನಂತಿಲ್ಲ. ಹಾಗಾಗಿ ಅವರಿಗೂ ಈ ಬಾರಿ ವಿಶ್ರಾಂತಿ ನೀಡಲಾಗಿದೆ. ಬಹುಶಃ ವಿದೇಶಾಂಗ ವ್ಯವಹಾರಗಳ ಹೊಣೆಗಾರಿಕೆ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಜೈಶಂಕರ್ ಅವರ ಹೆಗಲಿಗೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಉಳಿದಂತೆ ಪ್ರಾಣಿ ಪ್ರಿಯೆ ಮೇನಕಾ ಗಾಂಧಿ(ಸ್ಪೀಕರ್ ಆಗುವ ಸಾಧ್ಯತೆ ಇದೆ), ನಮಾಮಿ ಗಂಗೆಯ ಉಮಾ ಭಾರತಿ, ಕ್ರೀಡಾ ಕ್ಷೇತ್ರದ ರಾಜ್ಯವರ್ಧನ್ ಸಿಂಗ್ ರಾಥೋಡ್, ರೈಲ್ವೆಯಿಂದ ಹೊರನಡೆದಿದ್ದ ಸುರೇಶ್ ಪ್ರಭು, ಕೃಷಿಯ ರಾಧಾಮೋಹನ್ ಸಿಂಗ್, ಕೇರಳದ ಕೆ.ಜೆ.ಅಲ್ಫೋನ್ಸ್, ಯಶವಂತ್ ಸಿನ್ಹಾ ಪುತ್ರ ಜಯಂತ್ ಸಿನ್ಹಾ, ಜೆ.ಪಿ.ನಡ್ಡಾ (ಇವರ ಹೆಸರು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದೆ), ವಿಜಯ್ ಗೋಯಲ್ ಈ ಬಾರಿ ಮೋದಿ ಸಂಪುಟದಿಂದ ಹೊರಗಿದ್ದಾರೆ.
