ದೇಶದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಚಿಂತಿಸಬೇಕು ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಅಭಿಮತ
ಮೈಸೂರು

ದೇಶದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಚಿಂತಿಸಬೇಕು ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಅಭಿಮತ

December 19, 2019

ಮೈಸೂರು, ಡಿ.18(ಎಸ್‍ಪಿಎನ್)- ದೇಹದ ಒಂದು ಭಾಗ ಅಭಿವೃದ್ಧಿಯಾಗಿ ಇತರೆ ಭಾಗಗಳು ಊನವಾಗಿದ್ದರೆ ಅದು ದೇಹದ ಪರಿಪೂರ್ಣತೆ ಎಂದಾಗುವುದು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ ದೇಶದ ಒಂದು ಭಾಗ ಅಭಿವೃದ್ಧಿಗೊಂಡು ಮಿಕ್ಕ ಪ್ರದೇಶಗಳು ಅಭಿವೃದ್ಧಿಯಿಂದ ವಂಚಿತ ವಾಗಿದ್ದರೆ, ಅಂತಹ ಆಡಳಿತವನ್ನು ರೋಗಗ್ರಸ್ತ ಎನ್ನಬಹುದು ಎಂದು ಪೇಜಾವರ ಅಧೋಕ್ಷಜ ಮಠದ ಕಿರಿಯ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟರು.

ಮೈಸೂರಿನ ಸರಸ್ವತಿಪುರಂ ವಿಜಯವಿಠ್ಠಲ ವಿದ್ಯಾಶಾಲಾ ಆವರಣದಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಆಧುನಿಕ ಯುಗದಲ್ಲಿ ಪ್ರತಿಭೆಗಳಿಗೆ ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಮನ್ನಣೆ ಸಿಗಲಿದೆ ಎಂದು ನಾಸಾ ವಿಜ್ಞಾನಿಯ ಘಟನೆ ಯೊಂದನ್ನು ಉದಾಹರಣೆಯಾಗಿ ನೀಡಿದರು.

ಒಂದು ಸಮುದಾಯದ ಸುಖಕ್ಕಾಗಿ ಇತರೆ ಸಮದಾಯಗಳ ಸುಖವನ್ನು ಕಸಿಯುವುದು ಎಷ್ಟು ಸರಿ?. ಇದು ರಾವಣನ ಮನಸ್ಥಿತಿ ಎಂಬಂತಾ ಗುತ್ತದೆ. ನಮ್ಮನ್ನಾಳುವ ಸರ್ಕಾರಗಳು ಅಭಿವೃದ್ಧಿ ವಿಷಯದಲ್ಲಿ ಕೇವಲ ಒಂದು ಸಮುದಾಯವನ್ನು ಕೇಂದ್ರವಾಗಿಟ್ಟುಕೊಂಡು ಚರ್ಚಿಸುತ್ತವೆ. ಇದರಿಂದ ಇತರೆ ಸಮುದಾಯಗಳಿಗಾಗುವ ನೋವು ಆಡಳಿತ ವರ್ಗಕ್ಕೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ದೇಶದ ಸಾಮಾಜಿಕ ವಿಷಯಗಳ ಬಗ್ಗೆ ಅವಲೋಕಿಸಿ ಹೇಳುವುದಾದರೆ, ಮಕ್ಕಳಿಗೆ ಕಠಿಣ ಪರಿಶ್ರಮದಿಂದ ಜೀವನ ಕಟ್ಟಿಕೊಳ್ಳುವ ಸಂದೇಶ ಶಿಕ್ಷಕ ರಿಂದ ರವಾನೆಯಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಬಗ್ಗೆ ಶಿಕ್ಷಕರು, ಪೋಷಕರು ಚಿಂತಿಸ ಬೇಕು. ವಿಜಯ ವಿಠ್ಠಲ ವಿದ್ಯಾಸಂಸ್ಥೆಯ ಶಿಕ್ಷಕರು ಮಕ್ಕಳ ಭವಿಷ್ಯಕ್ಕಾಗಿ, ದೇಶದ ಪ್ರಗತಿಗಾಗಿ ಶ್ರಮಿಸು ತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಹಿರಿಯ ಸಾಹಿತಿ ಪ್ರಧಾನ ಗುರುದತ್ತ ಮಾತನಾಡಿ, ಇಂದಿನ ಮಕ್ಕಳು ತಮ್ಮ ನೆಚ್ಚಿನ ಗುರುಗಳನ್ನು ಸದಾ ನೆನಪಿಸಿಕೊಳ್ಳಬೇಕು. ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ಸಾಧನೆ ಮತ್ತು ಜೀವನದ ಗುರಿ ತಲುಪಿಸಲು ಶಿಕ್ಷಕರ ಮಾರ್ಗದರ್ಶನ ಅತೀಮುಖ್ಯ. ಮಕ್ಕಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳ ಬೇಕಾದರೆ, ಶಿಕ್ಷಕರು ಮತ್ತು ಪೋಷಕರ ಕಣ್ಗಾ ವಲು ಅತೀಮುಖ್ಯ ಎಂದು ಸಲಹೆ ನೀಡಿದರು.

ಇಂದಿನ ಮಕ್ಕಳು ಒಂದೊಂದು ದೃಶ್ಯ ಮಾಧ್ಯಮ ಗಳಲ್ಲಿ ಭಿತ್ತರವಾಗುವ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಅಲ್ಲಿ ವ್ಯಕ್ತವಾಗುವ ಗೊಂದಲ ಗಳಿಂದ ಮಕ್ಕಳು ತಮ್ಮ ಮನಸಿನಲ್ಲಿ ಗೊಂದಲ ಸೃಷ್ಟಿಸಿ ಕೊಳ್ಳುತ್ತಿದ್ದಾರೆ. ಇಂತಹ ಮಕ್ಕಳಿಗೆ ಪೋಷಕರು ಮತ್ತು ಶಿಕ್ಷಕರ ಹೆಚ್ಚಿನ ಮಾರ್ಗದರ್ಶನ ಮಾಡಬೇಕು. ಅಂತೆಯೇ ವಿದ್ಯಾರ್ಥಿ ದಿಸೆಯಿಂದಲೇ ಸಾಮಾಜಿಕ ಆಗು-ಹೋಗುಗಳ ಬಗ್ಗೆ ಪರಿಚಯಿಸಿ, ಮಕ್ಕಳಿಗೆ ಉತ್ತಮ ಗುಣಗಳನ್ನು ಬೆಳೆಸುವ ಪ್ರವೃತ್ತಿ ಶಿಕ್ಷಕರು ಮತ್ತು ಪೋಷಕರಿಂದಾಗಬೇಕು ಎಂದರು.

ಇದೇ ವೇಳೆ ಎಸ್‍ಎಸ್‍ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹೆಚ್.ಕೆ.ತೇಜಸ್(623), ನಿರಂತರ ದಿನೇಶ್(622), ಎಸ್.ಸಿಂಚನ(620) ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಜ್ಞಾನ ವಿಭಾಗದ ಅಜಿತ್‍ಕುಮಾರ್ (588), ವಾಣಿಜ್ಯ ವಿಭಾಗದ ವರುಣ್ ನಾಯಕ್ (581) ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ವಿಜಯ ವಿಠ್ಠಲ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ವಾಸುದೇವಭಟ್, ಪ್ರಾಂಶುಪಾಲರಾದ ಎಸ್.ಪಿ.ಆಶಾ ಹಾಗೂ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Translate »