ಗ್ರಾಮೀಣ ಕಲಾವಿದರಿಂದ ಮಾತ್ರ ನೈಜಕಲೆ ಕಾಣಲು ಸಾಧ್ಯ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ
ಮೈಸೂರು

ಗ್ರಾಮೀಣ ಕಲಾವಿದರಿಂದ ಮಾತ್ರ ನೈಜಕಲೆ ಕಾಣಲು ಸಾಧ್ಯ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

August 28, 2018

ಭಾರತೀನಗರ:  ಗ್ರಾಮೀಣ ಭಾಗದಲ್ಲಿ ಬಣ್ಣಹಚ್ಚಿ ನಾಟಕ ಪ್ರದರ್ಶನ ನೀಡುವ ಕಲಾವಿದರಿಂದ ಮಾತ್ರ ನೈಜ ಕಲೆ ಕಾಣಲು ಸಾಧ್ಯ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಇಲ್ಲಿನ ಕೇಂಬ್ರಿಡ್ಜ್ ಶಾಲಾವರಣದಲ್ಲಿ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘ, ರಂಗಭೂಮಿ ಚಾರಿಟಬಲ್ ಸೇವಾ ಟ್ರಸ್ಟ್, ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ ದಕ್ಷಯಜ್ಞ ಪೌರಾಣಿಕ ನಾಟಕ ಪ್ರದರ್ಶನದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಎಷ್ಟೇ ದೊಡ್ಡ ವ್ಯಕ್ತಿಗಳಾದರೂ, ಅಹಂಕಾರ ಪಡಬಾರದು. ಅಹಂಕಾರ ಪಟ್ಟರೆ ಸರ್ವನಾಶವಾಗುತ್ತಾರೆ ಎಂಬುವುದಕ್ಕೆ ಈ ದಕ್ಷಯಜ್ಞ ನಾಟಕವೇ ಉದಾಹರಣೆ. ಆದ್ದರಿಂದ ಪ್ರತಿಯೊಬ್ಬರು ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಪೂರಕವಾದ ಕೆಲಸಗಳಲ್ಲಿ ತೊಡಗಿ ಉತ್ತಮ ಪ್ರಜೆಯಾಗಿ ಬದುಕಬೇಕೆಂದರು.

ಭೂಮಿ ಮೇಲಿರುವ ಎಲ್ಲಾ ಜೀವರಾಶಿಗಳ ಆಸೆಯನ್ನು ಭೂತಾಯಿ ಈಡೇರಿಸುತ್ತಾಳೆ. ಆದರೆ ದುರಾಸೆ ಈಡೇರೆಸುವುದಿಲ್ಲ. ಪ್ರಸ್ತುತ ಮಾನವ ತನ್ನ ದುರಾಸೆಯಿಂದ ಪ್ರಾಕೃತಿಕ ಸಂಪತ್ತನ್ನು ನಾಶಗೊಳಿಸುತ್ತಿರುವುದಕ್ಕೆ ಇತ್ತೀಚಿಗೆ ಕೊಡಗು ಮತ್ತು ಕೇರಳದಲ್ಲಿ ನಡೆದ ಪ್ರಕೃತಿ ವಿಕೋಪಗಳೇ ಸಾಕ್ಷಿ ಎಂದು ತಿಳಿಸಿದರು.

ನಾಟಕ ಕಲಾವಿದರು ಹಣ ಮಾಡಲು ಸಾಧ್ಯವಿಲ್ಲ ಬದಲಿಗೆ ಸಂಸ್ಕøತಿ ಉಳಿಸಿ ಬೆಳೆಸಬಹುದು. ಪ್ರಸ್ತುತ ಟಿವಿಯಲ್ಲಿ ಬರುವಂತಹ ಧಾರವಾಹಿಗಳಿಂದ ಸಂಸ್ಕøತಿಗಳು ನಾಶಗೊಳ್ಳುತ್ತಿದೆ. ರಂಗ ಕಲೆಗೆ ಬೆಲೆ ಇಲ್ಲದಂತಾಗಿದೆ ಎಂದರು.ನಾಟಕ ಪ್ರದರ್ಶನಗಳು ನಮ್ಮ ಜೀವನ ಹೇಗಿರಬೇಕೆಂಬುದನ್ನು ತೋರಿಸಿ ಕೊಡುತ್ತದೆ. ಆದರೆ ಪ್ರಸ್ತುತ ಧಾರವಾಹಿಗಳಲ್ಲಿ ಕುಟುಂಬ ಒಡೆಯುವಂತಹ ದೃಶ್ಯಗಳು ಹೆಚ್ಚಾಗಿವೆ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಶಿವಶಂಕರ್, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಶಂಕರೇಗೌಡ, ಪರಿಸರ ಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಅಣ್ಣೂರು ಸತೀಸ್, ಚಿಕ್ಕತಿಮ್ಮೇಗೌಡ, ವೆಂಕಟೇಶ್, ಕೆ.ಟಿ.ಸುರೇಶ್, ಶಂಕರ, ಆನಂದ್, ಉಮೇಶ್, ಪುಟ್ಟಸ್ವಾಮಿ, ದೇಶಿಗೌಡ, ಬಸವರಾಜು, ಸೋಮಸುಂದರ್ ಸೇರಿದಂತೆ ಇತರರಿದ್ದರು.

Translate »