ರಾಹುಲ್ ಗಾಂಧಿ ಹುಡುಗಾಟದ ಹುಡುಗ: ಆರ್.ಅಶೋಕ್
ಮಂಡ್ಯ

ರಾಹುಲ್ ಗಾಂಧಿ ಹುಡುಗಾಟದ ಹುಡುಗ: ಆರ್.ಅಶೋಕ್

August 28, 2018

ಮಂಡ್ಯ: ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ ಕೆಡವಲು ನಾವೇನು ಬೇಕಿಲ್ಲ. ಕಾಂಗ್ರೆಸ್ ನೊಳಗಿನ ಅತೃಪ್ತ ಆತ್ಮಗಳೇ ಸಾಕು ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇರೋದು ಎಡಬಿಡಂಗಿ ಸರ್ಕಾರ, ಎರಡು ನಾಲಿಗೆ ಸರ್ಕಾರ. ಒಂದು ಕಾಂಗ್ರೆಸ್, ಇನ್ನೊಂದು ಜೆಡಿಎಸ್ ನಾಲಿಗೆ. ಈ ಸರ್ಕಾರ ಗೋಮುಖ ವ್ಯಾಘ್ರವಾಗಿದೆ. ಕಾಂಗ್ರೆಸ್‍ನ ಇನ್ನೊಂದು ಮುಖ ಪರಿಚಯ ಮಾಡಿಕೊಡುತ್ತಿದೆ ಎಂದು ಲೇವಡಿ ಮಾಡಿದರು.

ರಾಜ್ಯ ಸರ್ಕಾರವನ್ನು ಕೆಡವಲು ಕಾಂಗ್ರೆಸ್‍ನ ಅತೃಪ್ತ ಆತ್ಮಗಳೇ ಸಾಕು. ಹಾಗಂತ ನಾವೇನು ಸನ್ಯಾಸಿಗಳಲ್ಲ. ನಮಗೂ ರಾಜ್ಯದ ಅಭಿವೃದ್ಧಿಯ ಕನಸಿದೆ. ನಮಗೂ ಅಧಿಕಾರ ಬೇಕು. 38 ಸ್ಥಾನ ಪಡೆದ ಜೆಡಿಎಸ್ ಅಧಿಕಾರ ನಡೆಸುತ್ತೆ ಅನ್ನುವುದಾದರೆ ನೂರಕ್ಕೂ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಏಕೆ ಆಡಳಿತ ನಡೆಸಬಾರದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಹುಲ್ ಹುಡುಗಾಟದ ಹುಡುಗ: ರಾಹುಲ್‍ಗಾಂಧಿ ಒಬ್ಬ ಹುಡುಗಾಟದ ಹುಡುಗ. ಆತನಿಗೆ ಇನ್ನು ತಿಳುವಳಿಕೆ ಇಲ್ಲ. ಏನು ಮಾತನಾಡುತ್ತಿದ್ದೇನೆ ಎಂಬುದೇ ಗೊತ್ತಾಗುತ್ತಿಲ್ಲ. ವಿದೇಶಕ್ಕೆ ಹೋಗಿ ನಮ್ಮ ದೇಶದ ಮಾನ ಹರಾಜು ಹಾಕಿದ್ದಾರೆ ಎಂದು ಅವರು ಕಿಡಿಕಾರಿದರು.

ಅವರ ಮನೆತನದಿಂದಷ್ಟೇ ಅವರಿಗೆ ಗೌರವ ಸಿಕ್ಕಿದೆ. ಆದರೆ ಅವರು ಮನೆತನವನ್ನು ಮರೆತು ಮಾತನಾಡುತ್ತಿದ್ದಾರೆ. ಹೀಗಾಗಿ ರಾಹುಲ್ ಒಬ್ಬ ಹುಡುಗಾಟದ ಹುಡುಗ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲಾ ಎಂದು ಹೇಳಿದರು.

ರಕ್ಷಣಾ ಇಲಾಖೆಯಲ್ಲಿನ ರಫೆಲ್ ಖರೀದಿ ಅವ್ಯವಹಾರ ಆರೋಪ ನಿರಾಧಾರವಾದುದು. ಅದು ಎರಡು ದೇಶಗಳ ನಡುವೆ ನಡೆದಿರುವ ಒಪ್ಪಂದ. ಅಂದಿನ ಕಾಂಗ್ರೆಸ್ ಸರ್ಕಾರವೇ ಈ ಒಪ್ಪಂದಕ್ಕೆ ಸಹಿ ಹಾಕಿದೆ. ಎರಡೂ ರಾಷ್ಟ್ರಗಳ ಪ್ರಧಾನಿಗಳು, ರಕ್ಷಣಾ ಸಚಿವರು ಸಹಿ ಹಾಕಿದ್ದಾರೆ. ಕಳೆದ 5 ವರ್ಷದಲ್ಲಿ ನರೇಂದ್ರ ಮೋದಿ ಕಪ್ಪುಚುಕ್ಕೆ ಇಲ್ಲದೇ ಆಡಳಿತ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, 2ಜಿ ಹಗರಣ, ಕಲ್ಲಿದ್ದಲು ಖರೀದಿ ಹಗರಣದಿಂದ ಹಲವು ಮಂದಿ ಜೈಲಿಗೆ ಹೋಗಿದ್ದಾರೆ. ಆದರೆ ಬಿಜೆಪಿ ಪಾರದರ್ಶಕ ಆಡಳಿತ ನೀಡಿದೆ. ಇದನ್ನು ಸಹಿಸಲಾರದೇ ಕ್ಷುಲ್ಲಕ ಹೇಳಿಕ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಸಮ್ಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿರುತ್ತೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಅವಧಿ ಮುಗಿಯುವ ಮುನ್ನವೇ ಈ ನಿಮ್ಮ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಲ್ಲವೇ ಮಡಿಕೆ ಹೊಡೆದು ಹಾಕಿದ್ದು? ಕಾಂಗ್ರೆಸ್ಸಿನದ್ದು ಮಡಿಕೆ ರಾಜಕಾರಣ ಎನ್ನುವುದು ಈಗಾಗಲೇ ಗೊತ್ತಾಗಿದೆ. ಮಡಿಕೆ ಕುಡಿಕೆ ರಾಜಕಾರಣ ನಮಗೆ ಬೇಡ. ನಾವು ಅಂತಹ ರಾಜಕೀಯ ಮಾಡೋದಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯದಲ್ಲೇ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಲಂಡನ್‍ಗೆ ತೆರಳುತ್ತಿದ್ದಂತೆಯೇ ಇತ್ತ ರಾಜ್ಯದಲ್ಲಿ ಆಂತರಿಕ ಕಚ್ಚಾಟ ಭುಗಿಲೇದ್ದು, ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಅವರು ಹೊಸ ಬಾಂಬ್ ಸಿಡಿಸಿದರು.

Translate »