ಕುಶಾಲನಗರ: ನೆರೆಪ್ರವಾಹದಿಂದ ಮುಳು ಗಡೆಯಾಗಿರುವ ವಸತಿ ಪ್ರದೇಶಗಳಿಗೆ ಭಾನುವಾರ ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಪಟ್ಟಣದ ಸಾಯಿ ಬಡಾವಣೆ, ಕುವೆಂಪು ಬಡಾವಣೆ ಗಳಿಗೆ ಅಧಿಕಾರಿಗಳು ಹಾಗೂ ಪಕ್ಷದ ಇತರೆ ನಾಯಕ ರೊಂದಿಗೆ ಭೇಟಿ ನೀಡಿದ್ದ ಯಡಿಯೂರಪ್ಪ, ನೆರೆಪ್ರವಾಹ ದಿಂದ ಉಂಟಾಗಿರುವ ಅಪಾರ ಆಸ್ತಿಪಾಸ್ತಿ ಹಾನಿ ಬಗ್ಗೆ, ಪರಿಹಾರ ಕ್ರಮಗಳು, ಸಂತ್ರಸ್ತರ ಆಶ್ರಯ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಕೊಡವ ಸಮಾಜ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಬಗ್ಗೆ ಖುದ್ದು ಯಡಿಯೂರಪ್ಪ ಪರಿಶೀಲಿಸಿದರು. ಈ ಸಂದರ್ಭ ಲೋಕಸಭಾ ಸದಸ್ಯರಾದ ಶೋಭಾ ಕರದ್ಲಾಂಜೆ ಹಾಗೂ ಪ್ರತಾಪ್ ಸಿಂಹ ಅವರು ಯಡಿಯೂರಪ್ಪ ಅವರಿಗೆ ಸಾಥ್ ನೀಡಿದರು.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭೇಟಿ: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಗೌಡ ಸಮಾಜದಲ್ಲಿ ಸಂತ್ರಸ್ತರಿಗಾಗಿ ತೆರೆದಿರುವ ಗಂಜಿ ಕೇಂದ್ರಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು. ನೆರೆ ಪ್ರವಾಹಕ್ಕೆ ಸಿಲುಕಿ ತಮ್ಮ ನೆಲೆ ಕಳೆದುಕೊಂಡು ಗಂಜಿ ಕೇಂದ್ರ ಸೇರಿರುವ ಸಂತ್ರಸ್ತರು ಸಚಿವರ ಮುಂದೆ ತಮ್ಮ ನೋವನ್ನು ತೋಡಿಕೊಂಡು ನಮ್ಮನ್ನು ಕಾಪಾಡಿ ಎಂದು ಮೊರೆಯಿಟ್ಟರು.