ಹಾಸನ ಮಾದರಿ ಜಿಲ್ಲೆಯಾಗಿಸುವುದೇ ನಮ್ಮ ಗುರಿ: ಸಚಿವ ಹೆಚ್.ಡಿ.ರೇವಣ್ಣ
ಹಾಸನ

ಹಾಸನ ಮಾದರಿ ಜಿಲ್ಲೆಯಾಗಿಸುವುದೇ ನಮ್ಮ ಗುರಿ: ಸಚಿವ ಹೆಚ್.ಡಿ.ರೇವಣ್ಣ

August 2, 2018

ಹಾಸನ: ಸರ್ವಾಂಗೀಣ ಅಭಿವೃದ್ಧಿ ಮೂಲಕ ಹಾಸನವನ್ನು ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿಸುವುದು ತಮ್ಮ ಗುರಿಯಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು.

ಶ್ರವಣಬೆಳಗೊಳದ ಮಠದಲ್ಲಿಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗೆ ಗೌರವ ಸರ್ಮಪಿಸಿ ಮಾತನಾಡಿದ ಸಚಿವರು, ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲಾ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಶ್ರವಣಬೆಳಗೊಳದಲ್ಲಿ ಬಾಕಿ ಇರುವ 60 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು, ರಾಜ್ಯದಲ್ಲಿ 37 ಸಾವಿರ ಕೋಟಿ ರೂ. ವೆಚ್ಚದಲ್ಲಿ 4,000 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ ಎಂದ ಸಚಿವರು, ಬೆಂಗಳೂರು- ಮೈಸೂರು ರಸ್ತೆ ನಿರ್ಮಾಣಕ್ಕೆ 6 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ರಸ್ತೆ ವಿಸ್ತೀರ್ಣದ ವೇಳೆ ಹಾನಿಗೀಡಾಗುವ ಮನೆಗಳಿಗೆ ಸೂಕ್ತ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದರು.

ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿರುವ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‍ಗಳಲ್ಲಿ ಸಾಲಮನ್ನಾ ಮಾಡಿದ್ದಾರೆ. ಎಲ್ಲಾ ಜಿಲ್ಲೆಯ ರೈತರು ಇದರ ಅನುಕೂಲ ಪಡೆದಿದ್ದಾರೆ ಎಂದರು.

ನಮ್ಮ ರಾಜ್ಯ ಅಖಂಡ ಕರ್ನಾಟಕ. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಬೆಳಗಾವಿಯಲ್ಲಿ ಸುರ್ವಣ ಸೌಧ ನಿರ್ಮಾಣ, ಕೃಷ್ಣಾ ನೀರಾವರಿ ಯೋಜನೆಗೆ ಹೆಚ್ಚಿನ ಅರ್ಥಿಕ ನೆರವು ನೀಡುವಲ್ಲಿ ಹೆಚ್.ಡಿ.ದೇವೇಗೌಡರು ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರ ಪಾತ್ರ ದೊಡ್ಡದು ಎಂದು ಸಚಿವರು ತಿಳಿಸಿದರು.

ಶ್ರವಣಬೆಳಗೊಳ ಮಠದ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಆಶೀರ್ವಚನ ನೀಡಿ, ಶ್ರವಣಬೆಳಗೊಳದ ಅಭಿವೃದ್ಧಿಗೆ ಹೆಚ್.ಡಿ. ದೇವೇಗೌಡರು ಹಾಗೂ ಹೆಚ್.ಡಿ. ರೇವಣ್ಣ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ಜಿಪಂ ಸದಸ್ಯರಾದ ಮಮತಾ ರಮೇಶ್, ಗ್ರಾಪಂ ಅಧ್ಯಕ್ಷೆ ಹೇಮಾ ಪ್ರಕಾಶ್ ಹಾಜರಿದ್ದರು.

Translate »